ಎ.ಎಸ್‌. ಪೊನ್ನಣ್ಣ, ಸಿಎಂ ಕಾನೂನು ಸಲಹೆಗಾರ

ಮಹಿಳಾ ಮೀಸಲಾತಿಯನ್ನು ದೇಶದಲ್ಲಿ ಮೊದಲು ಪರಿಚಯಿಸಿದ್ದೇ ಕಾಂಗ್ರೆಸ್‌. ಹಾಗಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕಾಂಗ್ರೆಸ್‌ ಸೇರಿ ಸರ್ವ ಪಕ್ಷಗಳಿಂದಲೂ ಸರ್ವಾನುಮತದ ಅನುಮೋದನೆ ಸಿಗುತ್ತದೆ ಎಂಬುದು ಕೇಂದ್ರ ಸರ್ಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಆದರೆ ಈ ವಿಧೇಯಕದ ನೆರಳಲ್ಲೇ ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯಗಳಿಗೆ ಸ್ಪಷ್ಟತೆ ನೀಡದೆ, ಚರ್ಚೆಗೆ ಅವಕಾಶ ಕೊಡದೆ, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗೌಪ್ಯವಾಗಿ ಕ್ಷೇತ್ರ ಪುನರ್‌ ವಿಂಗಡಣೆ ವಿಧೇಯಕವನ್ನೂ ಸೇರಿಸಿತ್ತು. ಇದು ಪ್ರಜಾಪ್ರಭುತ್ವದ ದಾರಿ ಅಲ್ಲ.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ವಿಧೇಯಕವನ್ನು ತರಾತುರಿಯಲ್ಲಿ ಕೈಗೆತ್ತಿಕೊಂಡಿದ್ದ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ನಡೆ ಸಹಜವಾಗಿಯೇ ಸಂಶಯಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಯಾವತ್ತೂ ಮಹಿಳಾ ಮೀಸಲಾತಿ ವಿರೋಧಿ ಅಲ್ಲ. ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತದೆ. ಆದರೆ, ಈ ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡು ಅದರೊಳಗೆ ಗೌಪ್ಯವಾಗಿ ಸೇರಿಸಿರುವ ಕ್ಷೇತ್ರ ಪುನರ್‌ ವಿಂಗಡಣೆಯಂಥ ಇನ್ನಿತರೆ ತಿದ್ದುಪಡಿಗಳನ್ನು ಕಣ್ಣುಮುಚ್ಚಿಕೊಂಡು ಒಪ್ಪಲು ಸಾಧ್ಯವಿರಲಿಲ್ಲ.

ಮಹಿಳಾ ಮೀಸಲು ಉದ್ದೇಶ ಹೊಂದಿಲ್ಲ:

ಅಸಲಿಗೆ ಮಹಿಳಾ ಮೀಸಲಾತಿ ಮಸೂದೆಗೆ 2023ರಲ್ಲೇ ಅನುಮೋದನೆ ದೊರಕಿತ್ತು. ಅದು 2026ರ ಏ.16ರಿಂದ ಜಾರಿಗೆ ಬಂದಿದೆ ಎಂದು ಈಗ ನೋಟಿಫಿಕೇಷನ್‌ ಕೂಡ ಮಾಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಈಗ ಅನುಮೋದನೆ ಪಡೆಯಲು ಹೊರಟಿದ್ದು ಮಹಿಳಾ ಮೀಸಲು ಉದ್ದೇಶದ ಮಸೂದೆ ಅಲ್ಲವೇ ಅಲ್ಲ ಎನ್ನುವುದು ಸ್ಪಷ್ಟ. ತಮ್ಮ ರಾಜಕೀಯ ಉದ್ದೇಶಕ್ಕಾಗಿ ತಂದ ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಇತರೆ ಬಿಲ್‌ಗಳ ವಿಚಾರವನ್ನು ಮರೆಮಾಚುವುದಕ್ಕಾಗಿ ತೋರಿಕೆಗಷ್ಟೇ ಮಹಿಳಾ ಮೀಸಲಾತಿ ವಿಚಾರವನ್ನು ಮತ್ತೆ ಉಲ್ಲೇಖಿಸಲಾಗಿದೆ.


ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಈ ಕ್ಷಣದಿಂದಲೇ ಜಾರಿ ಮಾಡಲಿ. ಅದಕ್ಕೆ ಕಾಂಗ್ರೆಸ್‌ನ ಯಾವ ಅಭ್ಯಂತರ, ವಿರೋಧವೂ ಇಲ್ಲ. ಆದರೆ, ಕೇಂದ್ರದ ಉದ್ದೇಶವೇ ಬೇರೆ, ಅವೈಜ್ಞಾನಿಕವಾಗಿ ಕ್ಷೇತ್ರಗಳ ಸೀಮಾಗಡಿ ಪುನರ್‌ ವಿಂಗಡಿಸಿ ಸೀಟುಗಳನ್ನು ಒಡೆದು ಹಾಕುವುದು, ಬಿಜೆಪಿಯವರು ಎಲ್ಲೆಲ್ಲಿ ಗೆಲ್ಲುತ್ತಾರೆ ಅಲ್ಲಿ ಸೀಟುಗಳನ್ನು ಹೆಚ್ಚಿಸಿಕೊಳ್ಳಬೇಕು. ಮುಂದೆಯೂ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಈ ಮಸೂದೆ ಅಂಗೀಕರಿಸಲು ಹೊರಟಿತ್ತು

ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕ:

ರಾಜ್ಯಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಕ್ಷೇತ್ರ ಮರು ವಿಂಗಡಣೆಗೆ ಹೊರಟಿದ್ದು ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕಕಾರಿ ವಿಚಾರ. 70ನೇ ದಶಕದಲ್ಲಿ ಪ್ರಾರಂಭವಾದ ಕುಟುಂಬ ಯೋಜನೆ, ನಂತರ ಆರ್ಥಿಕ ಶಿಸ್ತು, ಸುಸ್ಥಿರ ಆರ್ಥಿಕ ಬೆಳವಣಿಗೆ ಸಾಧನೆ ಮೂಲಕ ದೇಶದ ಆರ್ಥಿಕತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಬಹಳ ದೊಡ್ಡ ಪ್ರಭಾವ ಮತ್ತು ಕೊಡುಗೆ ನೀಡುತ್ತಿರುವುದು ಕರ್ನಾಟಕ ಸೇರಿ ಇತರೆ ದಕ್ಷಿಣದ ರಾಜ್ಯಗಳು ಮತ್ತು ಮಹಾರಾಷ್ಟ್ರ. ದೇಶಕ್ಕೆ ಜನಸಂಖ್ಯೆ ಹೆಚ್ಚಳವೇ ಮಾರಕ ಆಗಬಹುದು ಎಂಬ ಒತ್ತಡದಿಂದ ಜನಸಂಖ್ಯೆ ನಿಯಂತ್ರಣಕ್ಕೆ ಒಂದಷ್ಟು ಕ್ರಮಗಳನ್ನು ದಕ್ಷಿಣ ರಾಜ್ಯಗಳು ಅನುಸರಿಸಿವೆ.

ಆದರೆ, ಜನಸಂಖ್ಯೆ ನಿಯಂತ್ರಣ ಜೊತೆಗೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಜನಸಂಖ್ಯೆ ಆಧಾರದಲ್ಲಿ ನಡೆದರೆ ತೀವ್ರ ಅನ್ಯಾಯವಾಗಲಿದೆ. ಹಾಗಾಗಿ ಆ ರೀತಿ ಯಾವುದೇ ಅನ್ಯಾಯವಾಗದಂತೆ, ಸಂಸತ್‌ನಲ್ಲಿ ಆ ರಾಜ್ಯಗಳ ದನಿ ಕಡಿಮೆಯಾಗದಂತೆ ಸಮತೋಲನ ಬದ್ಧವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು, ಸಹಮತಕ್ಕೆ ತೆಗೆದುಕೊಳ್ಳಬೇಕು. ಆದರೆ, ಇದ್ಯಾವುದನ್ನೂ ಮಾಡದೆ ಏಕಾಏಕಿ ಕ್ಷೇತ್ರ ಪುನರ್‌ ವಿಂಗಡಣೆಗೆ ಹೊರಟಿದ್ದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಲ್ಲ.

ಸ್ಪಷ್ಟತೆ ಇಲ್ಲ, ರಾಜಕೀಯ ಉದ್ದೇಶ ಗೌಪ್ಯ:

ದೇಶದ ಯಾವುದೇ ಕಾನೂನಿಗೆ ತಿದ್ದುಪಡಿ ತರುವಾಗ ಆ ವಿಚಾರದಲ್ಲಿ ಸ್ಪಷ್ಟತೆ ಇರಬೇಕು, ಅದರ ಗುರಿ, ಉದ್ದೇಶ, ಆಶಯಗಳೇನು ಎಂಬುದನ್ನು ತಿಳಿಸಬೇಕು. ಆದರೆ, ಕ್ಷೇತ್ರ ಪುನರ್‌ ವಿಂಗಡಣೆ ವಿಚಾರದಲ್ಲಿ ಇದ್ಯಾವುದೂ ಕಾಣಲಿಲ್ಲ. ಹಾಲಿ 545 ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸಲು ಹೊರಟಿದ್ದ ಹಿಂದೆ ಕೇವಲ ರಾಜಕೀಯ ಲಾಭದ ಗೌಪ್ಯತೆ ಅಡಗಿರುವ ಅನುಮಾನಗಳಿವೆ. ಇನ್ನು, ಕ್ಷೇತ್ರ ಪುನರ್‌ ವಿಂಗಡಣೆಯನ್ನು ಜನಗಣತಿ ಬದಲು ರಾಜ್ಯಗಳ ಹಾಲಿ ಕ್ಷೇತ್ರಗಳ ಪ್ರಮಾಣಕ್ಕೆ ಅನುಗುಣವಾಗಿ ಶೇ.50ರಷ್ಟು ಹೆಚ್ಚಿಸುವ ಸೂತ್ರವನ್ನು ಪ್ರಸ್ತಾಪಿಸಲಾಗಿತ್ತು. ಒಟ್ಟು ಕ್ಷೇತ್ರಗಳ ಸಂಖ್ಯೆ ಹಾಲಿ ಇರುವುದಕ್ಕಿಂತ ಶೇ.55ರಷ್ಟು ಹೆಚ್ಚಾಗುತ್ತಿತ್ತು.

ಇದನ್ನು ಯಾವ ಆಧಾರದಲ್ಲಿ ಮಾಡಲಾಗುತ್ತದೆ? ಇದರಿಂದ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕ್ಷೇತ್ರಗಳು ಹೆಚ್ಚಲಿವೆ ಎನ್ನುವ ಬಗ್ಗೆ ಯಾವುದೇ ಉಲ್ಲೇಖ ತಿದ್ದುಪಡಿ ಮಸೂದೆಯಲ್ಲಿ ಇರಲಿಲ್ಲ. ಉದಾಹರಣೆಗ ಉತ್ತರ ಪ್ರದೇಶದಲ್ಲಿರುವ 80 ಲೋಕಸಭಾ ಕ್ಷೇತ್ರಗಳ ಸಂಖ್ಯೆ 125ಕ್ಕೆ ಏರುತ್ತದೆ. ಬಿಜೆಪಿ ಪ್ರಾಬಲ್ಯವಿರುವ ಉತ್ತರದ ಬಹುತೇಕ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಇದೇ ಪ್ರಮಾಣದಲ್ಲಿ ಹೆಚ್ಚಳವಾಗುತ್ತವೆ. ಆದರೆ, ಕರ್ನಾಟಕದ 28 ಕ್ಷೇತ್ರಗಳ ಸಂಖ್ಯೆ 42 ಆಗಬಹುದು. ಹೀಗೆ ಮಾಡಿದರೆ ರಾಷ್ಟ್ರ ರಾಜಕಾರಣದಲ್ಲಿ ನಮ್ಮ ರಾಜ್ಯದ ಪ್ರಭಾವ ಏನು ಉಳಿಯುತ್ತದೆ? ಇದೇ ಪರಿಸ್ಥಿತಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರಗಳದ್ದೂ ಆಗುತ್ತದೆ.

ಚುನಾವಣೆ ದೃಷ್ಟಿಕೋನದ ತಿದ್ದುಪಡಿ:

ಬಿಹಾರ, ಉತ್ತರ ಪ್ರದೇಶ ಸೇರಿ ಉತ್ತರದ ಇತರೆ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಹೆಚ್ಚಿನ ಸಂಖ್ಯಾಬಲವಿದೆ. ಅಲ್ಲದೆ, ಆ ರಾಜ್ಯಗಳಲ್ಲಿ ಬಿಜೆಪಿ ಪ್ರಭಾವ ಕೂಡ ಹೆಚ್ಚಾಗಿದೆ. ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದರೆ ಸಹಜವಾಗಿಯೇ ಆ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಅನುಕೂಲವಾಗಲಿದೆ. ಹಾಗಾಗಿ ಇದು ಚುನಾವಣೆ ದೃಷ್ಟಿಕೋನವನ್ನಿಟ್ಟುಕೊಂಡು ಮಾಡಿರುವ ಕ್ಷೇತ್ರ ಪುನರ್‌ ವಿಂಗಡಣೆ ತಿದ್ದುಪಡಿಯೇ ಹೊರತು ಬೇರೆ ಯಾವ ಗುರಿ, ಉದ್ದೇಶ, ಆಶಯಗಳು ಕಾಣುತ್ತಿಲ್ಲ. 2011ರ ಜನಗಣತಿ ಆಧಾರದಲ್ಲೇ ಕ್ಷೇತ್ರಗಳ ಗಡಿ ನಿರ್ಣಯ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಗಡಿ ನಿರ್ಣಯ ಆಯೋಗಕ್ಕೇ ಬಿಟ್ಟಿದ್ದೇವೆ ಎನ್ನುತ್ತಾರೆ. ಯಾವ ಸ್ಪಷ್ಟತೆಯೂ ಇಲ್ಲದ ಈ ಪ್ರಯತ್ನವನ್ನು ನೋಡಿದಾಗ ಇವರ ಪ್ರಯತ್ನ ಬಹುಶಃ ಒಂದು ದೇಶ ಒಂದು ಚುನಾವಣೆ ಚಿಂತನೆಗೆ ದಾರಿ ಮಾಡಿಕೊಡುವಂತಿದೆ.

ಮಹಿಳಾ ಮೀಸಲು ಈಗಲೇ ಮಾಡಲಿ:

ಕ್ಷೇತ್ರ ಪುನರ್‌ ವಿಂಗಡಣೆ ತಿದ್ದುಪಡಿಯು ಸಾರ್ವಜನಿಕ ವಲಯ, ದೇಶದ ಪ್ರಜಾಪ್ರಭುತ್ವದ ಮೇಲೆ ದೊಡ್ಡ ಪ್ರಭಾವ ಬೀರುವಂತಹದ್ದು. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಿ ಜನಾಭಿಪ್ರಾಯ ಸಂಗ್ರಹಿಸುವ ಅಗತ್ಯವಿದೆ. ಆದರೆ, ಎಷ್ಟು ಗೌಪ್ಯವಾಗಿ ಈ ವಿಧೇಯಕ ಸೇರಿಸಲಾಗಿತ್ತು ಎಂದರೆ ಸಂಸತ್‌ನಲ್ಲಿ ಮಂಡನೆಯಾಗುವ ಹಿಂದಿನ ದಿನವಷ್ಟೇ ಪ್ರತಿಪಕ್ಷ ನಾಯಕರಿಗೆ ಅದರ ಪ್ರತಿ ಸಿಕ್ಕಿದೆ. ಮರು ದಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾದ ಪ್ರತಿಪಕ್ಷ ನಾಯಕರು ಈ ಮಸೂದೆ ಕುರಿತು ಕಾನೂನು ಸಲಹೆಗಾರರು, ತಜ್ಞರೊಂದಿಗೆ ಚರ್ಚಿಸಲು, ಅಭಿಪ್ರಾಯ ಪಡೆಯಲು ಸಮಯ ಎಲ್ಲಿತ್ತು?

ಹಾಗಾಗಿ ಈ ಮಸೂದೆ ಜಾರಿಯ ಪ್ರಯತ್ನದ ಹಿಂದೆ ಸಾಕಷ್ಟು ಸಂದೇಹಗಳು, ರಾಜಕೀಯ ಪ್ರೇರಿತ ಭಾವನೆಗಳು ಜನರ ಮನದಲ್ಲಿ ಉದ್ಭವಿಸುತ್ತಿವೆ. ಅಲ್ಲದೆ ಈ ಮಧ್ಯೆ, ಮೀಸಲಾತಿಗೆ ಸಂಬಂಧಿಸಿ ಹಿಂದುಳಿದ ವರ್ಗಗಳಲ್ಲಿ ದೊಡ್ಡ ಕೂಗಿದೆ. ಶೇ.33ರಷ್ಟು ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗದವರಿಗೆ ಏಕೆ ಮೀಸಲಾತಿ ಜಾರಿಗೆ ಮಾಡುತ್ತಿಲ್ಲ? ಎಸ್ಸಿ, ಎಸ್ಟಿ ಮೀಸಲಾತಿ ಈಗಾಗಲೇ ಇದೆ. ಹಿಂದುಳಿದ ವರ್ಗಕ್ಕೂ ಮೀಸಲಾತಿ ನೀಡಲು ಇದು ಸುವರ್ಣ ಅವಕಾಶ. ಹಾಗಾಗಿ ಈ ಮಸೂದೆಗಳ ಕುರಿತು ಮರು ಆಲೋಚಿಸಿ. ಸಾರ್ವಜನಿಕ ವಲಯದಲ್ಲಿ ಚರ್ಚಿಸಿ, ಸರ್ವಪಕ್ಷ ಸಭೆ ಕರೆದು ಎಲ್ಲರನ್ನೂ ಸಹಮತಕ್ಕೆ ತೆಗೆದುಕೊಂಡ ನಂತರ ಬೇಕಿದ್ದರೆ ಉಳಿದ ಮಸೂದೆಗಳನ್ನು ಸಂಸತ್‌ ಮುಂದೆ ತರಲಿ.