ಕಚೇರಿಗಳಿಗೆ ಅಲೆದಾಟ ಬೇಡ, ಪ್ರಜಾಸೇವೆಯಲ್ಲಿ ಸಮಸ್ಯೆ ಹೇಳಿಕೊಳ್ಳಿ: ಅಶೋಕ ಶಿಗ್ಗಾಂವಿ

KannadaprabhaNewsNetwork |  
Published : Nov 29, 2026, 02:30 AM IST
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಮೌನೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಕಾರ್ಯಕ್ರಮವನ್ನು ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಮೌನೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪ್ರಜಾಸೇವಾ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರಿಂದ 61 ಅರ್ಜಿಗಳು ಸಲ್ಲಿಕೆಯಾದವು.

ಕುಷ್ಟಗಿ: ಸಾರ್ವಜನಿಕರು ತಮ್ಮ ಕುಂದುಕೊರತೆ ಹಾಗೂ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಪ್ರಜಾಸೇವಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಮೌನೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಬದಲು, ಈ ಕಾರ್ಯಕ್ರಮದ ಮೂಲಕ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಅಹವಾಲು ಸಲ್ಲಿಸಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್ ವಿತರಿಸಲಾಯಿತು. ಕಂದಾಯ ಇಲಾಖೆಯಿಂದ ವಿವಿಧ ಸಾಮಾಜಿಕ ಭದ್ರತಾ ಮಾಸಾಶನಗಳ ಪ್ರಮಾಣಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.

ಗ್ರೇಡ್-2‌ ತಹಸೀಲ್ದಾರ್‌ ರಜನಿಕಾಂತ ಕೆಂಗಾರಿ, ಡಾ. ಆನಂದ ಗೋಟೂರ, ಕೆಂಚಪ್ಪ ಬಾವಿಮನಿ, ನಾಗರಾಜ ಕಾತರಕಿ, ಬಸವರಾಜ ನೆಲಗಣಿ, ಯಲ್ಲಮ್ಮ ಹಂಡಿ ಇದ್ದರು.

61 ಅರ್ಜಿ ಸಲ್ಲಿಕೆ: ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ 27, ಆಹಾರ ಇಲಾಖೆ 2, ಜೆಸ್ಕಾಂ 5, ತಾಪಂ 3, ಸಣ್ಣ ನೀರಾವರಿ ಇಲಾಖೆ 1, ಪಪಂ 11, ಆರೋಗ್ಯ ಇಲಾಖೆ 3, ಜಿಪಂ 3, ಕೆಎಸ್ಸಾರ್ಟಿಸಿ 3, ಸಿಡಿಪಿಒ ಕಚೇರಿ 1, ಬಿಸಿಎಂ ಕಚೇರಿ 1 ಹಾಗೂ ಅರಣ್ಯ ಇಲಾಖೆಗೆ 1 ಅರ್ಜಿ ಸಲ್ಲಿಕೆಯಾದವು.

ರೈತ ಮುಖಂಡ ವೀರಭದ್ರಪ್ಪ ನಾಲತ್ವಾಡ ಮಾತನಾಡಿ, ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದು, ಕೊಳವೆಬಾವಿಗಳ ಮೂಲಕ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಒಂದು ವಾರದೊಳಗೆ ರೈತರು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಿ
ಕಣ್ಣು ಕತ್ತಲಾದರೂ ಅಕ್ಷರಗಳ ಬೆಳಕು ಆರಲಿಲ್ಲ!