ಮೇಕೆದಾಟು ಯೋಜನೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಅನುಮತಿ ಕೊಡಿಸುವ ಅವಶ್ಯಕತೆ ಇಲ್ಲ. ಕಾನೂನು ನಮ್ಮ ರಕ್ಷಣೆಗಿದೆ. ಹಾಗಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರವಾಗಿ ಹೇಳಿದರು.
ಮಂಡ್ಯ : ಮೇಕೆದಾಟು ಯೋಜನೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಅನುಮತಿ ಕೊಡಿಸುವ ಅವಶ್ಯಕತೆ ಇಲ್ಲ. ಕಾನೂನು ನಮ್ಮ ರಕ್ಷಣೆಗಿದೆ. ಹಾಗಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರವಾಗಿ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಬುಡುಬುಡಿಕೆ ಮಾತು, ಯೂ- ಟರ್ನ್ ಮಾತಿನ ಅಗತ್ಯವಿಲ್ಲ. ಅವರ ಈ ಮಾತುಗಳನ್ನು ನೋಡಿದ್ದೇವೆ. ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದನ್ನು ನಾವು ಮಂಡ್ಯದಲ್ಲಿ ತಿಳಿಸಿದ್ದೇವೆ. ಈ ರೀತಿ ಹೇಳಲು ಮೂರ್ಖನೇ ಎಂದು ಹೇಳಿರುವುದನ್ನೂ ನೋಡಿದ್ದೇವೆ. ಕಾನೂನು ನಮಗೆ ಈ ವಿಚಾರದಲ್ಲಿ ರಕ್ಷಣೆ ನೀಡಲಿದೆ. ಕೇಂದ್ರ ಸರ್ಕಾರಕ್ಕೆ ಒಂದು ಅಧಿಕಾರವಿದ್ದು, ಪ್ರಧಾನಮಂತ್ರಿ ಹಾಗೂ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ಇವರು (ಎಚ್.ಡಿ.ಕುಮಾರಸ್ವಾಮಿ) ಹೊಸದಾಗಿ ಪಂಚೆ ಹಾಕಿದ್ದನ್ನು ಬಿಟ್ಟರೆ ಎಂದೂ ರೈತರ ಪರ ನಿಂತಿಲ್ಲ. ಖಾಲಿ ಮಾತನಾಡುತ್ತಿದ್ದಾರೆ. ಅವರ ಬದುಕಿನಲ್ಲಿ ರೈತರ ಪರವಾಗಿ ನಿಂತ ಒಂದು ಉದಾಹರಣೆಯೂ ಇಲ್ಲ. ಸದ್ಯಕ್ಕೆ 10 ಸಾವಿರ ಜನರಿಗೆ ಉದ್ಯೋಗ ನೀಡುವ ಕಾರ್ಖಾನೆ ಮಾಡುವುದಾಗಿ ಹೇಳಿದ್ದು, ಅದನ್ನು ಮಾಡಲಿ. ನಾವು ಸಹಕಾರ ನೀಡುತ್ತೇವೆ ಎಂದರು.
ಮೇಕೆದಾಟು ಪಾದಯಾತ್ರೆ ಮಾಡಿದಾಗಲೂ ಅವರು ಬೆಂಬಲ ನೀಡಲಿಲ್ಲ. ರೈತರ ಪರವಾದ ಯೋಜನೆಗಳಿಗೂ ಸಹಕಾರ ನೀಡಿದ ಉದಾಹರಣೆ ಇಲ್ಲ. ಅವರು ರೈತರ ಪರವಾಗಿ ನಿಂತಿದ್ದ ಉದಾಹರಣೆಗಳ ದಾಖಲೆ ಮಾಧ್ಯಮಗಳ ಬಳಿ ಇದ್ದರೆ ಅವುಗಳನ್ನು ನೀಡಿ. ಕಾವೇರಿ ವಿಚಾರದಲ್ಲಿ ಕಾನೂನಿನಲ್ಲಿ ಕರ್ನಾಟಕ ರಾಜ್ಯಕ್ಕೆ ಶಕ್ತಿ ಇದೆ. ನಮ್ಮ ಲೆಕ್ಕದ ಪ್ರಕಾರ 71 ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗಿದ್ದು, ನಮ್ಮ ಮೇಕೆದಾಟು ಅಣೆಕಟ್ಟಿನ ಸಾಮರ್ಥ್ಯ ಕೇವಲ 66 ಟಿಎಂಸಿ. ಸಮುದ್ರಕ್ಕೆ ಹೋಗುತ್ತಿರುವ ಹೆಚ್ಚುವರಿ ನೀರನ್ನು ಸಂರಕ್ಷಣೆ ಮಾಡಿಕೊಂಡು ಬಳಸಿಕೊಳ್ಳಬೇಕು. ಅದಕ್ಕಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಿ ಎಂದು ಕೇಳುತ್ತಿದ್ದೇವೆ ಎಂದು ತಿಳಿಸಿದರು.