ಲಘು ಭೂಕಂಪನದಿಂದ ಆತಂಕ ಬೇಡ: ಭೂ ವಿಜ್ಞಾನಿ ಕೆ.ಚಂದ್ರಶೇಖರ

KannadaprabhaNewsNetwork |  
Published : Oct 02, 2026, 02:45 AM IST
1ಬಿಎಸ್ವಿ01-ಬಸವನಬಾಗೇವಾಡಿ ಪುರಸಭೆಯ ಮಜರೆ ಗ್ರಾಮ ಬಸವನಹಟ್ಟಿ ಗ್ರಾಮದ ದೇವಸ್ಥಾನದಲ್ಲಿ ಗುರುವಾರ ಭೂಕಂಪ ಕುರಿತು ಹಿರಿಯ ಭೂವಿಜ್ಞಾನಿ ಕೆ. ಚಂದ್ರಶೇಖರ ಅವರು ಜನರಿಗೆ ಭೂಕಂಪ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ವಿಜಯಪುರ ಜಿಲ್ಲೆ ಭೂಕಂಪನದ ಮೂರನೇ ವಲಯದಲ್ಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅವಘಡ ಸಂಭವಿಸುವ ಭೂಕಂಪನವಾಗುವುದು ವಿರಳ. ಬಸವನಬಾಗೇವಾಡಿ ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಸಲ ಸಂಭವಿಸಿದ ಲಘು ಭೂಕಂಪ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರದ ಗಣಿ, ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ.ಚಂದ್ರಶೇಖರ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಿಜಯಪುರ ಜಿಲ್ಲೆ ಭೂಕಂಪನದ ಮೂರನೇ ವಲಯದಲ್ಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅವಘಡ ಸಂಭವಿಸುವ ಭೂಕಂಪನವಾಗುವುದು ವಿರಳ. ಬಸವನಬಾಗೇವಾಡಿ ತಾಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಸಲ ಸಂಭವಿಸಿದ ಲಘು ಭೂಕಂಪ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜಯಪುರದ ಗಣಿ, ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ.ಚಂದ್ರಶೇಖರ ಹೇಳಿದರು.

ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಹಾಗೂ ಪುರಸಭೆಯ ಮಜರೆ ಗ್ರಾಮ ಬಸವನಹಟ್ಟಿ ಗ್ರಾಮದ ದೇವಸ್ಥಾನದಲ್ಲಿ ಗುರುವಾರ ಭೂಕಂಪ ಕುರಿತು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ 2022ರಲ್ಲಿ ಜಿಲ್ಲೆಯ ತಿಕೋಟಾ, ಸೋಮದೇವರಹಟ್ಟಿ, ಕನಮಡಿ, ಬಾಬಾನಗರ ಸೇರಿ ಈ ಭಾಗದಲ್ಲಿನ ಭೂಕಂಪನ ಕುರಿತು ಬೆಂಗಳೂರಿನ ಭೂವಿಜ್ಞಾನಿಗಳು ಪರಿಶೀಲಿಸಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸುವ ಪ್ರಮಾಣ ತೀರ ಕಡಿಮೆಯಾಗಿದೆ. ಇಲ್ಲಿಯ ಜನರು ಯಾವುದೇ ರೀತಿಯಲ್ಲಿ ಆತಂಕ ಪಡಬಾರದು. ಇದುವರೆಗೂ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿಲ್ಲ. ಲಘು ಭೂಕಂಪಕ್ಕೆ ಹಳೆಯ ಮಡ್ಡಿಮನೆಗಳು ಅದರಬಹುದು. ಹೊಸ ಮನೆಗಳಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಜಿಲ್ಲೆಯಲ್ಲಿ 2010 ರಿಂದ ವಿವಿಧೆಡೆ ಇಲ್ಲಿವರೆಗೂ ಸುಮಾರು 100 ಸಲ ಲಘು ಭೂಕಂಪನ ಸಂಭವಿಸಿದೆ ಎಂದು ಹೇಳಿದರು.

ಹಿರಿಯ ಭೂ ವಿಜ್ಞಾನಿ ಮಹೇಶ ಬಿರಾಜನ್ನವರ ಮಾತನಾಡಿ, ಜಿಲ್ಲೆಯು ಭೌಗೋಳಿಕವಾಗಿ ವಿವಿಧ ಭೂಸಾಂಧ್ರತೆಯನ್ನು ಮತ್ತು ಜಲಸಾಂಧ್ರತೆ ಒಳಗೊಂಡಿದೆ. ಭೂಮಿಯ ಭೂಗರ್ಭದಲ್ಲಿರುವ ಜ್ವಾಲಾಮುಖಿ ಸಂಘರ್ಷಕ್ಕೆ ಸರಾಗವಾಗಿ ಜಾಗಮಾಡಿ ಕೊಡುವ ಭೂ ಸಡಿಲಿಕೆ ಇಲ್ಲಿ ಕಂಡುಬರುವುದು. ಬಸವನಬಾಗೇವಾಡಿಯ ತಾಲೂಕು ವ್ಯಾಪ್ತಿಯ ಭೂಭಾಗದಲ್ಲಿ 600 ರಿಂದ 800 ಅಡಿವರೆಗಿನ ಕರಿಕಲ್ಲಿನ ಪದರದೊಳಗೆ ಸುಣ್ಣದ ಕಲ್ಲಿನ ಪದರು ಇದೆ. ಈ ಸುಣ್ಣದ ಕಲ್ಲಿನ ಪದರದಲ್ಲಿ ಮಳೆ ನೀರು ಇಳಿದಾಗ ಅದು ಭೂಗರ್ಭದಲ್ಲಿ ತೀವ್ರ ಉಷ್ಣಗೊಂಡು ಘರ್ಷಣೆಯಾಗುತ್ತದೆ. ಇದರಿಂದಾಗಿ ಭೂಮಿಯ ಮೇಲ್ಗಡೆ ಲಘು ಭೂಕಂಪನ ಉಂಟಾಗುತ್ತದೆ. ಆಗ ಭೂಮಿಯಿಂದ ಶಬ್ಧ ಕೇಳಿ ಬರುತ್ತದೆ. 3-4 ಸೆಕೆಂಡುಗಳ ಕಾಲ ಮಾತ್ರ ಭೂಮಿ ಅಲುಗಾಡಿದ ಅನುಭವವಾಗುತ್ತದೆ. ಒಂದು ವೇಳೆ ಜನರು ಭಯಗೊಂಡರೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಚ ಇಲ್ಲವೇ ಟೇಬಲ್ ಕೆಳಗೆ ಹೋಗಿ ಕುಳಿತುಕೊಳ್ಳಬಹುದು. ಇಲ್ಲವೇ ಮನೆಯ ಹೊರಗಡೆ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ನಮ್ಮ ಮೇಲೆ ಯಾವುದೇ ವಸ್ತು ಬಿದ್ದರೂ ನಮಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಮುಂದೆ ಯಾವುದೇ ಅನಾಹುತ ಸಂಭವಿಸಿದರೆ ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ವಿಜ್ಞಾನಿಗಳು ಜನರಿಗೆ ಭೂಕಂಪನದಿಂದ ಆದ ಅನುಭವ ಕುರಿತು ಮಾಹಿತಿ ಪಡೆದುಕೊಂಡರು. ಕೆಲವರು ಭೂಕಂಪದ ಬಗ್ಗೆ ತಮ್ಮ ಭಯ ವ್ಯಕ್ತಪಡಿಸಿ ತಮಗೆ ಉಂಟಾದ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಕಂದಾಯ ನಿರೀಕ್ಷಕ ಸಂತೋಷ ದೇಸಾಯಿ, ಗ್ರಾಮಾಡಳಿತಾಧಿಕಾರಿ ಸಿದ್ದು ಶಿರಶ್ಯಾಡ, ಗ್ರಾಮ ಸಹಾಯಕರಾದ ಅಲ್ಲಾಭಕ್ಷ ಕೊರಬು, ಸತೀಶ ವಾಲೀಕಾರ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಶಿವಾನಂದ ಡೋಣೂರ, ಬಸವರಾಜ ತುಂಬಗಿ, ನಿಂಗಪ್ಪ ಗುಂಡಳ್ಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋಮವಾರಪೇಟೆ: ಸಾರ್ವಜನಿಕರ ಕುಂದುಕೊರತೆ ಜನಸಂಪರ್ಕ ಸಭೆ
ಕೆಎಸ್‌ಆರ್‌ಟಿಸಿ: 11ರಿಂದ ದಸರಾ ಪ್ರಯುಕ್ತ ವಿಶೇಷ ಪ್ಯಾಕೇಜ್‌ ಪ್ರವಾಸ