ಕನ್ನಡಪ್ರಭವಾರ್ತೆ ತಿಪಟೂರು
ಪ್ರತಿಯೊಂದು ಗ್ರಾಮಗಳಿಗೂ ದೇವಾಲಯಗಳು, ಶಾಲೆಗಳು ಎಷ್ಟು ಮುಖ್ಯವೊ ಕೆರೆ-ಕಟ್ಟೆಗಳು, ಹಳ್ಳಕೊಳ್ಳಗಳು ಸಹ ಅಷ್ಟೆ ಮುಖ್ಯವಾಗಿದ್ದು ಇವುಗಳಿಲ್ಲದೆ ರೈತನ ಬದುಕು ಬರಡಾಗಿ ಬಿಡುತ್ತದೆ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಧ್ಯಕ್ಷರಾದ ಶ್ರೀ ಗುರುಪರದೇಶೀಕೇಂದ್ರ ಸ್ವಾಮಿಗಳು ಕರೆ ನೀಡಿದರು.ತಾಲ್ಲೂಕಿನ ಕೆರೆಗೋಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಭೂಮೇಶ್ವರ ಕಟ್ಟೆ ಕೆರೆ ಪುನಶ್ಚೇತನದ ಭೂಮಿ ಪೂಜೆಯನ್ನು ನೆರವೇರಿಸಿದ ಶ್ರೀಗಳು ಆಶೀರ್ವಚನ ನೀಡಿ ನಮ್ಮ ಪೂರ್ವಿಕರು ಕೆರೆಕಟ್ಟೆಗಳ ಅವಶ್ಯಕತೆ ಮನಗಂಡಿದ್ದರಿಂದ ಗ್ರಾಮದವರೆಲ್ಲರೂ ಒಗ್ಗೂಡಿಕೊಂಡು ಕೆರೆಕಟ್ಟೆಗಳನ್ನು ನಿರ್ಮಿಸಿಕೊಂಡು ಅವುಗಳ ಹೂಳು ತೆಗೆದು ಹೆಚ್ಚು ದಿನಗಳು ನೀರು ನಿಲ್ಲುವಂತೆ ಮಾಡಿಕೊಳ್ಳುತ್ತಿದ್ದರು. ಈಗ ಗ್ರಾಮಗಳಲ್ಲಿ ಒಗ್ಗಟ್ಟು ಇಲ್ಲದಿರುವುದು ಹಾಗೂ ಕೆರೆಕಟ್ಟೆಗಳ ಬಗ್ಗೆ ನಿರಾಸಕ್ತಿ ಮೂಡಿದ್ದು ಕೆರೆಕಟ್ಟೆಗಳ ನಿರ್ವಹಣೆಯನ್ನು ಸರ್ಕಾರವೇ ನಿರ್ವಹಸಿಬೇಕಾದ ಸ್ಥಿತಿಗತಿ ಇದೆ. ಸರ್ಕಾದಿಂದಲೂ ಸರಿಯಾಗಿ ಸ್ಫಂದನೆ ಸಿಗದಿರುವುದನ್ನ ಗುರ್ತಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಚ್ಚುಕಟ್ಟಾಗಿ ಇವುಗಳ ನಿರ್ವಹಣೆ ನಡೆಯುತ್ತಿದೆ. ಈಗಾಗಲೆ ಈ ಯೋಜನೆಯಿಂದ ರಾಜ್ಯದಲ್ಲಿ ೧೦೦೦ ಕ್ಕೂ ಹೆಚ್ಚು ಹಾಗೂ ತುಮಕೂರು ಜಿಲ್ಲೆಯಲ್ಲಿ ೧೦೭ ಕೆರೆಗಳನ್ನು ವಿಶೇಷವಾಗಿ ತಿಪಟೂರು ತಾಲೂಕಿನಲ್ಲಿ ಇದುವರೆಗೂ ೧೫ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಕೆರೆಗೋಡಿಯಲ್ಲಿ ೧೬ ನೇ ಕೆರೆ ಪುನಶ್ಚೇತನಗೊಳ್ಳುತ್ತಿದ್ದು ನಾವೆಲ್ಲರೂ ಕೆರೆ ಪುನಶ್ಚೇತನದ ಕಾರ್ಯ ಯೋಜನೆಗೆ ಸಹಕಾರಿಯಾಗಿ ನಿಲ್ಲಬೇಕಾಗಿದೆ. ರಾಜ್ಯದ ಬಡ ಜನತೆಯ ಏಳಿಗೆಗಾಗಿ ಸರ್ಕಾರದ ಪರ್ಯಾಯವೆಂಬಂತೆ ದೇವಸ್ಥಾನ ಮಠ ಮಂದಿರಗಳ ಜೀರ್ಣೋದ್ದಾರ, ಶಾಲೆಗಳಿಗೆ ಡೆಸ್ಕ್ ಬೆಂಚ್ ವಿತರಣೆ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ನೇಮಕ, ಅಶಕ್ತರಿಗೆ ಮಾಶಾಸನ ವಿತರಣೆ, ವಾತ್ಸಲ್ಯ ಮನೆ ರಚನೆ, ರೈತರಿಗೆ ಕೃಷಿ ರೈತಕ್ಷೇತ್ರ ಪಾಠಶಾಲೆ, ಅದ್ಯಯನ ಪ್ರವಾಸ, ಬಹುಮುಖ್ಯವಾಗಿ ಕೆರೆ ಪುನಶ್ಚೇತನ ಹೀಗೆ ಹತ್ತು ಹಲವಾರು ಸಮಾಜುಮುಖಿ ಸೇವೆಗಳನ್ನು ಧರ್ಮಸ್ಥಳದ ಯೋಜನೆ ಕೈಗೊಳ್ಳುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ತಿಳಿಸಿದರು. ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಯೋಜನೆಯ ಕಾರ್ಯಕ್ರಮಗಳು ಕೆರೆ ಕಾಮಗಾರಿಯ ಸಂಧರ್ಭ ಗ್ರಾಮಸ್ಥರು ಯೋಜನೆಗೆ ಸಹಕರಿಸುವ ಬಗೆಯ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿ ಕೆರೆಗೋಡಿ ಚಿಕ್ಕಕಟ್ಟೆ ಪುನಶ್ಚೇತನಕ್ಕೆ ಯೋಜನೆಯಿಂದ ೪.೯೯ಲಕ್ಷ ರುಪಾಯಿಗಳನ್ನು ಮಂಜೂರುಗೊಳಿಸಿದ್ದು ಗ್ರಾಮಸ್ಥರು ಸಂಪೂರ್ಣ ಪ್ರಯೋಜನ ಪಡೆದು ತಾಲೂಕಿನ ಮಾದರಿ ಕಟ್ಟೆಯಾಗಿ ಮಾರ್ಪಾಡಿಸಲು ಯೋಜನೆಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ರಂಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಬೀಳೂರು, ಯೋಜನೆಯ ತಾಲೂಕು ಯೋಜನಾಧಿಕಾರಿ ಉದಯ್ ಕೆ, ಕೆರೆ ಸಮಿತಿ ಅದ್ಯಕ್ಷರಾದ ಯೋಗಾನಂದಮೂರ್ತಿ, ಉಪಾದ್ಯಕ್ಷರಾದ ನಾಗರಾಜ್, ಕಾರ್ಯದರ್ಶಿ ಶಿವಲಿಂಗಪ್ಪ, ಗುಡಿಗೌಡರಾದ ಮಹಲಿಂಗಪ್ಪ, ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕ ವಿನೋದ್, ಸೊಸೈಟಿ ಅದ್ಯಕ್ಷರಾದ ಕೆ.ಎಸ್ ದೇವರಾಜ್ ಸೇವಾ ಪ್ರತಿನಿಧಿಗಳಾದ ರೂಪ, ಮಹಾಲಕ್ಷ್ಮಿ ಕೆರೆಗೋಡಿ ಗ್ರಾಮದ ಮುಖಂಡರಾದ ನಾಗರಾಜ್, ಶಂಕರಪ್ಪ, ನಿಂಗಪ್ಪ, ಪರಮೇಶ್ ಪೂಜಾರ್, ಕುಪ್ಪೂರು ಲಿಂಗಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.