ಹೊಯ್ಸಳೇಶ್ವರ ದೇವಾಲಯಕ್ಕೆ ಯುನೆಸ್ಕೋ ತಂಡ ಭೇಟಿ

KannadaprabhaNewsNetwork | Published : Aug 10, 2024 1:35 AM

ಸಾರಾಂಶ

ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ವಿಶ್ವ ಪ್ರಸಿದ್ಧ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಯುನೆಸ್ಕೋ ನಿರ್ದೇಶಕರಾದ ಲೆಜಾರೆ ಎಲೌಂಡು ಅಸ್ಸೋಮೋ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ ಹಾಸನ ಜಿಲ್ಲೆಯ ಹಳೇಬೀಡು- ಬೇಲೂರು ದೇವಾಲಯ ವಿಶ್ವಪಾರಂಪರ್ಯ ಪಟ್ಟಿಯಲ್ಲಿ ಸೇರಲು ಎಲ್ಲಾ ರೀತಿಯ ಅರ್ಹತೆ ಹೊಂದಿರುವ ದೇವಾಲಯ. ಈ ದೇವಾಲಯ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ಭೇಟಿ ನೀಡಿದ ಮೇಲೆ ಸಂತೋಷ ತಂದಿದೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಭಾರತ ದೇಶದ ಅತ್ಯುತ್ತಮ ಹಾಗೂ ಪರಂಪರೆಯ ಇತಿಹಾಸ ಹೊಂದಿದ ದೇಗುಲ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ. ಇಂತಹ ದೇವಾಲಯಗಳನ್ನು ಹಿಂದಿನ ರೂಪದಲ್ಲಿ ಉಳಿಸುವ ಜವಾಬ್ದಾರಿಯನ್ನು ಯುನೆಸ್ಕೋ ತಂಡ ಮಾಡಲಿದೆ ಎಂದು ಯುನೆಸ್ಕೋ ತಂಡದ ನಿರ್ದೇಶಕರಾದ ಲೆಜಾರೆ ಎಲೌಂಡು ಅಸ್ಸೋಮೋ ತಿಳಿಸಿದ್ದಾರೆ.

ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ವಿಶ್ವ ಪ್ರಸಿದ್ಧ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಯುನೆಸ್ಕೋ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಅದರಲ್ಲೂ ಹಾಸನ ಜಿಲ್ಲೆಯ ಹಳೇಬೀಡು- ಬೇಲೂರು ದೇವಾಲಯ ವಿಶ್ವಪಾರಂಪರ್ಯ ಪಟ್ಟಿಯಲ್ಲಿ ಸೇರಲು ಎಲ್ಲಾ ರೀತಿಯ ಅರ್ಹತೆ ಹೊಂದಿರುವ ದೇವಾಲಯ. ಈ ದೇವಾಲಯ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ಭೇಟಿ ನೀಡಿದ ಮೇಲೆ ಸಂತೋಷ ತಂದಿದೆ ಎಂದರು.

ಪಾರಂಪರಿಕ ತಾಣಗಳ ರಕ್ಷಣೆ ಅತ್ಯವಶ್ಯಕ: ಈ ಭೇಟಿಯ ಉದ್ದೇಶ ಹಿಂದಿನವರು ಉಳಿಸಿದ ದೇವಾಲಯಗಳು, ಕಟ್ಟಡಗಳು ಹಾಗೂ ಸಂಸ್ಕೃತಿಯನ್ನು ಅದರ ಪರಂಪರೆಯನ್ನು ಕಾಪಾಡುವುದು ಮತ್ತು ಸಂರಕ್ಷಣೆ ಮಾಡುವುದು. ಜೊತೆಗೆ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಯುನೆಸ್ಕೋ ತಂಡ ಭೇಟಿ ನೀಡಿದೆ ಎಂದು ತಿಳಿದರು.

ಸ್ಥಳೀಯರ ಸಹಕಾರ ಅತ್ಯಗತ್ಯ: ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಳೇಬೀಡು ದೇವಾಲಯದ ಸಂರಕ್ಷಣೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆಗೆ ಸ್ಥಳೀಯರು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಉಳಿಸುವ, ಬೆಳೆಸುವ ಅವುಗಳನ್ನು ಗೌರವಿಸುವ ಮತ್ತು ಕಾಪಾಡುವುದು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಪಾರಂಪರಿಕ ತಾಣಗಳು ಅಭಿವೃದ್ಧಿಯನ್ನು ಕಾಣುತ್ತವೆ. ಶತಮಾನಗಳು ಕಳೆದರೂ ಅವುಗಳು ಬಿಂಬಿತವಾಗುತ್ತಿರಬೇಕು. ಈ ದೃಷ್ಠಿಯಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಪ್ರೇರಣೆ ಹಾಗೂ ಇಚ್ಛಾಶಕ್ತಿ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂದರು.

ದೇವಾಲಯಗಳ ಸಂಪ್ರದಾಯ ಯಥಾಸ್ಥಿತಿಯಲ್ಲಿ ಉಳಿಸುವುದು ಆದ್ಯ ಕರ್ತವ್ಯ. ದೇವಾಲಯದ ಸಾಪ್ರದಾಯಿಕ ಆಚರಣೆಗಳ ಸಂಪ್ರದಾಯಗಳು, ಸಂಸ್ಕೃತಿ ಇವೆಲ್ಲವನ್ನೂ ಗೌರವಿಸುವುದು ನಮ್ಮ ಕರ್ತವ್ಯ, ಜನರ ನಂಬಿಕೆ, ಭಾವನೆಗಳಿಗೆ ಪೂರಕವಾಗಿ ನಡೆದುಕೊಳ್ಳಲು ಯಾವುದೇ ತೊಂದರೆ ಇಲ್ಲ ವೆಂದು ಅವರು ತಿಳಿಸಿದರು.

ಮಾನವೀಯ ಮೌಲ್ಯಗಳ ಪ್ರತೀಕ: ಯುನೆಸ್ಕೋ ತಂಡ ಸಹಾಯಕ ನಿರ್ದೇಶಕರಾದ ಜ್ಯೋತಿ ಅಗ್ರಹಾರ ಮಾತನಾಡಿ, ದೇವಾಲಯಗಳು ನಮ್ಮ ಆಸ್ಮಿತತೆಗಳು. ಅವುಗಳನ್ನುರಕ್ಷಣೆ ಮಾಡುವುದು ಇಲಾಖೆಯ ಜವಾಬ್ದಾರಿ ಅದನ್ನು ನಾವು ಅಚ್ಚುಕಟ್ಟಾಗಿ ಮಾಡಿದ್ದೇವೆ. ಜೊತೆಗೆ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಲು, ರಕ್ಷಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಶಾಸಕರ ಮನವಿ: ವಿಶ್ವ ಭೂಪಟದಲ್ಲಿ ಹೆಸರು ಮಾಡಿರುವ ಹಾಗೂ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಳೇಬೀಡು ಬೇಲೂರು ದೇವಾಲಯಗಳನ್ನು ಹಾಗೂ ದೇವಾಲಯವಿರುವ ಪಟ್ಟಣಗಳು ಯಾವುದೇ ಅಭಿವೃದ್ಧಿ ಕಂಡಿಲ್ಲ. ಪ್ರವಾಸೋದ್ಯಮದ ಸೌಕರ್ಯಗಳಿಲ್ಲ, ಅಭಿವೃದ್ದಿ ಅಗತ್ಯವಿದ್ದು, ಉಜೈನಿ, ಮಹಾಬಲೇಶ್ವರ ದೇವಾಲಯಗಳ ಅಭಿವೃದ್ಧಿ ರೀತಿಯಲ್ಲಿಯೇ ಹಳೇಬೀಡು ಬೇಲೂರಿಗೆ ದೇವಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಯಾತ್ರಿ ನಿವಾಸ ಹಾಗೂ ಸುಸಜ್ಜಿತವಾದ ರಸ್ತೆ, ವಿದ್ಯುತ್, ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಅವಶ್ಯಕತೆ ಇದೆ. ಈ ವಿಷಯವಾಗಿ ಪ್ರದಾನಮಂತ್ರಿಗಳಿಗೂ ಒಂದು ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿನ ಕೇಂದ್ರ ಪುರಾತತ್ವ ಇಲಾಖೆಯ ಅಧ್ಯಕ್ಷರಾದ ಬಿಪಿನ್ ನೇಗಿ, ಹಾಸನ ಅಧಿಕಾರಿ ಗೌತಮ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶಿಲ್ಪ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ವೀರ ರಾಘವನ್, ಕುಮಾರ್, ಛಾಯಾಗ್ರಾಹಕ ಬಸವರಾಜು, ಬೇಲೂರು ತಹಸೀಲ್ದಾರ್ ಮಮತಾ, ಇ.ಒ.ಸತೀಶ್ ಗ್ರಾಮಪಂಚಾಯಿತಿ ಅಧ್ಯಕ್ಷ ನಿತ್ಯಾನಂದ್.ಪಿಡಿ.ಒ.ವಿರುಪಾಕ್ಷ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಾ. ಎಮ್.ಸಿ.ಕುಮಾರ್, ಅರ್ಚಕರಾದ ಸುಬ್ರಮಣ್ಯ ಮತ್ತು ಉದಯ್ ಕುಮಾರ್ ಮುಂತಾದವರು ಹಾಜರಿದ್ದರು. ಯುನೆಸ್ಕೋ ತಂಡದವರಿಗೆ ಸ್ಥಳಿಯ ಮಾರ್ಗದರ್ಶಿ ರಾಘವೇಂದ್ರ(ರಘು) ಫ್ರೆಂಚ್ ಭಾಷೆಯಲ್ಲಿ ದೇವಾಲಯದ ಮಾಹಿತಿ ನೀಡಿದರು.

Share this article