ಮೂಡುಬಿದಿರೆ ರೋಟರಿಯಲ್ಲಿ ಕನ್ನಡಪ್ರಭ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.47ರಷ್ಟು ಕಾಡುಗಳಿದ್ದವು. ಕಳೆದ 75 ವರ್ಷಗಳಲ್ಲಿ ಅವುಗಳ ಪ್ರಮಾಣ ಶೇ.25ಕ್ಕೆ ಇಳಿದಿರುವುದು ನಮ್ಮ ಪರಿಸರ ಕಾಳಜಿಗೆ ಕರಾಳ ಸಾಕ್ಷಿ. ಭೂಮಿಯ ಮೇಲಿರುವ ಎಲ್ಲ ಪ್ರಭೇದಗಳಲ್ಲಿ ಮಾನವ ಜೀವಿ ಎಂಬ ಪ್ರಭೇದದಿಂದಲೇ ಸಮಸ್ಯೆಯಾಗಿರುವುದು. ನಾವು ಬರೀ ಬುದ್ಧಿಜೀವಿಗಳಾದರೆ ಸಾಲದು, ನೆಲ, ಜಲ ಸಂರಕ್ಷಣೆಯೊಂದಿಗೆ ಅವುಗಳಿಗೆ ತಲೆಬಾಗಲೇಬೇಕು ಎಂದು ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಹೇಳಿದರು.
ಕನ್ನಡಪ್ರಭ ದಿನಪತ್ರಿಕೆಯ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ, ಮೂಡುಬಿದಿರೆ ರೋಟರಿ ಕ್ಲಬ್ ಹಾಗೂ ರೋಟರಿ ಎಜುಕೇಶನ್ ಸೊಸೈಟಿ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ಶನಿವಾರ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆ ಸಮ್ಮಿಲನ ಸಭಾಂಗಣದಲ್ಲಿ ಆಯೋಜಿಸಲಾದ ಮೂಡುಬಿದಿರೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಚಿತ್ರಕಲಾ ಪ್ರತಿಭೆಯನ್ನು ನಿರಂತರ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಓದಿನ ಜತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆ ಹೇಳಿದರು.
ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ. ಅಧ್ಯಕ್ಷತೆ ವಹಿಸಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದರು.ಬದುಕಿನ ಭಾಗವಾದ ಕಲೆ: ಜೆ.ಡಬ್ಲ್ಯು. ಪಿಂಟೋ
ಬಳಿಕ ಮಾತನಾಡಿ, ಕಲೆ ನಮ್ಮೆಲ್ಲರಲ್ಲಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೆತ್ತವರು ಗುರುತಿಸಿ ಅವುಗಳನ್ನು ಪೋಷಿಸಿದಾಗ ಮಹಾನ್ ಕಲಾವಿದರು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಮೂಡುಬಿದಿರೆ ಮೂಲದ ಚಿತ್ರ ಕಲಾವಿದ ದೆಹಲಿಯ ಮಂಜುನಾಥ್ ಕಾಮತ್ ಅವರ ಬದುಕನ್ನು ಪಿಂಟೋ ಉದಾಹರಿಸಿದರು. ತೀರ್ಪುಗಾರರಾಗಿದ್ದ ರಘುರಾಮ ಆಚಾರ್ಯ, ಸ್ಪರ್ಧಾ ಸಂಯೋಜಕ ಮಹೇಶ್ ಹುಲೇಕಲ್, ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದ ಸಂಸ್ಥೆಯ ಆಡಳಿತಾಧಿಕಾರಿ ಪ್ರಫುಲ್ ಡಿಸೋಜ, ಕಚೇರಿ ಮುಖ್ಯಸ್ಥ ಸತೀಶ್, ಶಿಕ್ಷಕ ಗೋಪಾಲಕೃಷ್ಣ, ಕಚೇರಿ ವ್ಯವಸ್ಥಾಪಕ ಸತೀಶ್, ಸಿಬ್ಬಂದಿ ಮಾನಸ, ನಿಶ್ಮಿತಾ, ರೇಷ್ಮಾ ಅವರನ್ನು ಗೌರವಿಸಲಾಯಿತು.
ಗಮನ ಸೆಳೆದ ಕನ್ನಡಪ್ರಭ ಕಾಳಜಿ:ಕನ್ನಡ ಭಾಷೆ, ನೆಲ ಜಲ ಕುರಿತು ನಾಡಿನ ಹಿರಿಯ ಪತ್ರಿಕೆ ಕನ್ನಡಪ್ರಭ ಇಂದಿಗೂ ಅದೇ ಕಾಳಜಿ ವಹಿಸಿದೆ. ಪತ್ರಿಕೆಯ ಧೋರಣೆ, ಸುದ್ದಿಯ ನಿಖರತೆ ನಾಡಿನ ಓದುಗರಿಗೆ ಜ್ಞಾನ ಲಾಭ ನೀಡಿದೆ ಎಂದ ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ಈ ಹಿಂದೆ ಕನ್ನಡಪ್ರಭ ಪ್ರಕಟಿಸಿದ ಕಾಂಡ್ಲಾ ಸಸ್ಯ ಪ್ರಬೇಧದ ಕುರಿತದಾದ ವರದಿ, ಅರಣ್ಯ ಇಲಾಖಾ ಸಿಬ್ಬಂದಿ ಕುರಿತು ಮುಖಪುಟದಲ್ಲಿ ಬೆಳಕು ಚೆಲ್ಲಿದ ವರದಿಗಳು, ರಾಜ್ಯ ಸರ್ಕಾರದ ಸದನದಲ್ಲೂ ಪ್ರತಿಧ್ವನಿಸಿ ಸಮಸ್ಯೆಗೆ ಪರಿಹಾರ ದೊರೆತಿದ್ದನ್ನು ನೆನಪಿಸಿಕೊಂಡರು.
ಸಂಪೂರ್ಣ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ
--------