ಅಭಿವೃದ್ಧಿ ಹೇಗಿರಬೇಕೆಂದು ಶಾಸಕರಿಂದ ಕಲಿಯಬೇಕಿಲ್ಲ: ಸುನಂದಾ

KannadaprabhaNewsNetwork |  
Published : Jun 12, 2025, 01:35 AM ISTUpdated : Jun 12, 2025, 01:36 AM IST
೧೧ಕೆಎಂಎನ್‌ಡಿ-3ಮಂಡ್ಯ ಕ್ಷೇತ್ರದ ಶಾಸಕರ ಹೇಳಿಕೆಯನ್ನು ಖಂಡಿಸಿ ರೈತಸಂಘಟನೆಗಳು ಮತ್ತು ಕರುನಾಡ ಸೇವಕರು ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಅಭಿವೃದ್ಧಿ ಪೂರಕ ಯೋಜನೆಗಳಲ್ಲ, ಬಂಡವಾಳಶಾಹಿ ಯೋಜನೆಗಳು. ಮನರಂಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಬಲಿಕೊಟ್ಟು ರೈತರನ್ನು ಭಿಕಾರಿಗಳನ್ನಾಗಿ ಮಾಡುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿಯಿಂದಾಗುವ ಅಪಾಯ ಅರಿಯದೆ ಮಂಡ್ಯ ಕ್ಷೇತ್ರದ ಶಾಸಕರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಸಾಮಾನ್ಯ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. ಬಾಯಿಗೆ ಬಂದಂತೆ ಹರಟಬಾರದು. ಅಭಿವೃದ್ಧಿ ಹೇಗಿರಬೇಕೆಂಬುದನ್ನು ರೈತ ಮುಖಂಡರು ಶಾಸಕರಿಂದ ಕಲಿಯುವ ಅಗತ್ಯವಿಲ್ಲ ಎಂದು ರೈತ ನಾಯಕಿ ಸುನಂದಾ ಜಯರಾಂ ಕಟುವಾಗಿ ಟೀಕಿಸಿದರು.

ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯದ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಗಳನ್ನು ವಿರೋಧಿಸಿ ಹಾಗೂ ಮಂಡ್ಯ ಕ್ಷೇತ್ರದ ಶಾಸಕರ ಹೇಳಿಕೆಯನ್ನು ಖಂಡಿಸಿ, ರೈತ ಸಂಘಟನೆಗಳು ಮತ್ತು ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಮಾತನಾಡಿದರು.

ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಅಭಿವೃದ್ಧಿ ಪೂರಕ ಯೋಜನೆಗಳಲ್ಲ, ಬಂಡವಾಳಶಾಹಿ ಯೋಜನೆಗಳು. ಮನರಂಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಬಲಿಕೊಟ್ಟು ರೈತರನ್ನು ಭಿಕಾರಿಗಳನ್ನಾಗಿ ಮಾಡುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪಿ.ರವಿಕುಮಾರ್ ಅವರು ಚಳವಳಿ ಮತ್ತು ರೈತರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ೨೦ ಸಾವಿರ ಜನ ಹೋಗಿ ಅಣೆಕಟ್ಟೆಯನ್ನು ಗುದ್ದುತ್ತಾರಾ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಣೆಕಟ್ಟೆ ನಿರ್ಮಾಣವಾಗಿ ೯೦ ವರ್ಷವಾಗಿದೆ. ಯೋಜನೆ ನಿರ್ಮಾಣ ವೇಳೆ ಭೂಮಿಯಡಿ ಸ್ವಲ್ಪ ಅಪಾಯವಾದರೂ ರೈತರ ಬದುಕೇ ನಾಶವಾಗುತ್ತದೆ. ಈ ಭಾಗದ ಪರಿಸರ, ಜಲ, ವಾಯುಮಾಲಿನ್ಯ, ಕೃಷಿ ಭೂಮಿ ಹಾಳಾಗುವುದೆಂಬ ಕನಿಷ್ಠ ಪ್ರಜ್ಞೆ ಶಾಸಕರಿಗಿಲ್ಲವೆಂದಾದರೆ ನಾವೇನು ಹೇಳಲು ಸಾಧ್ಯ. ಇಂತಹವರು ನಮ್ಮ ಜನಪ್ರತಿನಿಧಿಗಳಾಗಿರುವುದು ನಮ್ಮ ದುರದೃಷ್ಟ ಎಂದು ಟೀಕಿಸಿದರು.

ಮಂಡ್ಯ ಜಿಲ್ಲೆ ಸಂಪೂರ್ಣ ಹಳ್ಳಿಗಳ ಜಿಲ್ಲೆ. ನಾವು ಅಣೆಕಟ್ಟೆಯನ್ನು ನಂಬಿರುವವರು. ಕೃಷಿಕರು, ನಾವು ಬೆಳೆದರೆ ಮಾತ್ರ ತಿನ್ನುವ ಅನ್ನ ಸಿಗುವುದು. ಮಾತನಾಡುವುದರಿಂದ ಅನ್ನ ಸಿಗುವುದಿಲ್ಲ. ಶಾಸಕರು ಈ ರೀತಿ ಮಾತನಾಡಬಾರದು. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಮಾಡುವುದಲ್ಲ. ಜನರ ಬದುಕನ್ನು ಉತ್ತಮ ಸ್ಥಿತಿಗೆ ತರುವುದು ನಿಜವಾದ ಅಭಿವೃದ್ಧಿ. ಎಲ್ಲದ್ದಕ್ಕೂ ಭಿಕ್ಷೆ ಬೇಡಿ ಕೈಯೊಡ್ಡುವುದು ಅಭಿವೃದ್ಧಿಯಲ್ಲ ಎಂದು ಕುಟುಕಿದರು.

ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗ ಸಂಚಾಲಕ ಎಂ.ಬಿ.ನಾಗಣ್ಣ ಮಾತನಾಡಿ, ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯಿಂದ ರೈತರಿಗೆ ಎಷ್ಟು ತೊಂದರೆ ಇದೆ ಎಂಬುದನ್ನು ಈಗಾಗಲೇ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ನಮ್ಮ ಶಾಸಕರು ತಮ್ಮ ಅಧಿಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದನ್ನು ಬಿಡಬೇಕು. ಇನ್ನಾದರೂ ರೈತರ ಹೋರಾಟಕ್ಕೆ ಮತ್ತು ಅಣೆಕಟ್ಟೆ ಉಳಿವಿಗೆ ಅಗತ್ಯ ಕ್ರಮ ವಹಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಿ ತಕ್ಕ ಉತ್ತರ ನೀಡಬೇಕಾಗುತ್ತದೆ. ಇದು ಎಚ್ಚರಿಕೆಯಲ್ಲ, ಮನವರಿಕೆ ಎಂಬುದನ್ನು ಆರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಸುಧೀರ್‌ಕುಮಾರ್, ಎಸ್.ನಾರಾಯಣ್, ಎಚ್.ಡಿ.ಜಯರಾಂ, ಶಿವಳ್ಳಿ ಚಂದ್ರು, ಸುಶೀಲಮ್ಮ, ಸತ್ಯಭಾಮ, ತನುಜಾ, ವಿಜಯಲಕ್ಷ್ಮೀ, ಕಮಲಮ್ಮ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''