ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ವೈಲ್ಡ್‌ಲೈಫ್ ಎಸ್ಓಎಸ್ ಸಂಸ್ಥೆಗಳು ಜಂಟಿಯಾಗಿ 4 ವರ್ಷದ ಬೆಂಗಾಲ್‌ ಸಿಂಚನಾ ಎಂಬ ಹೆಣ್ಣು ಹುಲಿಗೆ ಅಪರೂಪದ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿವೆ.

 ಬೆಂಗಳೂರು ದಕ್ಷಿಣ : ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ವೈಲ್ಡ್‌ಲೈಫ್ ಎಸ್ಓಎಸ್ ಸಂಸ್ಥೆಗಳು ಜಂಟಿಯಾಗಿ 4 ವರ್ಷದ ಬೆಂಗಾಲ್‌ ಸಿಂಚನಾ ಎಂಬ ಹೆಣ್ಣು ಹುಲಿಗೆ ಅಪರೂಪದ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿವೆ.

ಪಂಜರವನ್ನು ಕಚ್ಚಿದ ಕಾರಣ ಸಿಂಚನಾಳ ಬಲವಾದ ಕೋರೆ ಹಲ್ಲು ಹಾನಿಗೊಳಗಾಗಿತ್ತು. ಚಿಕಿತ್ಸೆ ಮಾಡದಿದ್ದರೆ ಸೋಂಕು, ತೀವ್ರ ನೋವು ಮತ್ತು ಆರೋಗ್ಯ ಹದಗೆಡುವ ಅಪಾಯವಿತ್ತು. ಹುಲಿಗಳ ಕೋರೆ ಹಲ್ಲುಗಳು ಆಹಾರವನ್ನು ಹಿಡಿದು ಹರಿದು ತಿನ್ನಲು ಅತ್ಯಂತ ಮುಖ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಳುವ ಬದಲು ಚಿಕಿತ್ಸೆ:

ಸಾಮಾನ್ಯವಾಗಿ ಹಲ್ಲನ್ನು ಕಿತ್ತು ಹಾಕಲಾಗುತ್ತಿದ್ದರೂ, ಇಲ್ಲಿ ಹಲ್ಲನ್ನು ಉಳಿಸುವ ಉದ್ದೇಶದಿಂದ ರೂಟ್ ಕೆನಾಲ್ ಮಾಡಲು ತೀರ್ಮಾನಿಸಿ ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದ ಶಸ್ತ್ರಚಿಕಿತ್ಸಾ ಥಿಯೇಟರ್‌ನಲ್ಲಿ 3 ಗಂಟೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಸಿಂಚನಾಳ ನೈಸರ್ಗಿಕ ರಚನೆ ಮತ್ತು ಆಹಾರ ಸೇವಿಸುವ ಸಾಮರ್ಥ್ಯ ಉಳಿಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಯಾವುದೇ ತೊಂದರೆಯಿಲ್ಲದೆ ಸಿಂಚನಾ ಚೇತರಿಸಿಕೊಂಡಿದ್ದಾಳೆ.

ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಶುಶ್ರೂಷೆ

ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಶುಶ್ರೂಷೆ ನಡೆಸಲಾಗುತ್ತಿದೆ.ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ಸೂರ್ಯಸೇನ್ ಮಾತನಾಡಿ, ಎರಡೂ ಸಂಸ್ಥೆಗಳ ಸಹಯೋಗದಿಂದ ಸಿಂಚನಾಳ ದೀರ್ಘಕಾಲದ ಯೋಗಕ್ಷೇಮಕ್ಕಾಗಿ ಹಲ್ಲು ಕೀಳುವ ಬದಲು ರೂಟ್‌ಕೆನಾಲ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು. ಹುಲಿಗೆ ರೂಟ್ ಕೆನಾಲ್ ಮಾಡುವುದು ವನ್ಯಜೀವಿ ದಂತವೈದ್ಯದಲ್ಲಿ ಅತ್ಯಂತ ಕಷ್ಟದ ಪ್ರಕ್ರಿಯೆಗಳಲ್ಲಿ ಒಂದು. ಹಲ್ಲನ್ನು ಉಳಿಸಿದ್ದರಿಂದ ಆಕೆಗೆ ಸಾಮಾನ್ಯ ಜೀವನಕ್ಕೆ ಉತ್ತಮ ಅವಕಾಶ ಸಿಕ್ಕಿದೆ ಎಂದು ವೈಲ್ಡ್‌ಲೈಫ್ ಎಸ್‌ಒಎಸ್ ಸಹ-ಸಂಸ್ಥಾಪಕ ಕಾರ್ತಿಕ್ ಸತ್ಯನಾರಾಯಣ ತಿಳಿಸಿದರು. ಡಾ. ಅರುಣ್ ಸೇರಿದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ಭಾಗವಹಿಸಿದ್ದರು.