ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡ ಮರೆಯದಿರಿ: ಗಂಗಾಧರ ದೇವರಮನೆ

KannadaprabhaNewsNetwork |  
Published : Jun 21, 2026, 01:15 AM IST
20 ಟಿವಿಕೆ 2 – ತುರುವೇಕೆರೆ ತಾಲೂಕು ಮಾಯಸಂದ್ರದಲ್ಲಿ ಕನ್ನಡದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಗುರಿ ಸಾಧಿಸಬೇಕೆಂಬ ಹುಚ್ಚಿನಲ್ಲಿ ಎಡವಬೇಡಿ. ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತಿ ಗುರಿ ಮುಟ್ಟಿ. ಈಗಿನ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಲಾ ವಿಭಾಗಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆ ಬರಲಿದೆ. ಕಲಾ ವಿಭಾಗ ಎಂದರೆ ಅಸಡ್ಡೆ ಬೇಡ. ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್ ನಂತಹ ಸರ್ಕಾರದ ಉನ್ನತ ಹುದ್ದೆಯನ್ನು ಸುಲಭವಾಗಿ ಪಡೆಯಲು ಕಲಾ ವಿಭಾಗ ಸಹಕಾರಿಯಾಗಲಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡ ಭಾಷೆಯನ್ನು ಮಾತ್ರ ಮರೆಯಬೇಡಿ. ಅದೇ ನಮ್ಮ ಉಸಿರು. ಎಲ್ಲೇ ಹೋದರೂ ಸಹ ನಮ್ಮತನವನ್ನು ಬಿಟ್ಟು ಕೊಡಬೇಡಿ ಎಂದು ಗ್ಲೋಬಲ್ ಎಂಬಸಿ ಕಾಲೇಜಿನ ಪ್ರಾಂಶುಪಾಲ ಗಂಗಾಧರ ದೇವರಮನೆ ಹೇಳಿದರು.

ತಾಲೂಕಿನ ಮಾಯಸಂದ್ರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಾಯಸಂದ್ರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು. ಗುರಿ ಸಾಧಿಸಬೇಕೆಂಬ ಹುಚ್ಚಿನಲ್ಲಿ ಎಡವಬೇಡಿ. ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತಿ ಗುರಿ ಮುಟ್ಟಿ. ಈಗಿನ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕಲಾ ವಿಭಾಗಕ್ಕೆ ಅತ್ಯಂತ ಹೆಚ್ಚಿನ ಬೇಡಿಕೆ ಬರಲಿದೆ. ಕಲಾ ವಿಭಾಗ ಎಂದರೆ ಅಸಡ್ಡೆ ಬೇಡ. ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್ ನಂತಹ ಸರ್ಕಾರದ ಉನ್ನತ ಹುದ್ದೆಯನ್ನು ಸುಲಭವಾಗಿ ಪಡೆಯಲು ಕಲಾ ವಿಭಾಗ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಭಿವೃದ್ಧಿ ಕೇವಲ ಕನ್ನಡ ಬಲ್ಲವರಿಂದ ಮಾತ್ರ ಆಗಿಲ್ಲ. ಎಲ್ಲಾ ಸಮುದಾಯ, ಎಲ್ಲಾ ಧರ್ಮೀಯರಿಂದಲೂ ಆಗಿದೆ ಎಂದು ಹೇಳಿದರು.

ತುರುವೇಕೆರೆ ತಾಲೂಕು ಕನ್ನಡ ಸಾಹಿತ್ಯ ದಿಗ್ಗಜರ ತವರೂರಾಗಿದೆ. ಬಿಎಂಶ್ರೀ, ಕಣತೂರು ಹಿರಣ್ಣಯ್ಯ ಸೇರಿ ಹಲವಾರು ಕಲಾವಿದರು, ಸಾಹಿತಿಗಳನ್ನು ನೀಡಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ನ ಕಟ್ಟಡವನ್ನು ಹೊಂದಿದ ಕೀರ್ತಿ ಈ ತಾಲೂಕಿನ ಮಾಯಸಂದ್ರಕ್ಕೆ ಸಲ್ಲಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡದಲ್ಲಿ ಸುಮಾರು 1200 ವಿದ್ಯಾರ್ಥಿಗಳು 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಪಿಯುಸಿಯಲ್ಲಿ 400ಕ್ಕೂ ಹೆಚ್ಚು ಮಕ್ಕಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಇದರರ್ಥ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಆಸಕ್ತಿ ಇದೆ ಎಂಬುದನ್ನು ತೋರಿಸುತ್ತದೆ ಎಂದರು.

ಮಾಯಸಂದ್ರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷ ಎನ್. ಆರ್. ಜಯರಾಮ್ ಮಾತನಾಡಿ, ತಮ್ಮ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ತನ್ನದೇ ಆದ ಕಟ್ಟಡ ಹೊಂದಿದೆ. ಅಲ್ಲದೇ ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಸಹ 14 ವಿದ್ಯಾರ್ಥಿಗಳನ್ನು ಗೌರವಿಸುತ್ತಿದ್ದೇವೆ. ಅಲ್ಲದೇ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಿರುವ ಹಿರಿಯರನ್ನೂ ಸಹ ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ಮಾಯಸಂದ್ರ ಹೋಬಳಿ ಘಟಕ ಎಲ್ಲರಿಗೂ ಮಾದರಿಯಾಗಿದೆ. ಹೋಬಳಿ ಹಂತದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸುತ್ತಿರುವುದು ಸ್ವಾಗತಾರ್ಹ. ಹಾಗೆಯೇ ತಾಲೂಕು ಪರಿಷತ್ ವತಿಯಿಂದ ಶೀಘ್ರದಲ್ಲೇ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜವರೇಗೌಡ, ಉದ್ಯಮಿ ಕೆಂಪಯ್ಯ, ನಿವೃತ್ತ ಮುಖ್ಯ ಶಿಕ್ಷಕ ರೆಹಮತ್ ಉಲ್ಲಾ, ಪಿಡಿಒ ಸುರೇಶ್, ಸತ್ಯಮೂರ್ತಿ, ಡಾ.ಶಶಿಧರ್, ಹನುಮಂತಯ್ಯ, ತುಮಕೂರು ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ್, ಪ್ರಕಾಶ್, ಸಿ.ಎನ್.ನಂಜುಂಡಯ್ಯ, ಶಿವಕುಮಾರ್, ಶಿಕ್ಷಕಿ ಸುಮಾ ಸೇರಿ ಹಲವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುನಿರಾಜು ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ
ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ..!