ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ದಾಸಕರಿಯಪ್ಪಗೆ ಹಿನ್ನಡೆ ಆಗಿದೆಯೆಂದು ತಲೆಯಲ್ಲಿಟ್ಟುಕೊಳ್ಳದೇ, ಜಿಲ್ಲೆ, ಕ್ಷೇತ್ರಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡೋಣ. ಬಿಜೆಪಿಗೆ ಗತವೈಭವ ಮರಳಿ ತರೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಸತತ ಪರಿಶ್ರಮದಿಂದ ಸುಮಾರು 64 ಸಾವಿರ ಮತಗಳ ಸಮೀಪ ಮತ ಪಡೆದಿದ್ದೇವೆ. ಈ ಸೋಲಿಗೆ ಎದೆಗುಂದದೆ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡೋಣ ಎಂದರು.ಎಲ್ಲಾ ಸಮಸ್ಯೆ, ವ್ಯತ್ಯಾಸಗಳನ್ನು ಬದಿಗಿಟ್ಟು, ಎಲ್ಲರನ್ನೂ ಒಳಗೊಂಡಂತೆ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡೋಣ ಎಂದು ಅವರು ಮನವಿ ಮಾಡಿದರು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ, ಒಂದಾಗಿ ಬಿಜೆಪಿಗೆ ಗತವೈಭವ ಮರು ಸ್ಥಾಪನೆಯಾಗುವಂತೆ ಶ್ರಮ ಹಾಕುತ್ತೇವೆ. ನಮಗೆ ಒಳ್ಳೆಯ ಕಾರ್ಯಕರ್ತರನ್ನು ಗುರುತಿಸಿ, ಶಕ್ತಿ ತುಂಬುವ ಜವಾಬ್ಧಾರಿ, ಕರ್ತವ್ಯ ನನಗಿದೆ. ಖಂಡಿತಾ ಆ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.ದಕ್ಷಿಣ ಕ್ಷೇತ್ರದ ಸೋಲಿನಿಂದ ಯಾರೂ ಹತಾಶರಾಗಬೇಕಾಗಿಲ್ಲ. ಬಿ.ಎಸ್.ಯಡಿಯೂರಪ್ಪ ಅನೇಕ ಸವಾಲು, ಹೋರಾಟಗಳನ್ನು ಮಾಡಿದ್ದಾರೆ. ಇಂತಹ ಸವಾಲುಗಳನ್ನು ಗಟ್ಟಿಯಾಗಿ ನಿಂತು ಎದುರಿಸಿದ್ದಾರೆ. ಅದೇ ಯಡಿಯೂರಪ್ಪನವರ ಮಗನಾಗಿ, ರಾಜ್ಯಾಧ್ಯಕ್ಷನಾಗಿ ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ. ಮತ್ತೆ ಬಿಜೆಪಿಗೆ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಗತವೈಭವವನ್ನು ತಂದು, ಬಿಜೆಪಿಯನ್ನು ಮರು ಪ್ರತಿಷ್ಠಾಪನೆಯನ್ನು ಎಲ್ಲಾ ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಮಾಡುತ್ತೇವೆ ಎಂದು ವಿಜಯೇಂದ್ರ ಹೇಳಿದರು.