ಸೌಲತ್ತಿಗೆ ಪ್ರತ್ಯೇಕತೆ ಬೇಡ ನಾವೆಲ್ಲ ಹಿಂದೂ ಒಂದು

KannadaprabhaNewsNetwork |  
Published : Nov 29, 2026, 01:45 AM IST
ಬೆಳಗಾವಿ | Kannada Prabha

ಸಾರಾಂಶ

ವಿಶ್ವಗುರು ಬಸವಣ್ಣನವರ ಅವಹೇಳನದ ವಿಚಾರವಾಗಿ ಲೇಖಕ ರವಿ ಹಂಜ್‌ ವಿರುದ್ಧ ರಾಜ್ಯದ ಜನತೆ ಅಷ್ಟೇ ಅಲ್ಲ ಸರ್ಕಾರವೂ ಉಗ್ರಸ್ವರೂಪಿ ಆಗಿರುವ ಬೆನ್ನಲ್ಲಿ ಯೇ ಬಸವಾದಿ ಶರಣರ ಕರ್ಮಭೂಮಿ ಬಸವಕಲ್ಯಾಣದ ನೆಲದಲ್ಲಿ ನಿಂತುಕೊಂಡು ಕೆಲ ಸೌಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ವಿಚಾರ ಕೈಬಿಟ್ಟು ನಾವೆಲ್ಲ ಹಿಂದೂ ಒಂದು ಅಂಬೋಣ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಷ್ಟೇ ಅಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಮತ್ತಷ್ಟು ರೊಚ್ಚಿಗೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ (ಬೀದರ್‌)

ವಿಶ್ವಗುರು ಬಸವಣ್ಣನವರ ಅವಹೇಳನದ ವಿಚಾರವಾಗಿ ಲೇಖಕ ರವಿ ಹಂಜ್‌ ವಿರುದ್ಧ ರಾಜ್ಯದ ಜನತೆ ಅಷ್ಟೇ ಅಲ್ಲ ಸರ್ಕಾರವೂ ಉಗ್ರಸ್ವರೂಪಿ ಆಗಿರುವ ಬೆನ್ನಲ್ಲಿ ಯೇ ಬಸವಾದಿ ಶರಣರ ಕರ್ಮಭೂಮಿ ಬಸವಕಲ್ಯಾಣದ ನೆಲದಲ್ಲಿ ನಿಂತುಕೊಂಡು ಕೆಲ ಸೌಲತ್ತುಗಳಿಗಾಗಿ ಪ್ರತ್ಯೇಕ ಧರ್ಮದ ವಿಚಾರ ಕೈಬಿಟ್ಟು ನಾವೆಲ್ಲ ಹಿಂದೂ ಒಂದು ಅಂಬೋಣ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಷ್ಟೇ ಅಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಮತ್ತಷ್ಟು ರೊಚ್ಚಿಗೇರಿಸಿದ್ದಾರೆ.

ಅವರು ಶನಿವಾರ ಬಸವಕಲ್ಯಾಣದಲ್ಲಿ ನಡೆದ 47 ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಾವು ಆ ಜಾತಿ ಈ ಜಾತಿ, ಈ ಧರ್ಮ ಆ ಧರ್ಮ ಎಂದು ಹೇಳದೇ ನಾವೆಲ್ಲರೂ ಒಟ್ಟಾಗಿ ನಾವೆಲ್ಲರೂ ಮನುಷ್ಯ ಧರ್ಮದವರು, ಮನುಷ್ಯತ್ವವನ್ನು ಉಳಿಸಿಕೊಂಡು ಹೋಗಬೇಕು ಎಂದ ಅವರು ಇಂಥ ಸಂದರ್ಭದಲ್ಲಿ ನಾವೆಲ್ಲರೂ ಹಿಂದು ನಾವೆಲ್ಲರೂ ಒಂದು ಎಂದು ಚಿಂತನೆ ಮಾಡೋಣ ಆದರೆ ನಾವು ಸರ್ಕಾರದ ಸೌಲತ್ತಿಗಾಗಿ ಪ್ರತ್ಯೇಕ ಧರ್ಮ ಎಂದು ಚಿಂತನೆ ಮಾಡದಿರುವ ಅನಿವಾರ್ಯತೆ ಹಾಗೂ ಅವಶ್ಯಕತೆಯೂ ಇದೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ, ಪ್ರತ್ಯೇಕ ಲಿಂಗಾಯತ ಧರ್ಮದ ಒತ್ತಾಯ ಮತ್ತು ಶರಣರ ವಿಚಾರಗಳ ಕುರಿತು ಸೂಕ್ಷ್ಮ ವಾತಾವರಣ ನಿರ್ಮಾಣವಾಗಿರುವ ಹೊತ್ತಿನಲ್ಲಿ, ವಿಜಯೇಂದ್ರ ಅವರ ‘ನಾವೆಲ್ಲ ಹಿಂದೂ ಒಂದು’ ಎಂಬ ಹೇಳಿಕೆಯು ಪಕ್ಷದ ಒಳಗೆ ಮತ್ತು ಹೊರಗೆ ಯಾವ ರೀತಿಯ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಡುತ್ತದೆ ಹಾಗೂ ಬಿಜೆಪಿಗೆ ಎಷ್ಟರ ಮಟ್ಟಿಗೆ ಸುತ್ತಿಕೊಳ್ಳುತ್ತದೆ ಹಾಗೂ ವಿರೋಧ ಪಕ್ಷಗಳಿಗೆ ಅಸ್ತ್ರವಾಗಬಹುದೇ ಎಂಬುವದನ್ನು ಕಾದು ನೋಡಬೇಕಿದೆ.

ಲಿಂಗಾಯತ ಪ್ರಮುಖರ ಆಕ್ರೋಶ, ವೇದಿಕೆ ಮುಂಭಾಗದಲ್ಲಿ ಸನಾತನ ಪರ ಜೈಘೋಷ :

ಈ ಸಂದರ್ಭದಲ್ಲಿ ವೇದಿಕೆ ಮುಂಭಾಗದಲ್ಲಿದ್ದ ಲಿಂಗಾಯತ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ ಗೋಬ್ಯಾಕ್‌ ವಿಜಯೇಂದ್ರ ಎಂದು ವೇದಿಕೆಗೆ ನುಗ್ಗಲಾರಂಭಿಸಿದರೆ ಕೆಲವರು ಸನಾತನ ಧರ್ಮಕ್ಕೆ ಜೈ, ಹಿಂದೂ ಧರ್ಮಕ್ಕೆ ಜೈ ಎಂಬ ಘೋಷಣೆ ಕೂಗಲಾರಂಭಿಸಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆ ಪೊಲೀಸರು, ಆಯೋಜಕರು ಮಧ್ಯ ಪ್ರವೇಶಿಸಿ ಭಾರಿ ಅನಾಹುತವನ್ನು ತಡೆದರು. ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ನಮ್ಮ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟ ನಿಲ್ಲದು, ನಮ್ಮದೇಯಾದ ಸಿದ್ಧಾಂತವಿದೆ. ನಾವು ಮಾನ್ಯತೆ ಪಡೆದುಕೊಳ್ಳುತ್ತೇವೆ ಎಂಬ ವಿಶ್ವಾಸವಿದೆ ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮವನ್ನು ಪ್ರಶ್ನಿಸಿದ ಬಿವೈ ವಿಜಯೇಂದ್ರ ಹಾಗೂ ಕೆಲ ಬಿಜೆಪಿ ಪ್ರಮುಖರು ಅಲ್ಲಿಂದ ಹೊರಟು ನಡೆದರು.

ಈ ಸಂದರ್ಭದಲ್ಲಿ ನಾಡೋಜ ಬಸವಲಿಂಗ ಪಟ್ಟದ್ದೇವರು, ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಮಹಾಸ್ವಾಮೀಜಿ, ಡಾ. ಗುರು ಮಹಾಂತ ಮಹಾಸ್ವಾಮೀಜಿ, ಡಾ. ಚನ್ನವೀರ ಶಿವಾಚಾರ್ಯರು, ಡಾ. ಶಿವಾನಂದ ಮಹಾಸ್ವಾಮಿಗಳು, ಗುರುಬಸವ ಪಟ್ಟದ್ದೇವರು. ಸಂಸದ ಸಾಗರ ಖಂಡ್ರೆ, ಶಾಸಕ ಶರಣು ಸಲಗರ್‌, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಮುರಳಿ, ಮಾಜಿ ಶಾಸಕ ಮಲ್ಲಿಕಾರ್ಜುನ್‌ ಖೂಬಾ, ಗುರುನಾಥ ಕೊಳ್ಳೂರ್‌ ಸೋಮನಾಥ ಪಾಟೀಲ್‌ ಹಾಗೂ ಬಾಬು ವಾಲಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅವಕಾಶವನ್ನು ಬಳಸಿಕೊಳ್ಳುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿರಬೇಕು: ಕ್ಯಾ. ಚೌಟ
ಆನೆ ದಾಳಿ ಸಮಸ್ಯೆ: ರಾಮಲಿಂಗ ರೆಡ್ಡಿ ಜೊತೆ ಕೋಟ ಚರ್ಚೆ