ಆಹಾರ ಸುರಕ್ಷತೆ ಪ್ರಮಾಣ ಇದ್ದರೆ ಟ್ರೇಡ್ ಲೈಸೆನ್ಸ್ ಬೇಕಿಲ್ಲ: ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್

KannadaprabhaNewsNetwork | Published : Jan 21, 2025 12:30 AM

ಸಾರಾಂಶ

ಆಹಾರ ಸುರಕ್ಷತಾ, ಗುಣಮಟ್ಟದ ಪ್ರಮಾಣಪತ್ರ ಹಾಗೂ ಎಫ್‌ಒಎಸ್‌ಟಿಒಸಿ ಪ್ರಮಾಣಪತ್ರ ಪಡೆದ ನಂತರ ಟ್ರೇಡ್ ಲೈಸೆನ್ಸ್ ಪಡೆಯುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಆಹಾರ ಉದ್ಯಮಿದಾರರ ಮೇಲ್ವಿಚಾರಕರಿಗೆ ಆಹಾರ ಸುರಕ್ಷತೆ, ಗುಣಮಟ್ಟ ತರಬೇತಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಹಾರ ಸುರಕ್ಷತಾ, ಗುಣಮಟ್ಟದ ಪ್ರಮಾಣಪತ್ರ ಹಾಗೂ ಎಫ್‌ಒಎಸ್‌ಟಿಒಸಿ ಪ್ರಮಾಣಪತ್ರ ಪಡೆದ ನಂತರ ಟ್ರೇಡ್ ಲೈಸೆನ್ಸ್ ಪಡೆಯುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದ ಮಥುರಾ ಪ್ಯಾರಡೈಸ್ ಹೋಟೆಲ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ, ಆಹಾರ ಸುರಕ್ಷತಾ ಮತ್ತು ಪ್ರಮಾಣಪತ್ರ ಕೇಂದ್ರ ಶಿವಮೊಗ್ಗ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಆಹಾರ ಉದ್ಯಮಿದಾರರು ಮಾರಾಟ ಮಾಡುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1954ರಲ್ಲಿ ಇದ್ದ ಅನೇಕ ಕಾನೂನುಗಳು ಈಗಲೂ ಇವೆ. ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಕಾನೂನುಗಳು ಹೆಚ್ಚಳ ಆಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಾನೂನುಗಳು ಯಾವತ್ತು ಹೇಗೆ ಬಳಕೆಯಾಗಬೇಕೆಂಬ ಅರಿವು ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ವ್ಯಾಪಾರಸ್ಥರೊಂದಿಗೆ ನಿರಂತರ ಆತ್ಮೀಯತೆಯಿಂದ ಮಾಡಬೇಕು ಎಂದರು.

ಅಧಿಕಾರಿಗಳು ವಿಲನ್ ಆಗಬಾರದು. ಕೆಳ ಹಂತದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರಬೇಕು. ಇವತ್ತಿನ ದಿನಮಾನದಲ್ಲಿ ಉದ್ಯಮಿಗಳು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಾ ಕಾನೂನುಗಳನ್ನು ಅನುಷ್ಠಾನ ಮಾಡಲು ಹೊರಟೆ ಒಂದು ಇಡ್ಲಿಗೆ ೨೫ ರೂ. ಕೊಡಬೇಕಾಗುತ್ತದೆ. ದೇಶ ಉಳಿಯಬೇಕಾದರೆ ಎಲ್ಲವನ್ನೂ ಸರ್ಕಾರ ಮಾಡಲಾಗುವುದಿಲ್ಲ. ನಮ್ಮ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾಯ್ದುಕೊಂಡು ಬದಲಾವಣೆ ಮಾಡಬೇಕು ಎಂದರು.

ಮಧ್ಯಮವರ್ಗಕ್ಕೆ ಮತ್ತು ಬಡವರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ನಿಯಮ ಸರಳೀಕರಣ ಮಾಡಬೇಕು. ಸರ್ಕಾರಗಳಿಗೆ ಕಿವಿ ಕಣ್ಣು ಇರಲ್ಲ. ಬಜೆಟ್ ಮಂಡನೆ ಮುನ್ನ ನಮ್ಮ ಹಕ್ಕನ್ನು ನಾವು ಕೇಳಬೇಕು. ಸರ್ಕಾರದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರೆ ಉಳಿಯುವುದಿಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ನಿಯಮಾವಳಿಗಳನ್ನು ರೂಪಿಸಬೇಕು ಎಂದರು.

ಆಹಾರ ಸಂಸ್ಕರಣಾ ಮತ್ತು ಪ್ರಮಾಣಪತ್ರ ಕೇಂದ್ರದ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಮಾತನಾಡಿ, 2011ರಲ್ಲೇ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರದ ಕಾನೂನು ಬಂದಿದೆ. ಉದ್ಯಮಿಗಳಿಗೆ ಇದರ ಅರಿವು ಇರಲಿಲ್ಲ. 2020ರಲ್ಲಿ ಇದನ್ನು ಕಡ್ಡಾಯಗೊಳಿಸಲಾಯಿತು. ಕೊರೋನಾದಿಂದಾಗಿ ಸ್ವಲ್ಪಮಟ್ಟಿಗೆ ಅನುಷ್ಠಾನ ತಡವಾಗಿದೆ ಎಂದರು.

ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಉಪಾಧ್ಯಕ್ಷ ಜಿ. ವಿಜಯಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರ್ ನಾರಾಯಣಹೊಳ್ಳ, ಆಹಾರ ಸುರಕ್ಷತಾ ಅಧಿಕಾರಿಗಳಾದ ಸೋಮೇಶ್, ಗುರುರಾಜ್, ಸದಾಶಿವಪ್ಪ. ಶಶಿಕುಮಾರ್, ತರಬೇತಿದಾರರಾದ ಸವಿತಾ, ಸಮುದಾಯ ಅಧಿಕಾರಿಗಳಾದ ಅನುಪಮಾ, ವಾಣಿಜ್ಯ ಕೈಗಾರಿಕಾ ಸಂಘದ ಕಾಯದರ್ಶಿ ಸುರೇಶ್, ಜಿಲ್ಲಾ ಸಂಯೋಜಕರಾದ ಬಿ.ಟಿ. ಹನುಮಂತಯ್ಯ, ಶುಭಂ ಹೋಟೆಲ್ ಮಾಲೀಕರಾದ ಉದಯ್ ಕಡಂಬ ಇದ್ದರು.

Share this article