ಕಾರಟಗಿ: ಸರ್ಕಾರದ ಅಮೃತ ಯೋಜನೆಯಡಿ ಎಸ್ಸಿ-ಎಸ್ಟಿಗೆ ಸಾಲ ಕೊಡುವ ಬದಲು ಮನೆ ಮನೆಗೆ ಎರಡು ಆಕಳುಗಳನ್ನು ಕೊಡುವಂತೆ ಸರ್ಕಾರದ ಮುಂದೆ ಬೇಡಿಕೆ ಇದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಸದ್ಯಕ್ಕೆ ಮತ್ತೆ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದರು.ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದರು.ರಾಜ್ಯದ ಕೆಎಂಎಫ್‌ನ ೧೪ ಒಕ್ಕೂಟಗಳಿಂದ ೮೦ರಿಂದ ೮೨ ಲಕ್ಷ ಲೀ. ಹಾಲು ಶೇಖರಣೆ ಆಗುತ್ತಿತ್ತು. ಆದರೆ, ನಾನು ಅಧ್ಯಕ್ಷನಾದ ಮೇಲೆ ₹೮೭ ಲಕ್ಷ ಲೀ. ಸಂಗ್ರಹಣೆಗೆ ಏರಿಕೆಯಾಗಿದೆ. ಆದರೂ ನಮಗೆ ಇನ್ನು ಹಾಲಿನ ಕೊರತೆ ಇದೆ. ಒಟ್ಟಾರೆ ಬೇಡಿಕೆಯಂತೆ ೧.೨೫ ಕೋಟಿ ಲೀ. ಹಾಲು ಬೇಕು. ಇನ್ನೂ ಬೇಡಿಕೆಗೆ ತಕ್ಕಂತೆ ಹಾಲು ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೆಎಂಎಫ್ ಪ್ರಯತ್ನ ಮಾಡುತ್ತಿದ್ದು, ಸರ್ಕಾರದ ನೆರವು ಪಡೆದುಕೊಳ್ಳಬೇಕಾ? ಅಥವಾ ಬೇರೆ ಏನಾದರೂ ಪರಿಹಾರ ಇದೆಯೇ ಎಂದು ತಿಳಿದು, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರದೇ ಇದ್ದರೂ ಆರನೇ ಗ್ಯಾರಂಟಿಯಾಗಿ ನಮ್ಮ ಮುಖ್ಯಮಂತ್ರಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲಿನ ದರ ಲೀ.ಗೆ ₹೩ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಭಾಗದ ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಿ ಎಂದರು.ರಾಜ್ಯದ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಕೈಹಿಡಿಯಲಿದ್ದು, ೨೨ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ವಿಶ್ವಚೇತನ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯಿಂದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರನ್ನು ಸನ್ಮಾನಿಸಲಾಯಿತು.ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ಯಂಕನಗೌಡ್ರು ಹಿರೇಗೌಡ್ರು, ನಾಗಮಣಿ, ಶ್ರೀಕಾಂತಪ್ಪ, ಬರಾಕೊ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಗುರುಸಿದ್ದನಗೌಡ, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ಮುಖಂಡರಾದ ಡಾ. ಕೆ.ಎನ್. ಪಾಟೀಲ್, ಅಮರೇಶ ಬರಗೂರು, ಕುಮಾರ್ ರಾಥೋಡ್, ರವಿಚಂದ್ರ ಹೊಸಮನಿ, ದೇವರಾಜ ಭಾವಿಕಟ್ಟಿ, ಟಿ. ಬೀರಪ್ಪ, ಹನುಮೇಶ ಚನ್ನಳ್ಳಿ, ಪಂಪಾಪತಿ ಮರಕುಂಬಿ, ಜಂಬುನಾಥ ಇಟಗಿ ಇದ್ದರು.