ಶುದ್ಧ ಕುಡಿವ ನೀರು ಪೂರೈಕೆಗೆ ಬೆಂಗಳೂರಲ್ಲಿ ಶೀಘ್ರ ಉನ್ನತ ಮಟ್ಟದ ಸಮಿತಿ ಸಭೆ

KannadaprabhaNewsNetwork | Published : Jan 21, 2025 12:30 AM

ಸಾರಾಂಶ

ಮಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಫೆಬ್ರವರಿ ಪ್ರಥಮ ವಾರ ಬೆಂಗಳೂರಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನತೆಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದರ ವಿರುದ್ಧ ಸತ್ಯಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಫೆಬ್ರವರಿ ಪ್ರಥಮ ವಾರ ಬೆಂಗಳೂರಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಕಟ್ಟಡದ ತನ್ನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವರು, ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಭೆ ನಡೆದು, ನೀರು ಶುದ್ಧೀಕರಣ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಲಿದೆ ಎಂದರು.

ಸುರತ್ಕಲ್‌ನ ಮಧ್ಯದಲ್ಲಿರುವ ಎಸ್‌ಟಿಪಿಯಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಆಡಳಿತದಲ್ಲಿ ಹೀಗಿರಲಿಲ್ವಾ ಎಂದು ಮರು ಪ್ರಶ್ನಿಸುತ್ತಾರೆ. ನಮ್ಮ ಆಡಳಿತದ ಕಾಲದಲ್ಲಿ ಕೆರೆಯ ನೀರಲ್ಲಿ ಬಟ್ಟೆ ತೊಳೆಯುತ್ತಿದ್ದರು, ಮೀನು ಹಿಡೀತಿದ್ದರು. ಈಗ ನೀರಿನ ಮೂಲಗಳಿಗೆ ಇಳಿಯುವ ಹಾಗೇ ಇಲ್ಲ. ಇದಕ್ಕೆ ಯಾರು ಹೊಣೆ ಎಂದು ಐವನ್‌ ಡಿಸೋಜಾ ವಾಗ್ದಾಳಿ ನಡೆಸಿದರು. ಬೀಗ ಜಡಿದು ಪ್ರತಿಭಟನೆ ಎಚ್ಚರಿಕೆ:

ಮಧ್ಯದ ಎಸ್‌ಟಿಪಿ ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಒಂದು ಎಸ್‌ಟಿಪಿಗೆ ವರ್ಷಕ್ಕೆ 1.50 ಕೋಟಿ ರು.ನಂತೆ ಮೂರು ಎಸ್‌ಟಿಪಿಗೆ 4.50 ಕೋಟಿ ರು. ಪಡೆಯುತ್ತಾರೆ. ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.ಮುಖಂಡರಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ನವೀನ್‌ ಡಿಸೋಜಾ, ಅನಿಲ್ ಕುಮಾರ್, ನವೀನ್ ಡಿಸೋಜಾ, ಅಶ್ರಫ್, ಲ್ಯಾನ್ಸ್ ಲಾಟ್ ಪಿಂಟೋ ಮತ್ತಿತರರಿದ್ದರು.

Share this article