ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘2023ರ ಚುನಾವಣೆ ವೇಳೆಯಲ್ಲೇ ಮತ ಎಣಿಕೆ ಬಳಿಕ ಮತಪತ್ರ ಹಾಗೂ ದಾಖಲೆಗಳನ್ನು ಸಾಗಿಸುವಾಗ ಸಿಬ್ಬಂದಿಯೇ ಮತ ತಿದ್ದಿದ್ದಾರೆ. ಅಂಚೆ ಮತ ಮರು ಎಣಿಕೆ ವೇಳೆ ರಾಜೇಗೌಡರಿಗೆ ಚಲಾವಣೆಯಾಗಿದ್ದ 569 ಅಂಚೆ ಮತಗಳಲ್ಲಿ 255 ಮತಗಳನ್ನು ಅನೂರ್ಜಿತಗೊಳಿಸಲಾಗಿದೆ. 2023ರ ಮತ ಎಣಿಕೆ ವೇಳೆ ಈ ಮತಪತ್ರಗಳನ್ನು ಬಿಜೆಪಿ ಏಜೆಂಟ್ ನೋಡಿ ಸರಿ ಇದೆ ಎಂದು ಸಹಿ ಮಾಡಿದ್ದಾರೆ. ಅಂಥ ಮತಗಳು ಈಗ ಹೇಗೆ ಅನೂರ್ಜಿತಗೊಂಡವು?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮತಪತ್ರದಲ್ಲಿ ತಪ್ಪಾಗಿ ಇಂಕ್ ಗುರುತು ಮಾಡಲಾಗಿದೆ ಎಂಬ ಕಾರಣ ನೀಡಿ ರಾಜೇಗೌಡರಿಗೆ ಚಲಾವಣೆ ಆಗಿರುವ ಮತಗಳನ್ನೇ ಅನೂರ್ಜಿತಗೊಳಿಸಲಾಗಿದೆ. ಇದನ್ನು ಚುನಾವಣಾ ಅಧಿಕಾರಿಗಳು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಬೇಕಿತ್ತು. ಈ ರೀತಿ ಆಗಿರುವುದು ನ್ಯಾಯಾಲಯದ ಗಮನಕ್ಕಾದರೂ ತರಬೇಕಿತ್ತು. ಮತ ಎಣಿಕೆ ಬಗ್ಗೆ ನಮ್ಮ ಚುನಾವಣಾ ಏಜೆಂಟರು ಆಕ್ಷೇಪ ಎತ್ತಿದ್ದು ಸಹಿ ಹಾಕಿಲ್ಲ. ಆದರೂ, ಜಿಲ್ಲಾಧಿಕಾರಿಗಳು ಹಾಗೂ ರಿಟರ್ನಿಂಗ್ ಅಧಿಕಾರಿಗಳು ಮೇಲಿನ ಒತ್ತಡದಿಂದ ತರಾತುರಿಯಲ್ಲಿ ಫಲಿತಾಂಶ ಘೋಷಿಸಿದ್ದಾರೆ. ಇದರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಸಿಎಂ ಪ್ರಕಾರ ಷಡ್ಯಂತ್ರ ಹೇಗೆ?:
ರಾಜೇಗೌಡರನ್ನು ವಿಜಯಿ ಎಂದು ಘೋಷಿಸುವ ಮೊದಲು ಅಂಚೆ ಮತಗಳೆಲ್ಲ ಊರ್ಜಿತ ಮತಗಳು ಎಂದು ರಿಟರ್ನಿಂಗ್ ಅಧಿಕಾರಿ, ಸಹಾಯಕ ರಿಟರ್ನಿಂಗ್ ಅಧಿಕಾರಿ, ಏಜೆಂಟರು ತೀರ್ಮಾನಿಸಿದ್ದರು. ಆದರೂ ಇದನ್ನು ಮತ್ತೆ ವಿವಾದ ಮಾಡಲಾಯಿತು ಎಂದು ಜೀವರಾಜ್ ಹಾಗೂ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.ಮರು ಎಣಿಕೆಗೆ ಆದೇಶಿಸಿದ್ದ ನ್ಯಾಯಾಲಯವು, ಮರು ಎಣಿಕೆ ಮಾಡಿ ತಪ್ಪಾಗಿದ್ದರೆ ಪತ್ತೆ ಹಚ್ಚಿ, ಇಲ್ಲದಿದ್ದರೆ ಹಿಂದಿನ ರೀತಿಯಲ್ಲೇ ಫಲಿತಾಂಶ ಘೋಷಿಸಿ ಎಂದು ಹೇಳಿತ್ತು. ಆದರೆ ಮೇ 2 ರಂದು ಮತ ಪತ್ರ ಎಣಿಸುವಾಗ ರಾಜೇಗೌಡರಿಗೆ ಚಲಾವಣೆಯಾಗಿದ್ದ 569 ಮತಗಳಲ್ಲಿ 314 ಮಾತ್ರ ಊರ್ಜಿತ, 255 ಅನೂರ್ಜಿತ ಎಂದು ಮಾಡಲಾಗಿದೆ.
ಮತ ಚಲಾವಣೆ ವೇಳೆ ಇಂಕ್ ಒಂದು ಮಾರ್ಕಿನಿಂದ ಇನ್ನೊಂದು ಮಾರ್ಕಿಗೆ ಇದ್ದರೆ ಅನೂರ್ಜಿತ ಎಂದು ಆಗುತ್ತದೆ. 2023ರಲ್ಲಿ ಅನೂರ್ಜಿತ ಆಗಿರಲಿಲ್ಲ. ಈಗ ಹೇಗಾಯ್ತು? ಚುನಾವಣಾ ಸಿಬ್ಬಂದಿಯೇ 2023ರ ಚುನಾವಣೆ ಬಳಿಕ ಮತಪತ್ರ ದಾಖಲೆಗಳನ್ನು ಸಾಗಿಸುವಾಗ ಬಿಜೆಪಿ ಕುಮ್ಮಕ್ಕಿನಿಂದ ತಿದ್ದಿದ್ದಾರೆ ಎಂಬುದು ನಮ್ಮ ಆರೋಪ. ಇದು ಡಕಾಯಿತಿ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕೇಂದ್ರದಿಂದ ಬಂದಿದ್ದ ವೀಕ್ಷಕರೂ ಸಹ ಗಂಭೀರ ಅಪರಾಧ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೊಗಕ್ಕೆ ಪತ್ರ ಬರೆದಿರುವುದಾಗಿ ಮಾಹಿತಿ ಇದೆ. ಹಿಂದೆ ಚಿಲುಮೆಎನ್ನುವ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನೇ ತಿದ್ದುಪಡಿ ಮಾಡಿದ್ದರು. ಆಳಂದದಲ್ಲಿ ನೈಜ ಮತದಾರರನ್ನೇ ಬಿಟ್ಟು ಬಿಟ್ಟಿದ್ದರು. ಮೊದಲಿನಿಂದ ಬಿಜೆಪಿಗೆ ಪ್ರಜಾಪ್ರಭುತ್ಚ, ಸಂವಿಧಾನ ಮೇಲೆ ನಂಬಿಕೆ ಇಲ್ಲ. ನಿಷ್ಪಕ್ಷಪಾತ ಚುನಾವಣೆ ಮೇಲೆ ನಂಬಿಕೆ ಇಲ್ಲ. ಅವರು ಇಂಥ ಅಪರಾಧ ಮಾಡಲು ಹಿಂಜರಿಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ಗ್ಯಾರಂಟಿ ಪ್ರಾಧಿಕಾರದ ರಾಜ್ಯಾದ್ಯಕ್ಷ ಎಚ್.ಎಂ. ರೇವಣ್ಣ ಸೇರಿ ಹಲವರು ಹಾಜರಿದ್ದರು.
ಜೀವರಾಜ್ ಹೇಳಿದ್ದರು: ಡಿಸಿಎಂ