ಹಲವು ಬ್ಯಾಂಕುಗಳಿಂದ‌ ಗಾರ್ಮೆಂಟ್ಸ್‌ ಕಂಪನಿಯೊಂದು ಪಡೆದಿದ್ದ ಕೋಟ್ಯಂತರ ರುಪಾಯಿ ಸಾಲ ಮರುಪಾವತಿ ಆಗದ ಕಾರಣ ಆ ಸಾಲಕ್ಕೆ ‘ವೈಯುಕ್ತಿಕ ಖಾತರಿದಾರ ಆಗಿದ್ದ  ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ‘ದಿವಾಳಿ’ ಎಂದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್  ಘೋಷಿಸಿದೆ.

 ಬೆಂಗಳೂರು : ಹಲವು ಬ್ಯಾಂಕುಗಳಿಂದ‌ ಗಾರ್ಮೆಂಟ್ಸ್‌ ಕಂಪನಿಯೊಂದು ಪಡೆದಿದ್ದ ಕೋಟ್ಯಂತರ ರುಪಾಯಿ ಸಾಲ ಮರುಪಾವತಿ ಆಗದ ಕಾರಣ ಆ ಸಾಲಕ್ಕೆ ‘ವೈಯುಕ್ತಿಕ ಖಾತರಿದಾರ ಆಗಿದ್ದ’ (ಪರ್ಸನಲ್ ಗ್ಯಾರಂಟರ್) ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ‘ದಿವಾಳಿ’ ಎಂದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಘೋಷಿಸಿದೆ.

ಬೆಂಗಳೂರು ಮೂಲದ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯ 1454.71 ಕೋಟಿ ರು. ಸಾಲ ಮರು ಪಾವತಿ ವಿಚಾರವಾಗಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ನ ಬೆಂಗಳೂರು ಪೀಠದ ನ್ಯಾಯಾಂಗ ಸದಸ್ಯ ಸುನೀಲ್ ಕುಮಾರ್ ಅಗರವಾಲ್ ಹಾಗೂ ತಾಂತ್ರಿಕ ಸದಸ್ಯ ರಾಧಾಕೃಷ್ಣ ಶ್ರೀಪಾದ ಅವರಿದ್ದ ವಿಚಾರಣಾ ಪೀಠ ಈ ಆದೇಶ ಮಾಡಿದೆ.

ಈ ಆದೇಶದಿಂದ ನಸೀರ್ ಅಹ್ಮದ್ ಅವರ ವಿಧಾನಪರಿಷತ್ ಸದಸ್ಯತ್ವ ಅನರ್ಹಗೊಳ್ಳಲಿದೆ ಎಂದು ಹೇಳಲಾಗಿದೆ. ಇನ್ನು ಅವರ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಜೂ.30ಕ್ಕೆ ಕೊನೆಗೊಳ್ಳಲಿದೆ ಎಂಬುದು ಗಮನಾರ್ಹ ಸಂಗತಿ.

ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪನಿಯು 2018ರಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಡಿಬಿಐ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿತ್ತು. ಅದರ ಒಟ್ಟು ಮೊತ್ತ 1454.71 ಕೋಟಿ ರು. ಇತ್ತು. ಈ ಸಾಲಕ್ಕೆ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ‘ವೈಯಕ್ತಿಕ ಖಾತರಿದಾರ‘ (ಪರ್ಸನಲ್ ಗ್ಯಾರಂಟರ್) ಆಗಿದ್ದರು. ಸಾಲ ಮರು ಪಾವತಿ ಆಗದ ಕಾರಣ ಬ್ಯಾಂಕುಗಳು ದಿವಾಳಿತನ ಸಂಹಿತೆ-2016ರಡಿ ಎನ್‌ಎಸ್‌ಎಲ್‌ಟಿ ಮೊರೆ ಹೋಗಿದ್ದವು.

ಬ್ಯಾಂಕುಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ನಸೀರ್ ಅಹ್ಮದ್ ಅವರನ್ನು ದಿವಾಳಿ ಎಂದು ಘೋಷಿಸಿ ಆದೇಶಿಸಿದೆ.

ಪರಿಷತ್ ಸದಸ್ಯತ್ವ ಅನರ್ಹತೆ?

ವಿಧಾನಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಅವರನ್ನು ಎನ್‌ಸಿಎಲ್‌ಟಿಯು ದಿವಾಳಿ ಎಂದು ಘೋಷಿಸಿದ್ದು, ಇದರಿಂದ ಪರಿಷತ್ ಸದಸ್ಯತ್ವ ಅನರ್ಹಗೊಳ್ಳುವ ಭೀತಿ ಎದುರಾಗಿದೆ.

2026ರ ಜೂ.30ಕ್ಕೆ ಸಹಜವಾಗಿಯೇ ನಸೀರ್‌ ಅಹ್ಮದ್ ಅವರ ಅವಧಿ ಮುಕ್ತಾಯವಾಗಲಿದೆ. ನಸೀರ್‌ ಜತೆ ಅವಧಿ ಅಂತ್ಯಗೊಳ್ಳಲಿರುವ ಏಳು ಮಂದಿ ಪರಿಷತ್‌ ಸದಸ್ಯರ ಸ್ಥಾನ ತುಂಬಲು ಜೂ.18ರಂದು ಪರಿಷತ್‌ ಚುನಾವಣೆ ನಡೆಯುತ್ತಿದೆ.

ಇದರ ನಡುವೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಸೀರ್‌ ಅವರನ್ನು ದಿವಾಳಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅದಕ್ಕೂ ಮೊದಲೇ ಅವರು ಅನರ್ಹಗೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉಂಟಾಗಿದೆ.

191ನೇ ಪರಿಚ್ಛೇದದಲ್ಲಿ ಸದಸ್ಯತ್ವ ಅನರ್ಹತೆ ಬಗ್ಗೆ ಸ್ಪಷ್ಟ

ಸಂವಿಧಾನದ 191ನೇ ಪರಿಚ್ಛೇದದಲ್ಲಿ ಸದಸ್ಯತ್ವ ಅನರ್ಹತೆ ಬಗ್ಗೆ ಸ್ಪಷ್ಟಪಡಿಸಲಾಗಿದೆ. 191 (1) (ಸಿ) ಅಡಿ ದಿವಾಳಿ ಆದಂತಹ ವ್ಯಕ್ತಿಯು ಸಂಸತ್‌, ವಿಧಾನಸಭೆ ಅಥವಾ ವಿಧಾನಪರಿಷತ್‌ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ. ಆದರೆ, ನಸೀರ್ ಅಹ್ಮದ್‌ ಅವರ ಅವಧಿ ಸ್ವಾಭಾವಿಕವಾಗಿಯೇ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅನರ್ಹ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ವಿಧಾನಪರಿಷತ್‌ ಸಭಾಪತಿ ಅವರ ವಿವೇಚನೆಗೆ ಬಿಟ್ಟದ್ದು ಎಂದು ವಿಧಾನಪರಿಷತ್‌ ಸಚಿವಾಲಯದ ಮೂಲಗಳು ತಿಳಿಸಿವೆ