ದುರಸ್ತಿ ಕಟ್ಟಡದಲ್ಲಿ ಪಾಠ ಬೇಡ

KannadaprabhaNewsNetwork | Published : Jun 12, 2024 12:37 AM

ಸಾರಾಂಶ

ಮಳೆಯಿಂದ ರಸ್ತೆಗಳು ಹಾಳಾದರೆ ತುರ್ತಾಗಿ ತೆಗ್ಗು, ಗುಂಡಿ ಮುಚ್ಚುವ ಕಾರ್ಯಕೈಗೊಳ್ಳಬೇಕು. ಏನಾದರೂ ಬೇಡಿಕೆ ಇದ್ದಲ್ಲಿ ಅಧಿಕಾರಿಗಳು ಲಿಖಿತ ರೂಪದಲ್ಲಿ ವರದಿ ನೀಡಿದರೆ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಕಲಘಟಗಿ:

ಮಳೆಗಾಲ ಆರಂಭವಾಗಿದ್ದು ಮಳೆಯಿಂದ ಸೋರುತ್ತಿರುವ ಕಟ್ಟಡಗಳಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ಪಾಠ ಮಾಡಬೇಡಿ. ಕಟ್ಟಡಗಳನ್ನು ದುರಸ್ತಿ ಮಾಡಿಸಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಕ್ರಮಕೈಗೊಳ್ಳಿ ಎಂದು ಬಿಇಒ ಉಮಾದೇವಿ ಬಸಾಪುರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೂಚಿಸಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮುಂಗಾರು ಪೂರ್ವ ಸಿದ್ಧತಾ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದರು.

ಮಳೆಯಿಂದ ರಸ್ತೆಗಳು ಹಾಳಾದರೆ ತುರ್ತಾಗಿ ತೆಗ್ಗು, ಗುಂಡಿ ಮುಚ್ಚುವ ಕಾರ್ಯಕೈಗೊಳ್ಳಬೇಕು. ಏನಾದರೂ ಬೇಡಿಕೆ ಇದ್ದಲ್ಲಿ ಅಧಿಕಾರಿಗಳು ಲಿಖಿತ ರೂಪದಲ್ಲಿ ವರದಿ ನೀಡಿದರೆ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದ ಅವರು, ಸರ್ಕಾರಿ ನೂತನ ಕೊಠಡಿಗಳ ಪೂಜೆ ಹಾಗೂ ಮಳೆಗಾಲದಲ್ಲಿ ಜನರಿಗೆ ಸಮಸ್ಯೆ ಎದುರಾದಲ್ಲಿ ನನಗೋಸ್ಕರ ಕಾಯದೇ ಪೂಜೆ ನೆರೆವೇರಿಸಿ ಸೌಲಭ್ಯ ಕಲ್ಪಿಸಲು ಹಿಂದೇಟು ಹಾಕಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

37000 ಹೆಕ್ಟೇರ್‌ ಬಿತ್ತನೆ ಗುರಿ:

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ ಮಾತನಾಡಿ, ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಖುಷಿ ತಂದಿದೆ. ಕೃಷಿಕರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 2024-25ನೇ ಸಾಲಿನ ಮುಂಗಾರು ಹಂಗಾಮಿಗೆ 37920 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಭತ್ತ 2674 ಹೆಕ್ಟೇರ್‌, ಗೋವಿನಜೋಳ 12720 ಹೆಕ್ಟೇರ್‌, ಸೋಯಾ ಅವರೆ 6813 ಹೆಕ್ಟೇರ್‌, ಕಬ್ಬು 5328 ಹೆಕ್ಟೇರ್‌ ಹಾಗೂ ತೊಗರಿ 54 ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದ್ದು ಇನ್ನು ಬಿತ್ತನೆ ಕಾರ್ಯವು ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಸಚಿವ ಲಾಡ್ ಮಾತನಾಡಿ ಉತ್ತಮ ಮಳೆಯಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು ಬಿತ್ತನೆಗೆ ಬೀಜ, ರಸಗೊಬ್ಬರ ದಾಸ್ತಾನು ಕೊರತೆಯಾಗದಂತೆ ಮಾಡಿಕೊಳ್ಳಿ. ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಎಂದು ಕೃಷಿ ಅಧಿಕಾರಿಗೆ ಹೇಳಿದರು. ಪ್ರಸ್ತುತ ಸಾಲಿಗೆ ಸೋಯಾಅವರೆ 1740 ಕ್ವಿಂ. ಭತ್ತ 240 ಕ್ವಿಂ. ಗೋವಿನಜೋಳ 1960 ಕ್ವಿಂಟಲ್‌ ಹಾಗೂ ತೊಗರಿ 22 ಕ್ವಿಂಟಲ್‌ನಷ್ಟು ಒಟ್ಟು 3962 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆ ನೀಡಲಾಗಿದೆ. ತಾಲೂಕಿನಲ್ಲಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಯೂರಿಯಾ 1384.85 ಟನ್, ಡಿಎಪಿ-457.6 ಟನ್, ಎಂಒಪಿ 147.4 ಟನ್, ಕಾಂಪ್ಲೆಕ್ಸ್‌ 469.5 ಟನ್, ಎಸ್‌ಎಸ್‌ಪಿ 44.80 ಟನ್‌ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.

ಹೆಸ್ಕಾಂ ಅಧಿಕಾರಿ ಹೊನ್ನೂರಪ್ಪ ಮಾತನಾಡಿ, ತಾಲೂಕಿನ ಬೂ. ಅರಳಿಕಟ್ಟಿ ದೇವಿಕೊಪ್ಪದಲ್ಲಿ ಪವರ್ ಸ್ಟೇಷನ್, 20 ಲಿಂಕ್‌ಲೈನ್ ಮಾಡುತ್ತಿದ್ದೇವೆ. ಹಳೆಯ ವಿದ್ಯುತ್ ಕಂಡಕ್ಟರ್''ಗಳನ್ನು ಬದಲಾಯಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆ:

ತಾಲೂಕು ಆರೋಗ್ಯಾಧಿಕಾರಿ ಡಾ. ಕರ್ಲವಾಡ ಅವರಿಂದ ತಾಲೂಕಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವ ಲಾಡ್, ತಾಲೂಕಿನಲ್ಲಿ ಜನರು ಜ್ವರದಿಂದ ಬಳಲುತ್ತಿರುವುದು ಹಾಗೂ ಡೆಂಘೀ ಪ್ರಕರಣಗಳು ಇರುವ ಬಗ್ಗೆ ದೂರು ಕೇಳಿ ಬರುತ್ತಿವೆ. ತಕ್ಷಣ ಆರೋಗ್ಯ ಇಲಾಖೆ ಕಾರ್ಯಪ್ರವರ್ತರಾಗಿ ಮುಂಜಾಗ್ರತ ಕ್ರಮ ವಹಿಸಿ ಎಂದರು.

ಇದೇ ವೇಳೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಅಧಿಕಾರಿಗಳಾದ ಶಿವಪುತ್ರ ಮಠಪತಿ, ಚಂದ್ರಶೇಖರ ಚಿಕ್ಕಮಠ, ಎ.ಜೆ. ಯೋಗಪ್ಪನವರ, ಅರುಣಕುಮಾರ ಅಷ್ಟಗಿ, ಲತಾ ಟಿ.ಎಸ್., ಮಂಜುನಾಥ ಮುರಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article