ದೊಡ್ಡಬಳ್ಳಾಪುರ: ಸರ್ಕಾರ ರಾಜ್ಯದ 8 ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಆರೋಗ್ಯ ಸೇವೆಯನ್ನು ಖಾಸಗೀಕರಣ ಮಾಡಲು ಮುಂದಾಗಿದ್ದು ಇದು ಜನ ವಿರೋಧಿ ನಡೆಯಾಗಿದೆ. ಕೂಡಲೆ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಂಪೂರ್ಣವಾಗಿ ಕೈಬಿಡಬೇಕು. ಆರೋಗ್ಯ ಸೇವೆ ನಾಗರೀಕರ ಮೂಲಭೂತ ಹಕ್ಕಾಗಬೇಕು ಎಂದು ಒತ್ತಾಯಿಸಿ ಹಲವಾರು ಸಂಘಟನೆಗಳ ಸಹಭಾಗಿತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು, ಆರೋಗ್ಯ ಸೇವೆಯನ್ನು ಖಾಸಗಿಯವರಿಗೆ ಕೊಟ್ಟರೆ, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡ ಜನರ ಆರೋಗ್ಯವನ್ನು ಕಾಪಾಡಬೇಕಾದ ಸರ್ಕಾರವೆ ಬಡವರನ್ನು ಕೊಂದಂತೆ ಆಗುತ್ತದೆ. ಜೊತೆಗೆ ಜನರ ಆರೋಗ್ಯ ಸೇವೆ ಕಲ್ಪಿಸುವುದರಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಇದು ಆಶಕ್ತರಿಗೆ ಸೂಕ್ತ ಚಿಕಿತ್ಸೆಯ ನಿರಾಕರಣೆ ಮತ್ತು ಚಿಕಿತ್ಸೆ ದುಬಾರಿಯಾಗುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಈ ಖಾಸಗೀಕರಣವನ್ನು ಕೈಬಿಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ಉಳಿದಂತೆ ತುಮಕೂರು, ಕೋಲಾರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಕ್ಷಿಣ-ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಖಾಸಗೀಕರಣ ಕೈಬಿಡಬೇಕು. ಮುಂಬರುವ ಬಜೆಟ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಆರೋಗ್ಯದ ಹಕ್ಕು ಇನ್ನೂ ಜಾರಿಯಾಗಿಲ್ಲ, ದೇಶದಲ್ಲಿ ಪ್ರತಿ ವರ್ಷ ಆರೋಗ್ಯ ಚಿಕಿತ್ಸೆಯ ಖರ್ಚುಗಳಿಂದಾಗಿ 10 ಕೋಟಿ ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಆರೋಗ್ಯ ಸೇವೆ ಹಾಗು ಚಿಕಿತ್ಸೆ ವೆಚ್ಚಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಖರ್ಚು ಭರಿಸಲಾಗದೆ ಎಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಜಿಲ್ಲಾಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಬದಲು, ಸರ್ಕಾರ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸಿದೆ. ಇದನ್ನು ಖಂಡಿಸಲು ಹಾಗೂ ನಮ್ಮ ಆರೋಗ್ಯ ಹಕ್ಕನ್ನು ಪಡೆಯಲು ನಾವು ರಾಜ್ಯಾದ್ಯಂತ ಇಂದು ಬೀದಿಗೆ ಇಳಿಯಬೇಕಾಗಿದೆ ಎಂದರು.

ಜಾಗೃತಿ ಗೀತೆ, ಬೀದಿ ನಾಟಕ:


ಇದೇ ವೇಳೆ ಬೇರು ಬೆವರು ಸಾಂಸ್ಕೃತಿಕ ಕಲಾ ಬಳಗ- ಕರ್ನಾಟಕದ ಚಂದ್ರಶೇಖರ್ ನೇತೃತ್ವದ ಕಲಾತಂಡದಿಂದ ಜಾಗೃತಿ ಗೀತ ಗಾಯನ, ಮತ್ತು ಬೀದಿ ನಾಟಕ ನಡೆಯಿತು.

ಹಕ್ಕೊತ್ತಾಯಗಳು:

ಸರ್ಕಾರಿ ಆಸ್ಪತ್ರೆ ಖಾಸಗೀಕರಣ (ಪಿಪಿಪಿ) ಮಾಡುವ ಯೋಜನೆ ಕೈಬಿಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು. ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟ ಔಷಧಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸಲು ಚೀಟಿಯನ್ನು ಬರೆದು ಕೊಡಬಾರದು ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆಯನ್ನು ಜಾರಿಗೆ ತರಬೇಕು. ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಡಾ. ಸ್ವಾತಿ, ಅಕ್ಷಯ್, ಜನ ಚಳುವಳಿಗಳ ರಾಷ್ಟ್ರೀಯ ಒಕ್ಕೂಟ ಮುಖಂಡದ ವೀರ ಸಂಗ ಮಿತ್ರ, ಕನ್ನಡ ಪಕ್ಷದ ಸಂಜೀವ್ ನಾಯಕ್, ಪ್ರಾಂತ ರೈತ ಸಂಘದ ಆರ್. ಚಂದ್ರ ತೇಜಸ್ವಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಡಾಬಸ್ ಪೇಟೆ ಕಾರ್ಮಿಕ ಮುಖಂಡ ಎನ್. ಕೆ ಬಸವರಾಜು, ನೆಲಮಂಗಲ ಕಾರ್ಮಿಕ ಮುಖಂಡ ಅಂಜುಮ್ ಖಾನ್, ವಿನಯ್ ಕುಮಾರ್, ಡಿಎಸ್ಎಸ್ (ಅಂಬೇಡ್ಕರ್ ವಾದ) ಮುಖಂಡ ಪಿ.ಎಂ. ಚಿನ್ನಸ್ವಾಮಿ, ಎಂ ವೆಂಕಟೇಶ್, ಹೊಸಕೋಟೆ ಕಾರ್ಮಿಕ ಮುಖಂಡ ಎಂ.ವೆಂಕಟರಾಜು, ಚನ್ನರಾಯಪಟ್ಟಣದ ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್, ಸಿಪಿಐಎಂನ ಎಸ್ ರುದ್ರರಾಧ್ಯ, ಯುವ ಸಂಚಲನದ ಚಿದಾನಂದ, ಕಾರ್ಮಿಕ ಮುಖಂಡ ರೇಣುಕಾರಾಧ್ಯ, ಅನಿಲ್ ಗುಪ್ತ, ಸಾಧಿಕ್ ಪಾಷಾ, ನೇಕಾರರ ಹಿತರಕ್ಷಣಾ ಸಮಿತಿ ಮುಖಂಡ ಎಂ ಚೌಡಯ್ಯ ಮುಂತಾದವರು ಪಾಲ್ಗೊಂಡಿದ್ದರು.

17ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ಆರೋಗ್ಯ ಸೇವೆಗಳ ಖಾಸಗೀಕರಣ ವಿರೋಧಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.