ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ನೈಯಾಪೈಸೆ ನೀಡಿಲ್ಲ: ಬಸವರಾಜ ಉಳ್ಳಾಗಡ್ಡಿ

KannadaprabhaNewsNetwork | Published : Jul 25, 2024 1:18 AM

ಸಾರಾಂಶ

ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ನೈಯಾಪೈಸೆಯ ಯೋಜನೆ ನೀಡದೆ ಕಡೆಗಣಿಸಿದೆ.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ನೈಯಾಪೈಸೆಯ ಯೋಜನೆ ನೀಡದೆ ಕಡೆಗಣಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರುದ್ಯೋಗ ಬಡತನ ನಿರ್ಮೂಲನೆಯಂತಹ ಆದ್ಯತೆ ವಲಯಗಳ ಕಡೆಗೆ ಕಿಂಚತ್ತು ಗಮನ ನೀಡದ ಕೇಂದ್ರ ಸರ್ಕಾರದ ಬಜೆಟ್ ನಿರಾಸದಾಯಕವಾಗಿದೆ ಎಂದರು.

ಹಣಕಾಸು ಸಚಿವೆ ನಿರ್ಮಲಾ ಸೀತರಾಂ ಅವರು ಮಂಡಿಸಿದ ಕೇಂದ್ರದ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಯಾವ ಯೋಜನೆಯನ್ನೂ ನೀಡಿಲ್ಲ. ಮಧ್ಯಮ ವರ್ಗಕ್ಕೆ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ. ಕಳೆದ ಬಜೆಟ್‌ಗೆ ಹೋಲಿಸಿದರೆ ಯಾವುದೇ ಬದಲಾವಣೆಯಿಲ್ಲ, ನಮ್ಮ ರಾಜ್ಯದಿಂದಲ್ಲೇ ನಾಲ್ವರು ಸಚಿವರಿದ್ದರೂ ನಿರೀಕ್ಷಿತ ಮಟ್ಟದಲ್ಲಿ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇವಲ ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಈ ಬಜೆಟ್ ಮಂಡನೆ ಮಾಡಿದ್ದಾರೆ. ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ತೆರಿಗೆ ತುಂಬುವ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಅಭಿವೃದ್ದಿ ವಿಚಾರದಲ್ಲಿ ಸಂಪೂಣವಾಗಿ ಕಡೆಗಣಿಸಿರುವುದು ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.

ಸಿಎಂ ಆರ್ಥಿಕ ಸಲಹೆಗಾರ, ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು, ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ಕೆರೆಗಳ ನಿರ್ಮಾಣಕ್ಕಾಗಿ ₹೯೭೦ ಕೋಟಿ ಅನುದಾನ ತರುವ ಮೂಲಕ ೨೪ ಕೆರೆಗಳಿಗೆ ಶೀಘ್ರದಲ್ಲೇ ನೀರು ತುಂಬಿಸುವ ಕಾರ್ಯಕ್ಕೆ ಮುಖ್ಯಮಂತ್ರಿಯವರನ್ನು ಕರೆಯಿಸಿ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡುವ ಸಂಕಲ್ಪವನ್ನು ಶಾಸಕ ರಾಯರಡ್ಡಿ ಹೊಂದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮಣ್ಣ ಸಾಲಭಾವಿ, ಕರಿಯಪ್ಪ ಗುರಿಕಾರ, ಸಿದ್ದಪ್ಪ ಕಟ್ಟಿಮನಿ, ನಾಗರಾಜ ತಲ್ಲೂರು, ಪುನೀತ ಕೊಪ್ಪಳ ಮತ್ತಿತರರು ಇದ್ದರು.

Share this article