ಭೂ ಸ್ವಾಧೀನಕ್ಕೆ ಬಿಡಲ್ಲ: ರೈತರಿಗೆ ಗೊಂದಲ ಬೇಡ

KannadaprabhaNewsNetwork |  
Published : Dec 08, 2024, 01:16 AM IST
ಫೋಟೋ: 7 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ನಂದಗುಡಿ-ಸೂಲಿಬೆಲೆ ಹೋಬಳಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ಕೈಬೀಡುವಂತೆ ಸರಕಾರಕ್ಕೆ ಒತ್ತಾಯಿಸಿ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ನಂದಗುಡಿ-ಸೂಲಿಬೆಲೆ ಭಾಗದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ, ರೈತರು ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಬೇಡಿ ಎಂದು ಶಾಸಕ ಶರತ್ ಬಚ್ಚೇಗೌಡ ರೈತರಿಗೆ ಭರವಸೆ ನೀಡಿದರು.

ಹೊಸಕೋಟೆ: ತಾಲೂಕಿನ ನಂದಗುಡಿ-ಸೂಲಿಬೆಲೆ ಭಾಗದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ, ರೈತರು ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಬೇಡಿ ಎಂದು ಶಾಸಕ ಶರತ್ ಬಚ್ಚೇಗೌಡ ರೈತರಿಗೆ ಭರವಸೆ ನೀಡಿದರು.

ತಾಲೂಕಿನ ನಂದಗುಡಿಯ ಶ್ರೀ ಕಾಡು ಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದ ಶಾಸಕರು, ಬೆಂಗಳೂರಿನ ಸುತ್ತಮುತ್ತ 5 ಭಾಗಗಳಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಮೊದಲು ಮಾಗಡಿ ಭಾಗದಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಆ ಭಾಗ ಗುಡ್ಡಗಾಡು ಪ್ರದೇಶವಾಗಿದೆ. ಅಲ್ಲಿನ ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ. ನೆಲಮಂಗಲ ಭಾಗದಲ್ಲಿ 18 ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀಲನಕ್ಷೆ ಸಿದ್ದವಾಗುತ್ತಿದೆ. ಎಸ್‌ಟಿಆರ್ ರಸ್ತೆ ವಿಸ್ತರಿಸಿ ದಾಬಸ್‌ಪೇಟೆಯಿಂದ ಲಿಂಕ್ ಮಾಡಲು ಯೋಜನೆ ತಯಾರಾಗಿದೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ವಲಯದಲ್ಲಿ ೨ ಸಾವಿರ ಎಕರೆಯಲ್ಲಿ ಬೆಂಗಳೂರಿಗೆ ಮಾದರಿ ಅವಳಿ ನಗರ ಟ್ವಿನ್ ಸಿಟಿ ನಿರ್ಮಾಣಕ್ಕೆ ಸರ್ಕಾರ ಚಾಲನೆ ನೀಡಿದೆ ಎಂದು ವಿವರಿಸಿದರು.ಆದರೆ ನಂದಗುಡಿ-ಸೂಲಿಬೆಲೆ ಪ್ರದೇಶ ಕೃಷಿಯೇ ಪ್ರಧಾನ. ಈ ಭಾಗದಲ್ಲಿ ಕೃಷಿ ಭೂಮಿಯೇ ರೈತರ ಜೀವಾಳ. ಹಾಗಾಗಿ ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯಲ್ಲಿ ಟೌನ್‌ಶಿಪ್‌ ನಿರ್ಮಾಣಕ್ಕೆ ನನ್ನ ಸಹಮತವಿಲ್ಲ. ಸರಕಾರದ ಮಟ್ಟದಲ್ಲಿ ಮಾಗಡಿ ಭಾಗಕ್ಕೆ ಮೊದಲ ಆದ್ಯತೆಯಾಗಿದೆ. ನಂದಗುಡಿ ಭಾಗದ ಭೂ ಸ್ವಾಧೀನ ಪ್ರಕ್ರಿಯೆ ಕೊನೆಯಲ್ಲಿದೆ. ಸದ್ಯದ ಮಟ್ಟಿಗಂತೂ ಇದರ ಪ್ರಸ್ತಾವನೆ ಇಲ್ಲ. ನಾನು ನಿಮ್ಮೊಂದಿಗೆ ಇರುತ್ತೇನೆ. ಯಾವುದೇ ಕಾರಣಕ್ಕೂ ತಾವ್ಯಾರು ಗೊಂದಲಕ್ಕೆ ಒಳಗಾಗಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.

ಹೋರಾಟಕ್ಕೂ ಸಿದ್ದ:

ನಂದಗುಡಿ ಭಾಗದ 36 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕಡೇ ಸ್ಥಾನದಲ್ಲಿರುವಂತೆ ಸರಕಾರದ ಮಟ್ಟದಲ್ಲಿ ಕಾಳಜಿ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ನಂದಗುಡಿ ಭಾಗದ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅಗತ್ಯ ಬಿದ್ದರೆ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಭಾಗಿಯಾಗುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಟ್ಟಂಸದ್ರ ಬಿ.ಗೋಪಾಲ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ರಾಜಶೇಖರಗೌಡ, ಉದ್ಯಮಿ ನಾರಾಯಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿ ಐ.ಸಿ.ಮುನಿಶಾಮಗೌಡ ಸೇರಿದಂತೆ ಹೋರಾಟ ಸಮಿತಿ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬಾಕ್ಸ್ ...............ಈ ಶರತ್ ಬಚ್ಚೇಗೌಡ ಮಾರಾಟದ ವಸ್ತುವಲ್ಲ

ಶರತ್ ಬಚ್ಚೇಗೌಡ ಆದ ನಾನು ಮಾರಾಟದ ವಸ್ತುವಲ್ಲ, ನನ್ನ ಸ್ವಾಭಿಮಾನ ಕೊಂಡುಕೊಳ್ಳುವಷ್ಟು ದುಡ್ಡು ಯಾರ ಬಳಿಯೂ ಇಲ್ಲ. ನಾನು ಮಾರಾಟದ ವಸ್ತುವಾಗಿದ್ದರೆ 2019ರಲ್ಲೇ ಮಾರಾಟವಾಗುತ್ತಿದ್ದೆ. ಭೂ ಸ್ವಾಧೀನ ಒಪ್ಪಿಗೆಯಿಂದ ನನಗೆ 2 ಸಾವಿರ ಕೋಟಿ ಕಮಿಷನ್ ನಮ್ಮ ಮನೆಗೆ ಬಂದಿಲ್ಲ. ನಾನು ದುಡ್ಡಿಗೆ ಮಾರಾಟ ಆಗುವ ಸರಕಲ್ಲ. ನಮ್ಮ ಕುಟುಂಬ 40-50 ವರ್ಷಗಳಿಂದ ಹೊಸಕೋಟೆ ತಾಲೂಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಆ ಬಾಂಧವ್ಯ ನಮಗೆ ಮುಖ್ಯ. ಅದನ್ನು ಉಳಿಸಿಕೊಳ್ಳುತ್ತೇವೆಯೇ ಹೊರತು ಮಾರಿಕೊಳ್ಳುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಆಶೀರ್ವಾದದಿಂದ 139 ಸ್ಥಾನ ಗಳಿಸಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರೈತರ ಪರವಾಗಿದ್ದಾರೆ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ರಾಜ್ಯ ರೈತರ ಹಿತಾಸಕ್ತಿ ವಿರುದ್ಧವಾಗಿ ಯಾವುದೇ ಕೆಲಸಕ್ಕೂ ನಾವು ಮುಂದಾಗುವುದಿಲ್ಲ. 2028ರ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಮೀಸಲಾತಿ ಬದಲಾಗುವುದಿಲ್ಲ. ನಾನು ಯಾವುದೇ ಕ್ಷೇತ್ರಕ್ಕೂ ಪಲಾಯನ ಮಾಡುವುದಿಲ್ಲ. ರೈತರು ಊಹಾಪೋಹಾಗಳಿಗೆ ಕಿವಿಗೊಡಬಾರದು. ನಂದಗುಡಿ ಭಾಗದ 36 ಹಳ್ಳಿಗಳ ಭೂ ಸ್ವಾಧೀನಕ್ಕೆ ನಾನು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ರೈತರಿಗೆ ಭರವಸೆ ನೀಡಿದರು.

ಫೋಟೋ: 7 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ನಂದಗುಡಿ-ಸೂಲಿಬೆಲೆ ಹೋಬಳಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು, ಪದಾಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಶಾಸಕ ಶರತ್ ಬಚ್ಚೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ