ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಮಾಜಿ ಸೈನಿಕರ ಸಂಘದಿಂದ ಜು. ೨೬ರಂದು ೨೫ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಗ್ರಾಮದ ಪ್ರಭುಸ್ವಾಮಿ ಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಕಡ್ಲಿ ಹೇಳಿದರು.
ಸಂಜೆ ೬ ಗಂಟೆಗೆ ವೇದಿಕೆ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಆನಂದವನಮಠದ ಗುರುದತ್ತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಾದ ಮಹಬೂಬ್‌ಸಾಬ್ ತಂಡೂರ, ಪುಟ್ಟಪ್ಪ ಲಮಾಣಿ, ಶಿವಲಿಂಗೇಶ್ವರ ಪಾಟೀಲ, ಶಶಿಧರ ಕಳ್ಳಿಹಾಳ ಕುಟುಂಬಸ್ಥರನ್ನು ಗೌರವಿಸಲಾಗುತ್ತಿದೆ. ವಿಶೇಷವಾಗಿ ಅಗಡಿ ಗ್ರಾಪಂ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದ ಆನಂತರ ಗ್ರಾಮದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.ಮಾಜಿ ಸೈನಿಕರ ಸಂಘದ ಸುರೇಶ ಕುಂಬಾರ್, ಇಮಾಮಾ ಹುಸೇನ್ ಕ್ವಾಟಿನಾಯಕ್, ಮಲ್ಲಿಕಾರ್ಜುನ ಮಣ್ಣೂರ, ಶಿವಪುತ್ರಪ್ಪ ಕಡ್ಲಿ, ಮಹೇಶ ಕುಂಬಾರ, ಹೇಮಂತ ಬಸೇಗಣ್ಣಿ, ನಿವೃತ್ತ ಶಿಕ್ಷಕ ಹನುಮಂತಪ್ಪ ಗೊಲ್ಲರ ಇದ್ದರು.ಯುವಕರಿಗೆ ಸೈನ್ಯ ಸೇರಲು ಪ್ರೇರಣೆ: ದೇಶ ಸೇವೆಗೆ ಅಗಡಿ ಗ್ರಾಮವು ೩೦ ಸೈನಿಕರನ್ನು ಕೊಡುಗೆ ನೀಡಿದ್ದು, ಇದರಲ್ಲಿ ೨೫ ಜನರು ಈಗಾಗಲೇ ಸೇವೆ ಪೂರ್ಣಗೊಳಿಸಿದ್ದಾರೆ. ಓರ್ವ ಸೈನಿಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಗ್ರಾಮದ ಮಾಜಿ ಸೈನಿಕರ ಸಂಘದಿಂದ ಯುವಕರಿಗೆ ಸೈನ್ಯ ಸೇರಲು ಪ್ರೇರಣೆ ನೀಡುವ ಜತೆಗೆ ಶಾಲೆಗಳಲ್ಲಿನ ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಉದ್ದೇಶ ಹೊಂದಿದ್ದು, ಗ್ರಾಮಸ್ಥರು ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ಅಗಡಿ ಗ್ರಾಮದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಕಡ್ಲಿ ಹೇಳಿದರು.