ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ಇಲ್ಲಿನ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾಲೂಕಿನ ರೈತರಿಗೆ ಮೇವಿನ ಬೀಜ ಮಿನಿ ಕಿಟ್ಸ್ ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.
ರೈತರು ಭಯ ಪಡುವ ಅಗತ್ಯವಿಲ್ಲ. ಮಳೆ ತಡವಾಗಿ ಆದರೂ ಬರುತ್ತದೆ. ಈಗ್ಗೆ 10 ವರ್ಷಗಳ ಹಿಂದೆ ಇಂತಧ್ದೆ ಬರಗಾಲ ಬಂದಿತ್ತು. ಆಗ ಸಹ ನಾವುಗಳು ಗೋಶಾಲೆಗಳನ್ನು ತೆರೆದು ಮೇವು ಖರೀದಿಸಿ ದನಕರುಗಳನ್ನು ರಕ್ಷಿಸಿದ್ದೆವು. ಈಗಲೂ ಸಗ ಮೇವಿನ ಬೀಜದ ಕಿಟ್‌ಗಳನ್ನು ಕೊಟ್ಟು ರೈತರ ಬದುಕಿಗೆ ನೆರವಾಗಿದ್ದು, ಪ್ರಸ್ತುತ ಬರಗಾಲ ಎದುರಾಗಿರುವ ಹಿನ್ನಲೆಯಲ್ಲಿ ಜನ ಜಾನುವಾರುಗಳಿಗೆ ಏನೇನೂ ಸೌಲಭ್ಯ ಬೇಕೋ ಅದೆಲ್ಲವನ್ನು ಮುನ್ನಚ್ಚರಿಕೆ ಕ್ರಮವಾಗಿ ಕೈಗೊಂಡಿದ್ದೇವೆ. ರಾಸುಗಳಿಗೆ ಮೇವು ಮತ್ತು ಜನರಿಗೆ ಕುಡಿವ ನೀರು ಪೂರೈಸಲು ತಾಲೂಕಿನಲ್ಲಿ ಈಗಾಗಲೇ ಸಣ್ಣ ಮತ್ತು ದೊಡ್ಡ ಚೆಕ್ ಡ್ಯಾಂ ಹಾಗೂ ಕಾಲುವೆಗಳನ್ನು ನಿರ್ಮಿಸಿದ್ದು, ಇದರಿಂದ ಅಂತರ್ಜಲ ವೃದ್ಧಿಸಿದೆ. ಈಗ 500 ಅಡಿ ಬೋರ್ ಕೊರೆದರೆ ಸಾಕು ಗುಣಮಟ್ಟದ ಕುಡಿವ ನೀರು ಲಭ್ಯವಾಗುತ್ತಿದೆ. ಹಾಗಾಗಿ ನಮ್ಮ ತಾಲೂಕಿನಲ್ಲಿ ಕುಡಿವ ನೀರಿಗೆ ಯಾವುದೇ ತೊಂದರೆ ಇಲ್ಲ. ಹಳ್ಳಿಗಳಲ್ಲಿ ರೈತರು , ಕೂಲಿ ಕಾರ್ಮಿಕರು ನಮ್ಮದಿಯಿಂದ ಜೀವನ ಸಾಗಿಸಲು ಅಧಿಕಾರಿಗಳು ಎಲ್ಲ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ಬದ್ಧವಾಗಿದ್ದು, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ವಿತರಿಸಲು ಈಗಾಗಲೇ ಡಿಸಿಎಂ ಡಾ.ಜಿ.ಪರಮೇಶ್ವರ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕುಡಿವ ನೀರಿಗೆ ಯಾರಿಗೂ ತೊಂದರೆ ಆಗದಂತೆ ಮತ್ತು ಅಧಿಕಾರಿಗಳು ಬಿವಿಜಿ ರಾಮ್ಎ ಜಿ ಯೋಜನೆಯಡಿ ಉದ್ಯೋಗ ಸೃಷ್ಠಿಸಿ ಉದ್ಯೋಗ ದೊರಕಿಸಿ ಕೊಡುವ ಮೂಲಕ ಜನರು ಗುಳೇ ಹೋಗುವುದನ್ನು ತಡೆಗಟ್ಟಬೇಕೆಂದು ಕಟ್ಟಪ್ಪಣೆ ಮಾಡಿ ಹೋಗಿದ್ದಾರೆ. ರೈತರು ಇದರ ಪ್ರಯೋಜನ ಪಡೆದು ತಮ್ಮ ಜೀವನ ಮಟ್ಟ ಸುಧಾರಣೆಗೆ ಮುಂದಾಗಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.ಬರ ಪರಿಹಾರ ಯೋಜನೆಯ ಭಾಗವಾಗಿ ರೈತರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಗುಣ ಮಟ್ಟದ ಮೇವಿನ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ತಮ್ಮ ಬಳಿ ಇರುವ ಕನಿಷ್ಠ ನೀರಾವರಿ ಸೌಲಭ್ಯ ಬಳಸಿಕೊಂಡು ಸ್ವತ ತಾವೇ ಮೇವು ಬೆಳೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ಹೊರಗಿನಿಂದ ಹೆಚ್ಚು ಬೆಲೆ ಕೊಟ್ಟು ಮೇವು ಖರೀದಿಸುವ ಅನಿರ್ವಾಯತೆ ತಪ್ಪಿ ರೈತರಿಗೆ ಆರ್ಥಿಕ ನೆರವಾಗುತ್ತದೆ. ರೈತರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಡಿ ಎಂದು ರಾಜಣ್ಣ ಸಲಹೆ ನೀಡಿದರು.