ಸಮಾನತೆ ಇಲ್ಲದ ಯಾವುದೇ ಉಪನ್ಯಾಸಕ್ಕೂ ಅರ್ಥವಿಲ್ಲ

KannadaprabhaNewsNetwork |  
Published : Dec 03, 2025, 01:30 AM IST
2ಎಚ್ಎಸ್ಎನ್5 : ಹೊ.ನ.ಪುರ ತಾಲೂಕು ದಲಿತ ಸಾಹಿತ್ಯ ಪರಿಷತ್‌ ನೂತನ ಪದಾಧಿಕಾರಿಗಳು. | Kannada Prabha

ಸಾರಾಂಶ

ಬುದ್ಧನ ತತ್ವಗಳನ್ನು ಉದಾಹರಿಸಿದ ಅವರು, ಸಮಾಜದಲ್ಲಿ ಕೆಲವರು ಚುಚ್ಚು ಮಾತುಗಳಿಂದ ದೂರ ಕುಳಿತುಕೊಳ್ಳುವುದು, ಕೆಲವರು ಜಾತಿಯ ಹೆಸರಿನಲ್ಲಿ ಹತ್ತಿರ ಬರಲು ಹೆದರುವುದು ಇವುಗಳನ್ನೆಲ್ಲ ಬುದ್ಧನ ಧರ್ಮ ನಿರಾಕರಿಸುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಶೋಷಿತರಾದವರು ಪ್ರಕೃತಿ, ಮಹಿಳೆ ಮತ್ತು ಅಸ್ಪೃಶ್ಯರು. ಶತಮಾನಗಳಿಂದ ದಮನಕ್ಕೊಳಗಾಗುತ್ತಿರುವ ಈ ಮೂವರಿಗೂ ಸಾಹಿತ್ಯ ಮತ್ತು ಸಂಘಟನೆಗಳು ಧ್ವನಿ ನೀಡಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ವ್ಯಕ್ತಿಯ ವಿದ್ಯೆ, ಸ್ಥಾನ, ದೊಡ್ಡತನ ಯಾವುದೇ ಇರಲಿ ಎಲ್ಲರೂ ಒಂದೇ ಸಮಾನತೆಯ ಯೋಚನೆಗಳಿಂದ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳದಿದ್ದರೆ ಯಾವುದೇ ಉಪನ್ಯಾಸಕ್ಕೂ ಮೌಲ್ಯವಿರುವುದಿಲ್ಲ ಎಂದು ಸಾಹಿತಿ ಹಾಗೂ ರಾಜ್ಯೋತ್ಸವ ಪುರಸ್ಕೃತ ಸುಬ್ಬು ಹೋಲೆಯಾರ್ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಹೊಳೆನರಸೀಪುರ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಅವರು, ಸಮಾನತೆಯ ಸಂಸ್ಕಾರವೇ ನಿಜವಾದ ಅಧ್ಯಾತ್ಮ. ಯಾರೂ ನಮ್ಮ ಉಸಿರನ್ನು ತಡೆಯಲಾರರು ಅದೇ ರೀತಿ ಮಾನವೀಯತೆ ಮತ್ತು ಒಗ್ಗಟ್ಟನ್ನು ತಡೆಯಲು ಯಾರಿಗೂ ಹಕ್ಕಿಲ್ಲ. ಸ್ಪರ್ಶ, ಸಂವಾದ, ಸ್ವರ, ಇವೆಲ್ಲವೂ ಪರಸ್ಪರ ಹಂಚಿಕೊಳ್ಳುವ ಸಮಾಜ ಅಗತ್ಯ ಎಂದರು.

ಬುದ್ಧನ ತತ್ವಗಳನ್ನು ಉದಾಹರಿಸಿದ ಅವರು, ಸಮಾಜದಲ್ಲಿ ಕೆಲವರು ಚುಚ್ಚು ಮಾತುಗಳಿಂದ ದೂರ ಕುಳಿತುಕೊಳ್ಳುವುದು, ಕೆಲವರು ಜಾತಿಯ ಹೆಸರಿನಲ್ಲಿ ಹತ್ತಿರ ಬರಲು ಹೆದರುವುದು ಇವುಗಳನ್ನೆಲ್ಲ ಬುದ್ಧನ ಧರ್ಮ ನಿರಾಕರಿಸುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಶೋಷಿತರಾದವರು ಪ್ರಕೃತಿ, ಮಹಿಳೆ ಮತ್ತು ಅಸ್ಪೃಶ್ಯರು. ಶತಮಾನಗಳಿಂದ ದಮನಕ್ಕೊಳಗಾಗುತ್ತಿರುವ ಈ ಮೂವರಿಗೂ ಸಾಹಿತ್ಯ ಮತ್ತು ಸಂಘಟನೆಗಳು ಧ್ವನಿ ನೀಡಬೇಕು ಎಂದು ಹೇಳಿದರು.

೭೦ರ ದಶಕದಲ್ಲಿ ಬಸವಲಿಂಗಪ್ಪರ ‘ಬೂಸ ಸಾಹಿತ್ಯ’ ಪ್ರೇರಣೆಯಿಂದ ದಲಿತ ಸಂಘರ್ಷ ಸಮಿತಿ ಹಾಗೂ ಬಳಿಕ ದಲಿತ ಲೇಖಕರ ಒಕ್ಕೂಟ ಹುಟ್ಟಿಕೊಂಡದ್ದು ಹೇಗೆ ದಲಿತ ಸಾಹಿತ್ಯ ಪರಿಷತ್ತಿಗೆ ದಾರಿಯಾದುದು ಎಂಬ ವಿಚಾರವನ್ನೂ ಅವರು ಸವಿವರವಾಗಿ ವಿವರಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಈ ಪರಿಷತ್ತು ನಿರಂತರ ಹೋರಾಟ ನಡೆಸುತ್ತಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯಾಧ್ಯಕ್ಷ ಡಾ. ಅರ್ಜುನ್ ಗೋಳಸಂಗಿ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತು ಸ್ವತಂತ್ರ ಹಾಗೂ ನೋಂದಾಯಿತ ಸಂಸ್ಥೆ. ಹಾಸನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಮ್ಮೇಳನಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಯುವ ಪೀಳಿಗೆ ಸಾಹಿತ್ಯಕ್ಕೆ ಹೆಜ್ಜೆ ಇಡಬೇಕಿರುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಜಿಲ್ಲಾ ದಸಾಪ ಮಾಜಿ ಅಧ್ಯಕ್ಷ ಹೆತ್ತೂರು ನಾಗರಾಜ್ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಪರ್ಯಾಯವಲ್ಲ. ಆದರೆ ಇಂದಿಗೂ ಹಾಸನದಲ್ಲಿ ದಲಿತರಿಗೆ ಅಧ್ಯಕ್ಷ ಸ್ಥಾನ ಸಿಗದಿರುವುದು ನೋವು ಎಂದರು. ಸಾಹಿತಿ ಗುರುಮೂರ್ತಿ ಮತ್ತು ಪಿ. ರಾಘವೇಂದ್ರ ರಚಿಸಿದ ‘ಮೊದಲ ಹಾಡಿನ ರಾಗ ಸರಾಗ’ ಕವನ ಸಂಕಲನವನ್ನು ವೇದಿಕೆಯ ಗಣ್ಯರು ಬಿಡುಗಡೆ ಮಾಡಿದರು. ನಂದೀಶ್ ಹಾಗೂ ತಂಡದ ತೊಗಲುಗೊಂಬೆಯಾಟ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಡಾ. ಐಚನಹಳ್ಳಿ ಕೃಷ್ಣಪ್ಪ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ೨೦ ಮಂದಿ ಕವಿಗಳು ಕವಿತೆಗಳು ವಾಚಿಸಿ ಸನ್ಮಾನಿಸಲ್ಪಟ್ಟರು. ಹೊಳೆನರಸೀಪುರ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಿ.ಕೆ. ವಸಂತಯ್ಯ ಹಾಗೂ ಅವರ ತಂಡ ಪದಗ್ರಹಣ ಮಾಡಿದರು. ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿದವು.

ಈ ಸಂದರ್ಭದಲ್ಲಿ ಪ್ರಾಂಶುಪಾಲರು, ದಲಿತ ಮುಖಂಡರು, ಸಮಾಜಸೇವಕರು, ಸಾಹಿತ್ಯ ಅಭಿಮಾನಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ