ಪತ್ರಬರಹಗಾರರ ಪ್ರಕಾರ, ಈ ಪೇಪರ್‌ಲೆಸ್ ವ್ಯವಸ್ಥೆಯಲ್ಲಿ ಆಸ್ತಿ ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆ ಸಿಗುವುದಿಲ್ಲ. ಎಲ್ಲಾ ದಾಖಲೆಗಳು ಡಿಜಿಟಲ್ ಲಾಕರ್‌ನಲ್ಲಿ ಮಾತ್ರ ಉಳಿಯುವುದರಿಂದ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ. ಪಾಸ್‌ವರ್ಡ್ ಮರೆತರೆ ಅಥವಾ ತಾಂತ್ರಿಕ ಸಮಸ್ಯೆ ಉಂಟಾದರೆ ತಮ್ಮ ಆಸ್ತಿ ದಾಖಲೆಗಳನ್ನೇ ಪಡೆಯಲು ಸಾಧ್ಯವಿಲ್ಲ ಎಂಬ ಭೀತಿ ವ್ಯಕ್ತವಾಗಿದೆ. ಇನ್ನೂ ಆನ್‌ಲೈನ್ ಮೂಲಕ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪಾವತಿ ಮಾಡಿದ ಬಳಿಕ ಯಾವುದಾದರೂ ಕಾರಣಕ್ಕೆ ನೋಂದಣಿ ಆಗದಿದ್ದರೆ ಹಣ ತಿರುಗಿಸಿಕೊಳ್ಳಲು ವ್ಯವಸ್ಥೆ ಇಲ್ಲ. ಇದರ ಜೊತೆಗೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಆರ್ಥಿಕ ಭಾರ ಹೆಚ್ಚುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನರಾಜ್ಯ ಸರ್ಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ಜಾರಿಗೆ ತರಲು ಮುಂದಾಗಿರುವ `ಕಾವೇರಿ ಪೇಪರ್‌ಲೆಸ್ ನೋಂದಣಿ ವ್ಯವಸ್ಥೆ ಸಾರ್ವಜನಿಕರಿಗೆ ಅನೇಕ ತೊಂದರೆಗಳನ್ನು ಉಂಟುಮಾಡುತ್ತಿದೆ ಎಂದು ಹಾಸನ ಜಿಲ್ಲಾ ಪತ್ರಬರಹಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಈ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸದೇ ರಾಜ್ಯದಾದ್ಯಂತ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ, ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಸಭೆ ಸೇರಿ ಪ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡಲು ಮುಂದಾಗುತ್ತೇವೆ ಎಂದು ಜಿಲ್ಲಾ ಪತ್ರ ಬರಹಗಾರರ ವೇದಿಕೆಯ ಜಿ. ಕೃಷ್ಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪತ್ರಬರಹಗಾರರ ಪ್ರಕಾರ, ಈ ಪೇಪರ್‌ಲೆಸ್ ವ್ಯವಸ್ಥೆಯಲ್ಲಿ ಆಸ್ತಿ ನೋಂದಣಿ ಬಳಿಕ ಖರೀದಿದಾರರಿಗೆ ಯಾವುದೇ ಭೌತಿಕ ದಾಖಲೆ ಸಿಗುವುದಿಲ್ಲ. ಎಲ್ಲಾ ದಾಖಲೆಗಳು ಡಿಜಿಟಲ್ ಲಾಕರ್‌ನಲ್ಲಿ ಮಾತ್ರ ಉಳಿಯುವುದರಿಂದ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ. ಪಾಸ್‌ವರ್ಡ್ ಮರೆತರೆ ಅಥವಾ ತಾಂತ್ರಿಕ ಸಮಸ್ಯೆ ಉಂಟಾದರೆ ತಮ್ಮ ಆಸ್ತಿ ದಾಖಲೆಗಳನ್ನೇ ಪಡೆಯಲು ಸಾಧ್ಯವಿಲ್ಲ ಎಂಬ ಭೀತಿ ವ್ಯಕ್ತವಾಗಿದೆ. ಇನ್ನೂ ಆನ್‌ಲೈನ್ ಮೂಲಕ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪಾವತಿ ಮಾಡಿದ ಬಳಿಕ ಯಾವುದಾದರೂ ಕಾರಣಕ್ಕೆ ನೋಂದಣಿ ಆಗದಿದ್ದರೆ ಹಣ ತಿರುಗಿಸಿಕೊಳ್ಳಲು ವ್ಯವಸ್ಥೆ ಇಲ್ಲ. ಇದರ ಜೊತೆಗೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಆರ್ಥಿಕ ಭಾರ ಹೆಚ್ಚುತ್ತಿದೆ ಎಂದರು.ಇ-ಸಹಿ ವ್ಯವಸ್ಥೆ ಕೂಡ ಮತ್ತೊಂದು ದೊಡ್ಡ ಸಮಸ್ಯೆಯಾಗಿದ್ದು, ಹಿರಿಯ ನಾಗರಿಕರು, ರೈತಾಪಿ ವರ್ಗ ಹಾಗೂ ತಾಂತ್ರಿಕ ಅರಿವು ಇಲ್ಲದವರು ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಭೌತಿಕ ಸಹಿ ಇಲ್ಲದೇ ನೋಂದಣಿ ನಡೆಯುವುದರಿಂದ ದಸ್ತಾವೇಜುಗಳ ಪ್ರಾಮಾಣಿಕತೆ ಪ್ರಶ್ನೆಗೆ ಒಳಗಾಗುತ್ತದೆ. ಹ್ಯಾಕರ್‌ಗಳ ದಾಳಿ ಹಾಗೂ ಒಟಿಪಿ ಮೋಸಗಳ ಹಿನ್ನೆಲೆ ಡಿಜಿಟಲ್ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಹೆಚ್ಚುತ್ತಿದೆ ಎಂದು ದೂರಿದರು.
ಮತ್ತೊಂದು ಪ್ರಮುಖ ಸಮಸ್ಯೆಯಾಗಿ, ಸಾಕ್ಷಿದಾರರ ಹಾಜರಾತಿ ಕುರಿತ ಗೊಂದಲ ಉಂಟಾಗಿದೆ. ಆನ್‌ಲೈನ್‌ನಲ್ಲಿ ದಾಖಲೆ ಅಪ್‌ಲೋಡ್ ಮಾಡುವಾಗ ಸಾಕ್ಷಿದಾರರ ವಿವರಗಳನ್ನು ನೀಡಿದರೂ, ನೋಂದಣಿ ಸಮಯದಲ್ಲಿ ಅವರು ಹಾಜರಾಗದಿದ್ದರೆ ಪ್ರಕ್ರಿಯೆ ಮುಂದೂಡಬೇಕಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಹಣದ ನಷ್ಟ ಉಂಟಾಗುತ್ತಿದೆ. ಬ್ಯಾಂಕ್ ಸಾಲ ಪಡೆಯಲು ಮೂಲಪತ್ರಗಳ ಅವಶ್ಯಕತೆ ಇರುವ ಸಂದರ್ಭದಲ್ಲಿ, ಭೌತಿಕ ದಾಖಲೆಗಳಿಲ್ಲದಿರುವುದು ಮತ್ತಷ್ಟು ತೊಂದರೆ ತರಲಿದೆ. ವಿಲ್ ಪ್ರಕ್ರಿಯೆಗಳಲ್ಲಿ ಗುಪ್ತತೆಯ ಕೊರತೆ, ವಾರಸುದಾರರಿಗೆ ಮಾಹಿತಿ ತಲುಪದಿರುವ ಸಾಧ್ಯತೆಗಳಿವೆ. ಪತ್ರಬರಹಗಾರರ ಅಭಿಪ್ರಾಯದಲ್ಲಿ, ಈ ವ್ಯವಸ್ಥೆ ಭೂಮಾಫಿಯಾ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ದಸ್ತಾವೇಜು ತಯಾರಿಸಿದವರು ಅಥವಾ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾದವರು ಯಾರಿದ್ದಾರೆ ಎಂಬುದು ಸ್ಪಷ್ಟವಾಗದಿರುವುದು ಕಾನೂನು ತನಿಖೆಗಳಿಗೆ ಅಡ್ಡಿಯಾಗಬಹುದು ಎಂದು ಅವರು ತಿಳಿಸಿದರು. ಇದಲ್ಲದೆ, ಈ ಹೊಸ ವ್ಯವಸ್ಥೆಯಿಂದ ರಾಜ್ಯದ ಲಕ್ಷಾಂತರ ಪರವಾನಗಿ ಪಡೆದ ಪತ್ರಬರಹಗಾರರ ಜೀವನೋಪಾಯಕ್ಕೂ ಹೊಡೆತ ಬೀಳಲಿದೆ. ವರ್ಷಗಳಿಂದ ಈ ವೃತ್ತಿ ಅವಲಂಬಿಸಿಕೊಂಡು ಬದುಕುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಭೀತಿ ವ್ಯಕ್ತವಾಗಿದೆ. ಸರ್ಕಾರವು ಈ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ನೀಡದೆ, ಜನಾಭಿಪ್ರಾಯ ಪಡೆಯದೆ ತುರ್ತಾಗಿ ಜಾರಿಗೆ ತಂದಿರುವುದು ವಿಷಾದನೀಯ ಎಂದು ಅವರು ತಿಳಿಸಿದರು. ಆದ್ದರಿಂದ, ಪೇಪರ್‌ಲೆಸ್ ನೋಂದಣಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಲೋಪದೋಷಗಳನ್ನು ಸರಿಪಡಿಸಿ, ಭೌತಿಕ ದಾಖಲೆಗಳನ್ನು ಕಡ್ಡಾಯವಾಗಿ ನೀಡುವ ವ್ಯವಸ್ಥೆ ಮಾಡಬೇಕು. ಜೊತೆಗೆ ಪತ್ರಬರಹಗಾರರಿಗೆ ಪ್ರತ್ಯೇಕ ಲಾಗಿನ್, ಗುರುತಿನ ಚೀಟಿ ಹಾಗೂ ಡಿಜಿಟಲ್ ಸಹಿಗೆ ಅವಕಾಶ ಕಲ್ಪಿಸಬೇಕು ಎಂದು ಹಾಸನ ಜಿಲ್ಲಾ ಪತ್ರಬರಹಗಾರರು ಸರ್ಕಾರವನ್ನು ಆಗ್ರಹಿಸಿದರು. ಇನ್ನೂ ಸರಕಾರವು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಫ್ರೀಡಂ ಪಾರ್ಕಿನಲ್ಲಿ ಸತ್ಯಗ್ರಹ ಮಾಡಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಪತ್ರ ಬರಹಗಾರರಾದ ಎ.ಕೆ. ತುಳಸಿದಾಸ್, ಎಚ್. ಕೆ. ಜಯರಾಮ್, ಸತೀಶ್ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.