ಯಾವುದೇ ದೊಡ್ಡ ಮಠ ಸಿಕ್ಕರೂ ಹಾವೇರಿ ಬಿಟ್ಟು ಹೋಗಲ್ಲ-ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Dec 31, 2025, 02:00 AM IST
30ಎಚ್‌ವಿಆರ್‌1 | Kannada Prabha

ಸಾರಾಂಶ

ಯಾವುದೇ ದೊಡ್ಡ ಮಠ ಸಿಕ್ಕರೂ ನಾನು ಹೋಗುವುದಿಲ್ಲ, ಹಾವೇರಿಯೇ ನಮ್ಮ ಮೊದಲ ಆಯ್ಕೆ. ಸತ್ಕಾರ ಕಡಿಮೆಯಾದರೂ ಪರವಾಗಿಲ್ಲ, ಸಹಕಾರ ಕಡಿಮೆ ಆಗಬಾರದು. ನಿಮ್ಮ ಹೃದಯ ಸಿಂಹಾಸನದಲ್ಲಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಹಾವೇರಿ:ಯಾವುದೇ ದೊಡ್ಡ ಮಠ ಸಿಕ್ಕರೂ ನಾನು ಹೋಗುವುದಿಲ್ಲ, ಹಾವೇರಿಯೇ ನಮ್ಮ ಮೊದಲ ಆಯ್ಕೆ. ಸತ್ಕಾರ ಕಡಿಮೆಯಾದರೂ ಪರವಾಗಿಲ್ಲ, ಸಹಕಾರ ಕಡಿಮೆ ಆಗಬಾರದು. ನಿಮ್ಮ ಹೃದಯ ಸಿಂಹಾಸನದಲ್ಲಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಹತ್ತಾರು ಸಾವಿರ ಜನರೆದುರು ಭಕ್ತಿಭಾವದಿಂದ ರಜತ ತುಲಾಭಾರ ಪೂರೈಸಿಕೊಂಡ ಬಳಿಕ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಭಾವುಕರಾಗಿ ಆಡಿದ ಮಾತಿದು.

ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರಕ್ಕೆ ಐತಿಹಾಸಿಕ ಪರಂಪರೆ ಇದೆ. ಇಂದು ಅತ್ಯಂತ ಸಡಗರ ಸಂಭ್ರಮದ ದಿನ. ಹುಕ್ಕೇರಿಮಠದ ಇತಿಹಾಸದಲ್ಲೇ ಈ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಸೇವೆಯಿಂದ ನಮಗೆ ಖುಷಿ, ಆನಂದ ಆಗಿದೆ. ಇದರಿಂದ ಜವಾಬ್ದಾರಿ ಹೆಚ್ಚಿಸಿದ್ದೀರಿ. ಶಿವಯೋಗ ಮಂದಿರದ ಜವಾಬ್ದಾರಿ ಹೊತ್ತ ನಂತರ ಹಳ್ಳಿಗಳ ಸಂಪರ್ಕ ಕಡಿಮೆಯಾಗುತ್ತಿದೆ. ಎಲ್ಲಿ ನಮ್ಮ ಭಕ್ತರು ದೂರ ಆಗುತ್ತಿದ್ದಾರೋ ಎಂಬ ಭಾವನೆ ಮೂಡಿತ್ತು. ಹಿರಿಯ ಶ್ರೀಗಳ ಆಶಯದಂತೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ನಮಗೆ ಬಹಳ ಒಳ್ಳೆಯ ಭಕ್ತರು ಸಿಕ್ಕಿದ್ದಾರೆ. ಬಾಲ್ಯದಲ್ಲಿ ನಾವು ಓದಲು ಬಹಳ ಕಷ್ಟ ಪಟ್ಟಿದ್ದೇನೆ. ನನ್ನ ಕಷ್ಟ ಬೇರೆಯವರಿಗೆ ಬರಬಾರದು ಎಂಬ ಉದ್ದೇಶದಿಂದ ಬಡ ಮಕ್ಕಳನ್ನು ಓದಿಸುವ ಕೆಲಸ ಮಾಡುತ್ತಿದ್ದೇವೆ. ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಯಾವ ಪಾಲಕರಿಗೆ ತಮ್ಮ ಮಕ್ಕಳನ್ನು ಓದಿಸಲು ಶಕ್ತಿ ಇಲ್ಲವೋ, ಅಂಥವರು ತಮ್ಮ ಮಕ್ಕಳನ್ನು ನಮ್ಮ ಜೋಳಿಗೆಗೆ ಹಾಕಿ. ಅವರನ್ನು ಓದಿಸಿ ನಿಮ್ಮ ಮನೆಗೆ ಒಪ್ಪಿಸುತ್ತೇವೆ ಎಂದರು.ನಮ್ಮ ಪಟ್ಟಾಧಿಕಾರದ ಸಂದರ್ಭದಲ್ಲಿ ಉಡುದಾರ ಕಟ್ಟು ಮಾಡುತ್ತಾರೆ. ಬಳಿಕ ತಂದೆ-ತಾಯಿಯ ಕರುಳು ಸಂಬಂಧ ಕತ್ತರಿಸುತ್ತೆ. ನಾವು ಮನಿಯಾಗ ಇದ್ದರೆ ತಾಯಿ ಪ್ರೀತಿ ಮಾತ್ರ ಸಿಗುತ್ತಿತ್ತು. ಆದರೆ, ಹಾವೇರಿ ಭಕ್ತರು ನಮ್ಮ ತಂದೆ-ತಾಯಿ ನೆನಪು ಆಗದಂತೆ ಅವರಿಗಿಂತಲೂ ಹೆಚ್ಚು ಪ್ರೀತಿ ಕೊಟ್ಟಿದ್ದೀರಿ ಎಂದು ಶ್ರೀಗಳು ಭಾವುಕರಾದರು.

12 ಗಂಟೆಗೂ ಕದಲದ ಜನತೆ: ಸೋಮವಾರ ಮಧ್ಯರಾತ್ರಿ 12 ಗಂಟೆಯಾದರೂ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ್ದ ಹತ್ತಾರು ಸಾವಿರ ಜನರು ಕದಲಲಿಲ್ಲ. ಹುಕ್ಕೇರಿಮಠದ ಸದಾಶಿವ ಶ್ರೀಗಳ ರಜತ ತುಲಭಾರ ಮಹೋತ್ಸವದ ಕ್ಷಣ ಕಣ್ತುಂಬಿಕೊಳ್ಳಲು ಚಳಿಯಲ್ಲೂ ಕಾದು ಕುಳಿತಿದ್ದರು. ತುಲಾಭಾರ ಶುರುವಾಗುತ್ತಿದ್ದಂತೆ ಸರದಿಯಲ್ಲಿ ವೇದಿಕೆಗೆ ಬಂದ ಭಕ್ತರು ಒಂದು ಗುಂಜಿಯಿಂದ ಹಿಡಿದು ಕೆಜಿಗಟ್ಟಲೇ ಬೆಳ್ಳಿ ಹಾಕಿದರು. ತುಲಾಭಾರದ ತಕ್ಕಡಿ ಮೇಲೆರುತ್ತಿದ್ದಂತೆ ಭಕ್ತರ ಕರತಾಡನ ಮುಗಿತು ಮುಟ್ಟಿತ್ತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ 15ನೇ ವರ್ಧಂತಿ ನಿಮಿತ್ತ ಹಮ್ಮಿಕೊಂಡಿದ್ದ ರಜತ ತುಲಾಭಾರ ಸೇವೆಯು ಸಹಸ್ರ ಭಕ್ತಧಿಗಳ ಹರ್ಷೋದ್ಘಾರದೊಂದಿಗೆ ಭಕ್ತಿಭಾವದಿಂದ ಸೋಮವಾರ ಮಧ್ಯರಾತ್ರಿ ವೈಭವದಿಂದ ನೆರವೇರಿತು.

ವನಿತಾ ಗುತ್ತಲ ಎಂಬವರು ನೀಡಿದ ಬೆಳ್ಳಿ ಸಿಂಹಾಸನದ ಮೇಲೆ ಶ್ರೀಗಳನ್ನು ಕುಳ್ಳರಿಸಿ ಗೌರವಿಸಲಾಯಿತು. ಈ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು, ಭಕ್ತರು, ಶ್ರೀಮಠದ ಪದಾಧಿಕಾರಿಗಳು, ಜಾತ್ರಾ ಮಹೋತ್ಸವದ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಕೋರ್ಟ್‌ಗೆ: ಮುತಾಲಿಕ್‌
ಗುರುರಾಜ್ ಹೆಬ್ಬಾರ್ ಸ್ಮರಣಾರ್ಥ ರಕ್ತದಾನ ಶಿಬಿರ