ಯುಕೆಪಿ ಯೋಜನೆಗೆ ಆಂಧ್ರ ತಕರಾರು ತೆಗೆದಿರುವ ಬಗ್ಗೆ ರಾಜ್ಯ ಸಂಸದರ ಜತೆ ದೆಹಲಿಯಲ್ಲಿ ಸಭೆ ನಡೆಸಲು ಸಿಎಂ ನಮ್ಮನ್ನು ದೆಹಲಿಗೆ ಕಳಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಗೆ ಹೋಗಿ ಕೇಂದ್ರ ಸಚಿವರ ಜತೆ ಚರ್ಚೆ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ತೆಗೆದಿರುವ ಬಗ್ಗೆ ರಾಜ್ಯ ಸಂಸದರ ಜತೆ ದೆಹಲಿಯಲ್ಲಿ ಸಭೆ ನಡೆಸಲು ಸಿಎಂ ನಮ್ಮನ್ನು ದೆಹಲಿಗೆ ಕಳಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಗೆ ಹೋಗಿ ಕೇಂದ್ರ ಸಚಿವರ ಜತೆ ಚರ್ಚೆ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬಾಗಲಕೋಟೆಯಲ್ಲಿ ಶನಿವಾರ ಸರ್ಕಾರಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ, ಭೂಸ್ವಾಧೀನ ಪರಿಹಾರ ಚೆಕ್ ₹446 ಕೋಟಿ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.ನಮಗೆ ಆಂಧ್ರದವರು ಅಡ್ಡಗಾಲು ಹಾಕುತ್ತಿದ್ದಾರೆ. ನಮ್ಮ ಜಮೀನು ನಾವು ಬಳಸಿಕೊಳ್ಳಲು ಬಿಡುತ್ತಿಲ್ಲ, ನಾವೇನು ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿಲ್ಲ, ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ಕಾಮಗಾರಿಗಳು ಚಾಲ್ತಿಯಲ್ಲಿವೆ. ತುಂಗಭದ್ರ ನದಿಯ ನೀರು ಕೂಡ ಲ್ಯಾಪ್ಸ್ ಆಗುತ್ತಿದೆ. ನೀರು ಉಳಿಸಿಕೊಳ್ಳಲು ಕೂಡ ಆಂಧ್ರ ಸಹಕರಿಸುತ್ತಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಚರ್ಚಿಸಲು ದೆಹಲಿಗೆ ಹೊರಟಿದ್ದೇವೆ. ದೆಹಲಿಯಲ್ಲಿ ಸಂಸದರನ್ನು ಭೇಟಿಯಾಗಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

1 ಲಕ್ಷ 33 ಸಾವಿರ ಎಕರೆ ಪ್ರದೇಶಕ್ಕೆ ಪರಿಹಾರ ಕೊಡಲು ಹೊರಟಿದ್ದೇವೆ. ಈ ತೀರ್ಮಾನ ನೋಡಿ ಆಂಧ್ರ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ. ಅಣೆಕಟ್ಟು ಎತ್ತರ ಸೇರಿ ಭೂಸ್ವಾಧೀನಕ್ಕೆ ವಿರೋಧಿಸುತ್ತಿದ್ದಾರೆ. ಸಾಲದ್ದಕ್ಕೆ ಮಹಾರಾಷ್ಟ್ರ ಸಹ ಅವರಿಗೆ ಕೈಜೋಡಿಸಿದೆ. ಈಗ ತಕರಾರು ಅರ್ಜಿ ಕೊಟ್ಟಿದ್ದಾರೆ, ಆದರೂ ನುಡಿದಂತೆ ನಡೆದಿದ್ದೇವೆ, ಈ ವರ್ಷ ₹3 ಸಾವಿರ ಕೋಟಿ ಪರಿಹಾರ ಚೆಕ್ ಹಂಚಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದರು.

ಮೇಟಿ ಅವರ ಚಿಂತನೆ ಹೋರಾಟ ಉಳಿಸಲು ಪ್ರಯತ್ನ:

ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ 14ರಲ್ಲಿ 12 ಸೀಟ್‌ ಪಕ್ಷಕ್ಕೆ ತಂದಿದ್ದೀರಿ, ನಾವು ಅನೇಕ ತ್ಯಾಗ ಮಾಡಿ ನಿಮ್ಮ ಋಣ ತೀರಿಸಲು ಬಂದಿದ್ದೇವೆ. ಭಾಗ್ಯದ ಬಾಗಿಲು ತೆರೆಯಲು ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಮೇಟಿ ಅವರು ನಮ್ಮೊಂದಿಗಿಲ್ಲ, ಅವರ ಚಿಂತನೆ ಹೋರಾಟ ಉಳಿಸಲು ಪ್ರಯತ್ನ ಮಾಡ್ತಿದ್ದೇವೆ ಎಂದು ಹೇಳಿದರು.

ಅಧಿಕಾರಕ್ಕಿಂತ ಆದರ್ಶ ಹೆಚ್ಚೆಂದು ಬೆಳೆದು ಬಂದ ನಾಯಕ ಅವರು, ರಾಜಕೀಯವನ್ನು ಸೇವೆ ಎಂದು ಮಾಡಿದವರು ಮೇಟಿ. ಅವರ ಆದರ್ಶ ವಿಚಾರ ಮನಗೊಂಡು ನಿಮಗೆ ಅರ್ಪಿಸಲು ಬಂದಿದ್ದೇವೆ. ಮೇಟಿ ಅವರ ಸ್ಥಾನಕ್ಕೆ ಎಲೆಕ್ಷನ್ ಬರ್ತಿದೆ. ಅತಿ ಹೆಚ್ಚು ಮತಗಳಿಸಿ ಮತ್ತೆ ಬಾಗಲಕೋಟೆ ಗೆಲ್ಲಬೇಕು. ನಾವೆಲ್ಲ ನಿಮ್ಮ ಜೊತೆಗಿದ್ದೇವೆ. ನೀವೆಲ್ಲ ನಮ್ಮ ಜೊತೆಗಿರಿ ಎಂದು ಮನವಿ ಮಾಡಿದ ಅವರು, ಬೊಮ್ಮಾಯಿ, ಕುಮಾರಸ್ವಾಮಿ ಮಕ್ಕಳನ್ನು ನಿಲ್ಲಿಸಿದರು, ರಾಜ್ಯದಲ್ಲಿ ಜನ ನಮ್ಮನ್ನು ಗೆಲ್ಲಿಸಿದರು. ಇಲ್ಲಿಯೂ ಅಷ್ಟೇ ನಮ್ಮ ಸೀಟ್ ಇದು ನಾವು ಗೆಲ್ಲಬೇಕು ಎಂದು ಡಿಕೆಶಿ ಹೇಳಿದರು.

ಮೇಟಿಯವರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯನ್ನು ಅವರಿಗಿಂತ ಅಧಿಕ ಮತ ನೀಡಿ ನಮ್ಮ ಅಭ್ಯರ್ಥಿ ಆರಿಸಿ ಕಳಿಸಬೇಕು. ಹಿಂದೆ ಬೈ ಎಲೆಕ್ಷನ್ ನಲ್ಲಿ ಬೊಮ್ಮಾಯಿ ಮಗ ಸೇರಿದಂತೆ ಇತರರು ನಿಲ್ಲಿಸಿದ್ದರು. ಆಗ ಗ್ಯಾರಂಟಿ ಕೊಟ್ಟ ಸರಕಾರವನ್ನು ಜನ ಕೈ ಹಿಡಿದರು ಎಂದು ಹೇಳಿದರು.

ರೈತರ ಬದುಕಿಗೆ ಪರಿಹಾರ ಕೊಡಲು ಮುಂದಾಗಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ನಮಗೆ ರೈತರ ಸಮಸ್ಯೆ ಬಗ್ಗೆ ಒತ್ತಡವಿತ್ತು. ಈ ಬಗ್ಗೆ ಐದಾರು ಬಾರಿ ಕ್ಯಾಬಿನೆಟ್ ಸೇರಿ ಬಹಳ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಕೈಗೊಂಡ ನಿರ್ಧಾರ ದೇಶದಲ್ಲಿ ವಿಶೇಷವಾಗಿದೆ. ನಮ್ಮ ಕೆಲಸ ಕಣ್ಣಲ್ಲಿ ನೋಡಬೇಕು ಹಾಗೆ ಮಾಡುತ್ತಿದ್ದೇವೆ. ನೀವೆಲ್ಲ ಆಶೀರ್ವಾದ ಮಾಡಿದ್ಧೀರಿ. 5 ಗ್ಯಾರಂಟಿಯನ್ನು ಇಡೀ ದೇಶ ನೋಡಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದರು.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಸತ್ತರೆ ಬದುಕಿಗೆ ಅವಮಾನ. ನಮ್ಮ ಸಾಧನೆ ಬರಿ ಕಿವಿಯಲ್ಲಿ ಕೇಳಬಾರದು, ಕಣ್ಣಲ್ಲಿ ನೋಡಬೇಕು, ಮೆಡಿಕಲ್ ಕಾಲೇಜು ಭೂಮಿಪೂಜೆ ಮಾಡಿದ್ದೇವೆ. ಇದು ಮೇಟಿಯವರ ಕನಸು. ಐದು ಬೆರಳು ಸೇರಿ ಕೈ ಮುಷ್ಟಿಯಾಯ್ತು. ಐದು ಗ್ಯಾರಂಟಿ ಸೇರಿ ಅಭಿವೃದ್ಧಿ ಆಯ್ತು ಎಂದು ಬಣ್ಣಿಸಿದರು.

ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಗೆ ನಿಯೋಗ: ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ನ್ಯಾಯಾಧಿಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ ₹26 ಸಾವಿರ ಕೋಟಿ ಮೊತ್ತದ ಕಾಮಗಾರಿ ಆರಂಭಿಸಿದ್ದೇವೆ. ಈಗಲೇ ನಾವು ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಸರಕಾರ ತಗಾದೆ ತೆಗೆದಿದೆ. ಇದರ ಜತೆಗೆ ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಾನು, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಬೋಸರಾಜು ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.