;Resize=(412,232))
ಬೆಂಗಳೂರು: ಬೀದರ್ ಸೇರಿ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಜೋರಾಗಿದ್ದು, ಮುಂದಿನ ಒಂದೆರೆಡು ದಿನ ಬೀದರ್, ಕಲಬುರಗಿ ಸೇರಿ ಉತ್ತರ ಒಳನಾಡಿನಲ್ಲಿ ಶೀತಗಾಳಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ಬೀದರ್‌ನಲ್ಲಿ ಕನಿಷ್ಠ ತಾಪಮಾನ 9.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ 24 ತಾಸುಗಳಲ್ಲಿ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ವಿವಿಧೆಡೆ ಸರಾಸರಿಗಿಂತ 5 ರಿಂದ 7 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದೆ.
ಉತ್ತರ ಒಳನಾಡಿನ ಬೀದರ್, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಹಾಸನ, ದಾವಣಗೆರೆ, ಮಂಡ್ಯ, ಮೈಸೂರು ಮತ್ತು ಚಿಂತಾಮಣಿಯಲ್ಲಿ ಸರಾಸರಿ ತಾಪಮಾನ ಸರಾಸರಿ ತಾಪಮಾನ 9.2ರಿಂದ 12 ಡಿಗ್ರಿ ದಾಖಲಾಗಿದೆ.
ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ ವಿಮಾನ ನಿಲ್ದಾಣ, ಕೊಪ್ಪಳ ಭಾಗದಲ್ಲಿ ಸರಾಸರಿ ತಾಪಮಾನ 12.1ರಿಂದ 15.2 ಡಿಗ್ರಿ ಸೆಲ್ಸಿಯಸ್ ಇತ್ತು. ಕಾರವಾರ, ಮಂಗಳೂರು, ಹೊನ್ನಾವರ, ಶಕ್ತಿನಗರದಲ್ಲಿ ಸರಾಸರಿ ತಾಪಮಾನ 18.4ರಿಂದ 21.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಬಳ್ಳಾಪುರ: ದಟ್ಟ ಮಂಜಿಗೆ 1ತಿಂಗಳಲ್ಲಿ 50 ಅಪಘಾತ, 8 ಸಾವು
ಚಿಕ್ಕಬಳ್ಳಾಪುರ: ಸುರಿಯುತ್ತಿರುವ ಮಂಜಿನಿಂದಾಗಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಹಲವೆಡೆ ಕಳೆದ ಒಂದು ತಿಂಗಳಲ್ಲಿ 50ಕ್ಕೂ ಅಧಿಕ ಕಡೆ ಅಪಘಾತಗಳಾಗಿ 8ಕ್ಕೂ ಹೆಚ್ಚು ಸಾವು ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ನಗರದಲ್ಲಿ ಹಾದುಹೋಗಿರುವ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44 ಹಾಗೂ ಮಂಗಳೂರು-ತಿರುವಣ್ಣಾಮಲೆ ರಾಷ್ಟ್ರೀಯ ಹೆದ್ದಾರಿ 234ಗಳಲ್ಲಿ ಹೆಚ್ಚು ಅಪಘಾತಗಳಾಗಿವೆ.
ಕಳೆದ ಎರಡು ತಿಂಗಳಿಂದೀಚೆಗೆ ಈ ಭಾಗದಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಒಂದು ತಿಂಗಳಿಂದ ಅಪಘಾತ ಪ್ರಮಾಣ ಹೆಚ್ಚಿದೆ. ಹೆದ್ದಾರಿಗಳಲ್ಲಿ ಸೂಚನಾ ಫಲಕಗಳು ಇಲ್ಲದ ಕಾರಣ ಇಲ್ಲಿ ನಡೆಯುವ ಅಪಘಾತಗಳಿಂದಾಗಿ ಸಾವು ಹೆಚ್ಚಿದೆ. ಅಲ್ಲದೆ ಗಾಯಗೊಂಡವರ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ. ನಾನಾ ಕಡೆಗಳಲ್ಲಿ ನಡೆದ ಅಪಘಾತಗಳಿಂದಾಗಿ ಸ್ಥಳೀಯ ಸಂಚಾರಿ ಹಾಗೂ ಪೊಲೀಸ್ ಠಾಣೆಗಳ ಆವರಣಗಳು ಜಖಂಗೊಂಡ ದ್ವಿಚಕ್ರ ವಾಹನಗಳು, ಲಾರಿ, ಕಾರುಗಳಿಂದ ತುಂಬಿಹೋಗಿವೆ.