ಬೆಂಗಳೂರು : ಅಲ್ಪಸಂಖ್ಯಾತ ನಾಯಕರ ವಿರುದ್ಧ ಆತುರದ ಕ್ರಮ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಇತ್ತೀಚೆಗೆ ಉಪಮುಖ್ಯಮಂತ್ರಿಯೂ ಆದ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ ಅವರು, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಅವರಿಗೆ ನೋಟಿಸ್‌ ನೀಡಿ ವಿವರಣೆಯನ್ನೂ ಪಡೆಯದೆ ಏಕಾಏಕಿ ಕ್ರಮ ಕೈಗೊಂಡಿದ್ದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಈ ವೇಳೆ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರಾ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿ ಅವರು ಅಸಹಾಯಕರಾಗಿದ್ದಾರೆ ಎಂದು ಕೆ.ಎನ್‌.ರಾಜಣ್ಣ ಇದೇ ಮೊದಲ ಬಾರಿಗೆ ಹೇಳುತ್ತಿಲ್ಲ. ಹಿಂದೆ ಸಂಪುಟ ಸಭೆಯಲ್ಲೇ ನೀವು ಗಟ್ಟಿಯಾಗಬೇಕು ಎಂದು ಹೇಳಿದ್ದರು. ಅನಿಸಿದ್ದನ್ನು ನೇರವಾಗಿ ಹೇಳುವುದು ಅವರ ವಾಡಿಕೆ’ ಎಂದು ಹೇಳಿದರು.


ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಬೇಕು

ತಮ್ಮ ಕುರ್ಚಿ ಉಳಿಸಿಕೊಳ್ಳಲು, ತಮ್ಮ ಬಣದ ನಾಯಕರ ವಿರುದ್ಧ ಕ್ರಮ ಆಗುತ್ತಿದ್ದರೂ ಸಿಎಂ ಸುಮ್ಮನಿದ್ದಾರಾ ಎಂಬ ಬಗ್ಗೆ, ‘ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಬೇಕು. ನಿನ್ನೆಯೂ ಮುಖ್ಯಮಂತ್ರಿ ಅವರು ಮಾತನಾಡಿದ್ದಾರೆ. ಅವರೇ ಸ್ಪಷ್ಟನೆ ನೀಡಿದರೆ ಒಳ್ಳೆಯದಿರುತ್ತದೆ’ ಎಂದು ಜಾರಕಿಹೊಳಿ ಹೇಳಿದರು.

ಇನ್ನು ಜಬ್ಬಾರ್ ವಿಚಾರದಲ್ಲಿ ಈಗಲೂ ಕಾಲ ಮಿಂಚಿಲ್ಲ. ನೋಟಿಸ್‌ ಕೊಟ್ಟು ವಿವರಣೆ ಪಡೆದರೆ ಎಲ್ಲವೂ ಸರಿ ಮಾಡಬಹುದು. ಇದನ್ನು ಅಧ್ಯಕ್ಷರಿಗೂ ತಿಳಿಸಿದ್ದೇನೆ. ಅವರು ಹೈಕಮಾಂಡ್‌ ಜತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪರಿಶೀಲಿಸಿ ಕ್ರಮ ಹಿಂಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತರು ತಿರುಗಿಬಿದ್ದಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಇದೆ. ಆದರೆ ತಿರುಗಿಬಿದ್ದಿಲ್ಲ. ಎಲ್ಲರಿಗೂ ನೋಟಿಸ್‌ ನೀಡಿ ವಿವರಣೆ ಪಡೆದು ಬಳಿಕ ಕ್ರಮ ಕೈಗೊಳ್ಳುತ್ತೀರಿ. ಅಲ್ಪಸಂಖ್ಯಾತ ನಾಯಕರ ಮೇಲೆ ಏಕಾಏಕಿ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂಬುದು ಅವರ ಪ್ರಶ್ನೆ. ಇದನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.