ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರವು ದೇಶದ ಬಡ ಕೂಲಿಕಾರ್ಮಿಕರು ಗ್ರಾಪಂ ವ್ಯಾಪ್ತಿಯಡಿ ನರೇಗಾ ಕೂಲಿ ಮಾಡಿ ವೇತನ ಪಡೆದು ಜೀವನ ಸಾಗಿಸಲಿ ಎಂದು ಯೋಜನೆ ಜಾರಿ ಮಾಡಿದೆ. ಆದರೆ, ಸಮಯಕ್ಕೆ ಸರಿಯಾಗಿ ಸರ್ಕಾರ ಕೂಲಿ ಮೊತ್ತ ಪಾವತಿ ಮಾಡದೇ ಇರುವುದು ಬಡ ಕೂಲಿಕಾರರಲ್ಲಿ ನಿರಾಸೆ ಮೂಡಿಸಿದೆ.ತಾಲೂಕಿನಲ್ಲಿ ನರೇಗಾ ಯೋಜನೆ ಅಧಿಕಾರದಲ್ಲಿರುವ ಕೆಲ ಗ್ರಾಪಂ ಜನಪ್ರತಿನಿಧಿಗಳ, ಯೋಜನೆಯ ಅಧಿಕಾರಿಗಳ, ನರೇಗಾ ಮೇಟಿಗಳ ಅಕ್ರಮದಿಂದ ಸೊರಗುತ್ತಾ ಸಾಗುತ್ತಿದೆ. ನಿಜವಾಗಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಸಮರ್ಪಕ ವೇತನ ಸಿಗದೆ ತಾರತಮ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.ಕೆಲಸಕ್ಕೆ ಬಾರದೇ ವೇತನ ಪಡೆಯುವ ಕಾರ್ಮಿಕನ ಹಣ ವಿಭಜಿಸಲ್ಪಡುತ್ತದೆ. ಯೋಜನೆಯ ಮೇಟಿ, ಸಂಬಂಧಪಟ್ಟ ಅಧಿಕಾರಿಗಳ ಕೈಗಿಷ್ಟು ಸೇರುತ್ತದೆ. ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಎನ್‌ಎಂಎಂಎಸ್ ಅಳವಡಿಕೆ ಮಾಡಿದರೂ ಮೇಟಿಗಳ ವಾಮಮಾರ್ಗಕ್ಕೆ ಎನ್‌ಎಂಎಂಎಸ್ ಕೂಡ ನಿಷ್ಕ್ರಿಯವಾಗಿದೆ. ಕೂಲಿ ಮಾಡುವ ಮತ್ತು ಮಾಡದಿರುವ ಕಾರ್ಮಿಕನ ಭಾವಚಿತ್ರಗಳು ಮಾತ್ರ ಸಮರ್ಪಕವಾಗಿ ಗ್ರಾಪಂ ದಾಖಲೆಗಳಲ್ಲಿ ಕಂಡುಬರುತ್ತವೆ. ಸರ್ಕಾರ ಯೋಜನೆಯಲ್ಲಿ ಪಾರದರ್ಶಕತೆ ತರಲು ಹಲವು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದರೂ ಪಾರದರ್ಶಕತೆ ಕಂಡುಬರುತ್ತಿಲ್ಲ.
ಕೆಲಸವಿಲ್ಲ: ನರೇಗಾ ದಿನಾಚರಣೆಯ ದಿನದಂದೆ ತಾಲೂಕಿನ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಬಹುತೇಕ ಗ್ರಾಪಂಗಳ ಕೂಲಿ ಕಾರ್ಮಿಕರು ಫಾರಂ ೬ ನೀಡಿದರೂ ಕೆಲಸವನ್ನೇ ನೀಡದಿರುವುದು ಯೋಜನೆಯ ನಿಜಸ್ಥಿತಿ ತಿಳಿಯುತ್ತದೆ. ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ೬ ವಾರಗಳ ಎನ್‌ಎಂಆರ್ ಮೊತ್ತ ಈವರೆಗೂ ಪಾವತಿಯಾಗಿಲ್ಲ. ತಾಲೂಕಿನ ೨೧ ಗ್ರಾಪಂಗಳ ಪೈಕಿ ೧೦ ಪಂಚಾಯಿತಿ ಕೂಲಿಕಾರ್ಮಿಕರು ಮಾತ್ರ ಕೆಲಸದ ಸ್ಥಳದಲ್ಲಿ (ಶುಕ್ರವಾರ) ನರೇಗಾ ದಿನ ಆಚರಿಸಿರುವುದು ಕಂಡುಬಂದಿದೆ.ಮಾನವ ದಿನ ಹೆಚ್ಚಿಸಿ: ಕೇಂದ್ರ ಸರ್ಕಾರ ಕೂಡಲೇ ಕಾರ್ಮಿಕರ ಬಾಕಿ ಕೂಲಿ ಮೊತ್ತವನ್ನು ಬಿಡುಗಡೆ ಮಾಡಬೇಕು. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಕೂಡಲೇ ಕೆಲಸವನ್ನು ನೀಡಬೇಕು. ಕೆಲಸ ಮಾಡದೆ ಇರುವ ಕಾರ್ಮಿಕರ ಖಾತೆಗೆ ಹಣ ಹೋಗದಂತೆ ಅಗತ್ಯ ಕ್ರಮ ವಹಿಸಬೇಕು. ಬರಗಾಲ ಇರುವುದರಿಂದ ೫೦ ಹೆಚ್ಚುವರಿ ಮಾನವ ದಿನಗಳನ್ನು ಕೂಡಲೇ ನೀಡಬೇಕು ಎಂದು ಗ್ರಾಕೂಸ್ ರಾಜ್ಯ ಕಾರ್ಯಕರ್ತ ಮಲ್ಲೇಶ್ ಕೋಗಳಿ ಆಗ್ರಹಿಸಿದರು.