ಹಾವೇರಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಲ್ಲಿ ಸಾಮರಸ್ಯ ಇರಬೇಕು. ಆಕಾಂಕ್ಷಿಗಳೆಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಸಜ್ಜನರ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ಹಾಗೂ ಪಶ್ಚಿಮ ಪದವೀಧರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಚುನಾವಣೆ ಸಮಯದಲ್ಲಿ ಪಕ್ಷದ ಹಿತದೃಷ್ಟಿ ಹಾಗೂ ಕಾರ್ಯಕರ್ತರ ಹಿತದೃಷ್ಟಿ ಬಹಳ ಮಹತ್ತರ ಪಾತ್ರ ವಹಿಸುತ್ತದೆ. ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿಗೆ ಹೆಚ್ಚಿನ ಬಲವನ್ನು ಕಾಂಗ್ರೆಸ್ ಕಾರ್ಯಕರ್ತರು ಕೊಟ್ಟಿದ್ದಾರೆ. ಅಭ್ಯರ್ಥಿಗಳು, ಕಾರ್ಯಕರ್ತರು ಹುಮ್ಮಸ್ಸಿನಿಂದ ಶ್ರಮಿಸಿದ ಫಲವಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತಹ ವಾತಾವರಣ ನಮ್ಮಲ್ಲಿ ಬರಬೇಕು ಎಂದರು.ನಮ್ಮಲ್ಲಿರುವ ಅಭ್ಯರ್ಥಿಗಳು ತಮ್ಮತಮ್ಮಲ್ಲಿಯೇ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪದವೀಧರ ಮತದಾರರು ಇದ್ದಾರೆ. ಅಭ್ಯರ್ಥಿಗಳು ಜಿಲ್ಲೆಯ ಎಲ್ಲ ಶಾಸಕರು, ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮರೆತು ಸಾಮರಸ್ಯ ಬೆಳೆಸಿಕೊಳ್ಳಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬಹುದು. ಈ ಚುನಾವಣೆ ಮುಗಿದ ಬಳಿಕ ಸ್ಥಳೀಯ ಸ್ಥಂಸೆಗಳು, ಎಪಿಎಂಸಿ ಚುನಾವಣೆ ಬರಲಿದೆ. ಕ್ರಿಯಾಶೀಲವಾಗಿ ಪಕ್ಷ ಸಂಘಟಿಸಲು ಶ್ರಮಿಸಿದ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಕೊಡುತ್ತೇವೆ. ಉತ್ಸಾಹಿಗಳಾಗಿ ಕೆಲಸ ಮಾಡುವವರಿಗೆ ಒಳ್ಳೆಯ ಸ್ಥಾನಮಾನ ಕೊಡಿಸುತ್ತೇವೆ ಎಂದು ತಿಳಿಸಿದರು.ಟಿಕೆಟ್ ಆಕಾಂಕ್ಷಿಗಳಾದ ರಾಘವೇಂದ್ರ ಬಾಸೂರ ಹಾಗೂ ರಾಜೇಶ್ವರಿ ಪಾಟೀಲ ಮಾತನಾಡಿ, ಕಾಂಗ್ರೆಸ್ ಯಾರಿಗೇ ಟಿಕೇಟ್ ಕೊಟ್ಟರು ಅವರ ಪರವಾಗಿ ಕೆಲಸ ಮಾಡುತ್ತೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆಂದು ಎಂದು ಹೇಳಿದರು. ಅರ್ಹ ಪದವೀಧರರು ನ. 6ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬಸವರಾಜ ಗುರಿಕಾರ ಮಾತನಾಡಿದರು. ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ್ ಮಾನೆ, ಯಾಸೀರ್‌ಖಾನ್ ಪಠಾಣ್, ಮಾಜಿ ಶಾಸಕರಾದ ಬಿ.ಎಚ್. ಬನ್ನಿಕೋಡ, ನೆಹರು ಓಲೇಕಾರ, ಹಾವೇಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ರಾಮಣ್ಣ ಲಮಾಣಿ, ರುಕ್ಮಿಣಿ ಸಾಹುಕಾರ, ದುರಗಪ್ಪ ನೀರಲಗಿ, ಎಂ.ಎಂ. ಮೈದೂರ, ಎಸ್.ವಿ. ಪಾಟೀಲ, ಮಹದೇವಗೌಡ ಗಾಜಿಗೌಡ್ರ, ದಾನಪ್ಪ ಕೆಂಗೊಂಡ, ಶಂಕರ ಮೆಹರವಾಡೆ ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪ್ರಸನ್ನ ಹಿರೇಮಠ ನಿರ್ವಹಿಸಿದರು.ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ 226 ಕ್ಷೇತ್ರದಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡು ಬರಲಾಗುತ್ತಿದೆ. ಕನಿಷ್ಠ 3 ಲಕ್ಷ ಸಹಿ ಸಂಗ್ರಹ ಮಾಡಿ ಕೆಪಿಸಿಸಿಗೆ ಕಳುಹಿಸಬೇಕಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಖೇದಕರ. ನ. 5ರ ಸಂಜೆಯೊಳಗಾಗಿ ಪ್ರತಿ ಕ್ಷೇತ್ರದಲ್ಲಿ 50 ಸಾವಿರ ಸಹಿ ಸಂಗ್ರಹ ಮಾಡಿ ಡಿಸಿಸಿ ಕಚೇರಿಗೆ ಕಳುಹಿಸಿ ಕೊಡಬೇಕು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 19 ಶಾಸಕರು ಕಾಂಗ್ರೆಸ್‌ನವರೇ ಇದ್ದಾರೆ. ಇದೇ ತಿಂಗಳಲ್ಲಿ ಅಭ್ಯರ್ಥಿ ಘೋಷಣೆಯಾಗಲಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.