ರಾಜಕೀಯವ ಮೇಲು ನೋಟದ ವಿಮರ್ಶೆ ಬೇಡ

KannadaprabhaNewsNetwork |  
Published : Dec 24, 2025, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ಮಂಗಳವಾರ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಅವರಿಗೆ 2025ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜಕೀಯವ ಮೇಲು ನೋಟಕ್ಕೆ ವಿಮರ್ಶೆ ಮಾಡದೆ ಆಳಕ್ಕಿಳಿದು ಪರಿಶೀಲಿಸಿದಾಗ ಮಾತ್ರ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ್ ಲಾಡ್ ಹೇಳಿದರು.

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 2025ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ದೇಶ ಯಾವ ಪಕ್ಷಗಳ ಸ್ವತ್ತಲ್ಲ. ನಿಮ್ಮ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ವಿಜ್ಞಾನ, ಸಂಶೋಧನೆ, ಅಭಿವೃದ್ಧಿ ಬಗ್ಗೆ ವಿಚಾರ ಮಾಡಬೇಕು ಎಂದರು.

ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಸಮಸ್ಯೆ ಹೊಸದೇನಲ್ಲ. ಬೆಳೆ ಇದ್ದಾಗ, ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಸಿಗಲ್ಲ. ನಾನು ಎಂದಿಗೂ ಪ್ರಶಸ್ತಿಗೆ ಆಸೆ ಪಟ್ಟವನಲ್ಲ. ಜೀವ ರಕ್ಷಕ ಪ್ರಶಸ್ತಿಗೆ ನಾನು ಅರ್ಹನಿದ್ದೇನೋ ಏನೊ ಗೊತ್ತಿಲ್ಲ. ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಜೀವ ರಕ್ಷಣೆಯಲ್ಲಿ ತೊಡಗಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ಜೊತೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.

ರಾಜಕಾರಣ ತುಂಬಾ ಕಷ್ಟ. ಈ ದೇಶ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಸೇರಿದ್ದಲ್ಲ. ಪ್ರಜೆಗಳಿಗೆ ಸಂಬಂಧಿಸಿದ್ದು, ರಾಜಕೀಯವನ್ನು ಹತ್ತಿರದಿಂದ ವಿಮರ್ಶೆ ಮಾಡಿದಾಗ ಸಮಾಜದಲ್ಲಿ ಬದಲಾವಣೆ ತರಬಹುದು. ಬಿಗ್‍ಬಾಸ್ ನೋಡುವುದರಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿದೆ. ಫೇಸ್‍ಬುಕ್, ವಾಟ್ಸ್‌ಪ್‍ನಲ್ಲಿ ಕಾಲ ಕಳೆಯುವುದರಿಂದ ಪ್ರಯೋಜನವಿಲ್ಲ. ಕೈಗಾರಿಕೆಗಳು ಬದಲಾಗುತ್ತಿರುವುದರಿಂದ ಮುಂದೆ ಅಪಾಯವಿದೆ. ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣ ಬೇಕು. ಯುವ ಜನಾಂಗ ಡ್ರಗ್ಸ್‍ಗೆ ಬಲಿಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಸಚಿವ ಎಸ್.ಸಂತೋಷ್‍ ಲಾಡ್ ಕಳವಳ ವ್ಯಕ್ತಪಡಿಸಿದರು.

ಜೀವ ರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು, ಎಲ್ಲಿ ದುರಂತ ಸಂಭವಿಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೊದಲು ನೆನಪಾಗುವುದು ಸಚಿವ ಎಸ್.ಸಂತೋಷ್‍ ಲಾಡ್. ಕೇದಾರ ದುರಂತ, ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಗೆ ಕನ್ನಡಿಗರು ಬಲಿಯಾದಾಗ ಯಾವ ಹೆದರಿಕೆಯೂ ಇಲ್ಲದೆ ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಇಂತಹವರನ್ನು ಗುರುತಿಸಿ ಜೀವ ರಕ್ಷಕ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ. ದೇಶದ ಮೊದಲ ಕಾರ್ಮಿಕ ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕೆಂಬ ಕಾನೂನು ಜಾರಿಗೆ ತಂದರು. ರಾಜ್ಯದಲ್ಲಿರುವ ಮೂರು ಕೋಟಿ ಕಾರ್ಮಿಕರ ರಕ್ಷಣೆ ಜವಾಬ್ದಾರಿಯನ್ನು ಸಚಿವ ಸಂತೋಷ್‍ಲಾಡ್ ಹೊತ್ತಿದ್ದಾರೆಂದು ಪ್ರಶಂಶಿಸಿದರು.

ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ ನೀಡಬೇಕೆಂಬ ಯೋಜನೆ ಸಂತೋಷ್‍ ಲಾಡ್‍ರವರದು. ನಕಲಿ ಕಾರ್ಮಿಕರ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿ ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿದ್ದಾರೆ. ಸಮಾಜ ಸೇವಕರು ಅಳಿವಿನಂಚಿನಲ್ಲಿರುವುದರಿಂದ ಸಮಾಜ ಸೇವೆಗೆ ಬರುವವರು ಕಡಿಮೆಯಾಗುತ್ತಿದ್ದಾರೆ. ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಹುಡುಕುವಂತಾಗಿದೆ. ನೆಮ್ಮದಿಯಾಗಿ ನಿದ್ರೆ ಮಾಡಬೇಕಾದರೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂದು ಹೇಳಿದರು.

ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸೇವೆ ಹೆಸರಿನಲ್ಲಿ ಸ್ವಾಹ ಮಾಡುವವರೆ ಜಾಸ್ತಿಯಾಗಿರುವ ಇಂದಿನ ಕಾಲದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನವರು ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿರುವವರನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸುವ ಮಾನವೀಯತೆಯ ಕೆಲಸ ಮಾಡುತ್ತಿರುವುದು ಸುಲಭವಲ್ಲ. ಜೀವ ರಕ್ಷಣೆ ಮಾಡುವ ಮನುಷ್ಯ ಭಕ್ಷಕನಾಗಬಾರದು ಎಂದು ಹೇಳಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನ ಪದಾಧಿಕಾರಿಗಳು ಸಮುದಾಯದ ನಿಜವಾದ ರತ್ನಗಳು. ಯಾವ ಪ್ರತಿಫಲಾಪೇಕ್ಷೆಯನ್ನು ಬಯಸದೆ ಸಚಿವ ಸಂತೋಷ್‍ಲಾಡ್ ಜೀವ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆಂದರೆ ಅಂಬೇಡ್ಕರ್‍ರವರ ವಿಚಾರಧಾರೆಗಳೆ ಅವರಿಗೆ ಪ್ರೇರಣೆ. ಸಮಾಜ ಸೇವೆಯನ್ನು ಚಟ, ಹಠವನ್ನಾಗಿಸಿಕೊಂಡಿರುವ ಲಾಡ್‍ರವರ ಸಮಾಜ ಸೇವೆ ಹೀಗೆಯೆ ಮುಂದುವರೆಯಲಿ ಎಂದು ಆಶಿಸಿದರು.

ಜೀವ ರಕ್ಷಕ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ರಂಗಸ್ವಾಮಿ, ಸಂಸ್ಥಾಪಕ ಕಾರ್ಯದರ್ಶಿ ಸೌಮ್ಯ ಮಂಜುನಾಥ್ ಮಾತನಾಡಿದರು.ಜೀವ ರಕ್ಷಕ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಡಾ.ಸಂದೀಪ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೆಸಿಂಗ್, ಮುಬಾರಕ್, ಬಸವರಾಜ್ ಬಚ್ಚಬೋರನಹಟ್ಟಿ, ಹನುಮಂತಪ್ಪ ಗೋಡೆಮನೆ, ಕುರಿಗಾಹಿಗಳ ಸಂಘದ ರಾಜ್ಯಾಧ್ಯಕ್ಷ ಗಿರೀಶ್, ದಾದರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ