ಕನ್ನಡಪ್ರಭ ವಾರ್ತೆ, ತುಮಕೂರುಮೊನ್ನೆ ಮೊನ್ನೆ ತುಮಕೂರು, ಆಚೆ ಮೊನ್ನೆ ಹೆಬ್ಬೂರು, ವಾರದ ಹಿಂದೆ ತಿಪಟೂರು ಹೀಗೆ ಕಳೆದ 15 ದಿವಸಗಳಿಂದ ಮತ್ತೆ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಕಲ್ಪತರು ಜಿಲ್ಲೆಯ ಜನರನ್ನು ಕಂಗೆಡೆಸಿದೆ.ಕೋವಿಡ್ ಸಮಯದಲ್ಲಿ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿನಲ್ಲಿ ಸಂಚರಿಸುತ್ತಿದ್ದ ನರಹಂತಕ ಚಿರತೆ ಪುಟಾಣಿ ಮಗು ಸೇರಿದಂತೆ ಐದು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. 4 ಮಂದಿಯನ್ನು ಬಲಿ ತೆಗೆದುಕೊಂಡಾಗ ಸರ್ಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದನ್ನು ಅವರ ಪೋಷಕರ ಎದುರೇ ಚಿರತೆಯೊಂದು ಹೊತ್ತೊಯ್ದು ಸಾಯಿಸಿದ್ದು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು.ನರಹಂತಕ ಚಿರತೆ ಸೆರೆಗೆ ಬಿದ್ದಿತ್ತು ; ಕೂಡಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿ ಚಿರತೆ ಸೆರೆಗೆ ಬೋನುಗಳನ್ನು ಇಟ್ಟಿತ್ತು. ಈ ವೇಳೆ 8 ಚಿರತೆಗಳು ಬೋನಿಗೆ ಬಿದ್ದರೂ ನರಹಂತಕ ಚಿರತೆ ಮಾತ್ರ ಸೆರೆ ಸಿಕ್ಕಲಿಲ್ಲ. ಕಡೆಗೆ ನಾಗರಹೊಳೆಯಿಂದ ಆನೆಗಳನ್ನು ಕರೆಸಿ ಅದರ ಮೇಲೆ ಕುಳಿತು ಚಿರತೆ ಹೆಜ್ಜೆ ಗುರುತನ್ನು ಪತ್ತೆ ಹಚ್ಚಲಾಯಿತು. ಕಡೆಗೂ ನರಹಂತಕ ಚಿರತೆಯ ಚಲನವಲನ ಗಮನಿಸಿ ಅದನ್ನು ಸೆರೆ ಹಿಡಿಯಲಾಗಿತ್ತು. ಆಗ ಜಿಲ್ಲೆಯಲ್ಲಿ ಎಲ್ಲಂದರಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಮೊದಲೆಲ್ಲಾ ಅರಣ್ಯದಲ್ಲಿ ಮಾತ್ರ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಾಡಿನಲ್ಲಿ ಆಹಾರ ಸಿಗದೆ ಕಾಡಂಚಿನ ಹಳ್ಳಿಗಳಿಗೆ ಬಂದು ಕುರಿ, ಮೇಕೆ, ಹಸುವಿನ ಕುರು, ನಾಯಿಗಳನ್ನು ಶಿಕಾರಿ ಮಾಡಿ ಹೋಗುತ್ತಿತ್ತು. ಬಳಿಕ ಗುಬ್ಬಿ, ಗ್ರಾಮಾಂತರ ಮತ್ತು ಕುಣಿಗಲ್ ತಾಲೂಕುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳತೊಡಗಿತು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಶುಕ್ರವಾರ ಬಿದ್ದಿದೆ. ವಸತಿ ಶಾಲೆಯ ಸಮೀಪ ಚಿರತೆ ಓಡಾಡುತ್ತಿರುವ ಕುರಿತು ಶಾಲೆಯ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಸೆರೆ ಹಿಡಿದ ಚಿರತೆಯನ್ನು ಸ್ಥಳಾಂತರಿಸಲಾಗಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಗಣತಿಯಾಗದಿದ್ದರೂ ಅವುಗಳ ಸಂಖ್ಯೆ ಗಣನೀಯವಾಗಿ ಏರಿದೆ. ಕೋಳಿ ತ್ಯಾಜ್ಯಗಳನ್ನು ಎಗ್ಗಿಲ್ಲದೆ ಬಿಸಾಡುತ್ತಿರುವುದರಿಂದ ಅಲ್ಲಿ ಓಡಾಡುವ ಪ್ರಾಣಿಗಳನ್ನು ಚಿರತೆ ಹಿಡಿದು ತಿನ್ನುತ್ತಿವೆ. ದೂರುಗಳು ಬಂದ ಕಡೆ ಬೋನುಗಳನ್ನು ಇಟ್ಟು ಚಿರತೆ ಹಿಡಿಯಬಹುದು ಆದರೆ ಕೋಳಿ ತ್ಯಾಜ್ಯಗಳ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವುದು ಅತ್ಯವಶ್ಯ.ಅನುಪಮ, ಡಿಎಫ್‌ಓ