ದೊಡ್ಡಬಳ್ಳಾಪುರ: ಇಂದಿನ ಮಣ್ಣಿನ ಸಂರಕ್ಷಣೆ ನಾಳಿನ ಅನ್ನದ ಭದ್ರತೆ ಎಂಬ ಸಂದೇಶದೊಂದಿಗೆ ರೈತರಲ್ಲಿ ಮುಂಗಾರು ಹಂಗಾಮಿನ ಸಿದ್ಧತೆ, ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಾಡೋನಹಳ್ಳಿಯಲ್ಲಿ ಮುಂಗಾರು ತಾಂತ್ರಿಕ ಮತ್ತು ಕೃಷಿ ಉಳಿಸಿ ಅಭಿಯಾನದಲ್ಲಿ ಮಾತನಾಡಿದ ಅವರು,ಮುಂಗಾರಿಗೆ ಕೃಷಿ ಸಿದ್ಧತೆಯನ್ನು ಮಾಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವಿಜ್ಞಾನಿ ಡಾ. ಚಂದ್ರೇಗೌಡ ಮಾತನಾಡಿ, ಮಣ್ಣಿನ ಫಲವತ್ತತತೆ ಕಾಪಾಡಿದರೆ ಮಾತ್ರ ಭವಿಷ್ಯದ ಕೃಷಿ ಸುಸ್ಥಿರವಾಗಲು ಸಾಧ್ಯ. ಆದ್ದರಿಂದ ಮಣ್ಣಿನ ಪರೀಕ್ಷೆ, ಸಾವಯವ ಮತ್ತು ಜೈವಿಕ ಗೊಬ್ಬರಗಳ ಬಳಕೆ, ಬೆಳೆ ಪರಿವರ್ತನೆ, ಅಂತರ ಬೆಳೆಗಳ ಬಳಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಇಂದಿನ ಕೃಷಿಯಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು.

ತಾಂತ್ರಿಕ ಅಧಿವೇಶನದಲ್ಲಿ ಪ್ರಾಧ್ಯಾಪಕ ಡಾ. ಎಂ.ಎನ್.ತಿಮ್ಮೇಗೌಡ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಶೇ. 30 ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಲಾನಿನೊ ಪ್ರಭಾವ ದುರ್ಬಲವಾಗಿದ್ದು ಎಲ್ನಿನೋ ಪ್ರಭಾವ ಹೆಚ್ಚಾಗಿದೆ. ಮಳೆಯಲ್ಲಿ ವ್ಯತ್ಯಯ ಮತ್ತು ಕಡಿಮೆ ಪ್ರಮಾಣದ ಮಳೆಯಾಗಬಹುದು . ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರು ನೀರಿನ ಸಂರಕ್ಷಣೆ, ಮಣ್ಣು ಆರೋಗ್ಯ ಮತ್ತು ಫಲವತ್ತತೆ ಕಾಪಾಡಿಕೊಳ್ಳಲು ಕೃಷಿ ಹೊಂಡ ಮತ್ತು ಇಂಗು ಗುಂಡಿಗಳ ಮೂಲಕ ಮಳೆ ನೀರನ್ನು ಸಂರಕ್ಷಿಸುವುದು, ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಳ್ಳವುದರ ಜೊತೆಗೆ ತಮ್ಮ ಜಮೀನಿನ ಬದುಗಳಲ್ಲಿ ಹೆಚ್ಚು ಸಸಿಗಳನ್ನು ನೆಡಬೇಕೆಂದು ತಿಳಿಸಿದರು.

ರಾಷ್ಟ್ರೀಯ ಬೀಜ ಪ್ರಾಯೋಜನೆ ವಿಶೇಷ ಅಧಿಕಾರಿ ಡಾ.ವಿಶ್ವನಾಥ್ ಮಾತನಾಡಿ, ಉತ್ತಮ ಬೀಜ ಉತ್ತಮ ಭೂಮಿಯಲ್ಲಿ ಬಿತ್ತಿದರೆ ಉತ್ತಮ ಇಳುವರಿ ದೊರೆಯುತ್ತದೆ. ರಾಗಿ ತಳಿ ಎಂ.ಎಲ್.-322 ತಡವಾದ ಮುಂಗಾರಿಗೆ ಸೂಕ್ತವಾಗಿದ್ದು, ನೆಲಕ್ಕೆ ಬೀಳದಿರುವುದರಿಂದ ಅಧಿಕ ಇಳುವರಿಯ ಜೊತೆಗೆ ಯಾಂತ್ರೀಕೃತ ಕಟಾವಿಗೆ ಸೂಕ್ತವಾಗಿದೆ ಎಂದು ತಿಳಿಸಿದರು.


ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗೊಡೆಗೊಂಡ ನೂತನ ತಳಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಗಳ ವಿಸ್ತರಣಾಧಿಕಾರಿಗಳಿಗೆ ತಾಂತ್ರಿಕ ಅರಿವು ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ ಭೂ ಮಿತ್ರ ಪರಿಕರಗಳ ಬಳಕೆಯಿಂದ ಕೃಷಿ ಭೂಮಿ ಉಳಿಸಿ ಅಭಿಯಾನವನ್ನು ದೇಶದಾದ್ಯಂತ ದಿನಾಂಕ ಜೂನ್ 1 ರಿಂದ 30 ರವರೆಗೆ ಹಮ್ಮಿಕೊಂಡು, ವಿಜ್ಞಾನಿಗಳ ತಂಡಗಳು ಪ್ರತಿ ದಿನ ಎರಡು ಗ್ರಾಮಗಳಿಗೆ ಭೇಟಿ ನೀಡಿ, ರೈತರಿಗೆ ಸಾವಯವ ಗೊಬ್ಬರಗಳ ಬಳಕೆ, ಮಣ್ಣು ಪರೀಕ್ಷೆ ಮತ್ತು ವಿಶ್ಲೇಷಣೆ, ಮಣ್ಣು ಪರೀಕ್ಷೆ ಆಧಾರಿತ ಸಮತೋಲನ ರಸಗೊಬ್ಬರಗಳ ಬಳಕೆ, ಕೀಟ ಮತ್ತು ರೋಗಗಳ ನಿರ್ವಹಣೆಗೆ ಪರಿಸರ ಸ್ನೇಹಿ ಜೈವಿಕ ನಿಯಂತ್ರಕಗಳ ಬಳಕೆ, ಸಾವಯವ ಕೃಷಿ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬೆಂ.ಗ್ರಾ ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ಪಂಕಜ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಶಶಿಕಲಾ, ಪಶುವೈದ್ಯಾಧಿಕಾರಿ ಡಾ.ಸದಾಶಿವ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ತಿಲಕ್ ಹೆಗ್ಡೆ

ಮತ್ತಿತರರು ಭಾಗವಹಿಸಿ, ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ತಿಳಿಸಿದರು.

14ಕೆಡಿಬಿಪಿ4-

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಮುಂಗಾರು ತಾಂತ್ರಿಕ ಆಂದೋಲನ ಮತ್ತು ಕೃಷಿ ಉಳಿಸಿ ಅಭಿಯಾನ ನಡೆಯಿತು.