ವಸತಿ ನಿಲಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಸಿಇಒ ಬಾಲೆ

KannadaprabhaNewsNetwork |  
Published : Oct 25, 2026, 03:00 AM IST
(ಫೋಟೊಬಿಕೆಟಿ1, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ  ಅವರು ಜಿಲ್ಲಾ ಪಂಚಾಯತ್ನ ನೂತನ ಸಭಾಭವನದಲ್ಲಿ ವಿವಿಧ ಇಲಾಖೆಗಳ ನಿಲಯ ಪಾಲಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. | Kannada Prabha

ಸಾರಾಂಶ

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಅವರು ಜಿಲ್ಲಾ ಪಂಚಾಯತ್ನ ನೂತನ ಸಭಾಭವನದಲ್ಲಿ ವಿವಿಧ ಇಲಾಖೆಗಳ ನಿಲಯ ಪಾಲಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಪಂ ಸಿಇಒ ಗಜಾನನ ಬಾಲೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಸತಿ ನಿಲಯಗಳಲ್ಲಿರುವ ಮಕ್ಕಳ ಸುರಕ್ಷತೆ, ಶೈಕ್ಷಣಿಕ ಪ್ರಗತಿ ಹಾಗೂ ಆರೋಗ್ಯದ ಕುರಿತು ನಿಲಯ ಪಾಲಕರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನಿಲಯ ಪಾಲಕರ ನಿರ್ಲಕ್ಷ್ಯದಿಂದ ಮೇಲಧಿಕಾರಿಗಳಿಗೆ ಕೆಟ್ಟ ಹೆಸರು ಬರುವಂತಾಗಬಾರದು ಎಂದು ಜಿಪಂ ಸಿಇಒ ಗಜಾನನ ಬಾಲೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ನೂತನ ಸಭಾಭವನದಲ್ಲಿ ವಿವಿಧ ಇಲಾಖೆಗಳ ನಿಲಯ ಪಾಲಕರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಲಯ ಪಾಲಕರು ನಿಯಮಿತವಾಗಿ ವಸತಿ ನಿಲಯಗಳಲ್ಲಿ ಹಾಜರಿದ್ದು, ಮಕ್ಕಳ ಸುರಕ್ಷತೆ ಹಾಗೂ ಅವರ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಗುಣಮಟ್ಟದ ಆಹಾರ ಒದಗಿಸುವುದರ ಜೊತೆಗೆ ವಸತಿ ನಿಲಯದ ಸ್ವಚ್ಛತೆಗೆ ಒತ್ತು ನೀಡಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಿಲಯ ಪಾಲಕರ ನಡುವೆ ಸಮನ್ವಯದ ಕೊರತೆ ಕಂಡುಬರಬಾರದು ಎಂದು ತಿಳಿಸಿದರು.

ವಸತಿ ನಿಲಯದ ಮಕ್ಕಳಿಗಾಗಿ ಆರಂಭಿಸಲಾಗಿರುವ ವಿಷನ್ 90+ ಆನ್ಲೈನ್ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಬೇರೆ ಕಡೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಬಂದು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಸಂಜೆ ತರಬೇತಿ ಅವಧಿಯಲ್ಲಿ ಕೆಲವು ನಿಲಯಗಳಲ್ಲಿ ವಾರ್ಡನ್‌ಗಳು ಹಾಜರಿರದ ಕಾರಣ ವಿನಾಕಾರಣ ಗದ್ದಲ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ತರಬೇತಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ತರಬೇತಿ ಅವಧಿಯಲ್ಲಿ ಗೈರು ಹಾಜರಾಗುವ ವಾರ್ಡನ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆ ಸಿಇಒ ಸೂಚಿಸಿದರು.

ಹೆಬ್ಬಳ್ಳಿ, ಚಿಮ್ಮಡ, ಸಾವಳಗಿ, ಜಗದಾಳ, ರಬಕವಿ, ಮೆಟಗುಡ್ಡ, ದಾದನಟ್ಟಿ, ತುಂಗಳ ಹಾಗೂ ಜಮಖಂಡಿ ಬಾಲಕಿಯರ ವಸತಿ ನಿಲಯಗಳಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬಂದಿರುವ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವಂತೆ, ಅನುಮತಿ ಪಡೆಯದೇ ಪ್ರಗತಿ ಪರಿಶೀಲನೆ ಸಭೆಗೆ ಗೈರು ಹಾಜರಾಗಿರುವ ನಿಲಯ ಪಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ ಮಾತನಾಡಿ, ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ಇಲ್ಲದಿರುವುದು ಕಂಡುಬಂದಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ ಅವರು, ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಆಹಾರ ಧಾನ್ಯಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವ ಕೆಲಸವಾಗಬೇಕು. ಕಾಯಿಪಲ್ಲೆಗಳನ್ನು ಎಲ್ಲೆಂದರಲ್ಲಿ ಇಡಬಾರದು. ಅಡುಗೆ ಕೊಠಡಿ ಸುಚಿತ್ವವಾಗಿ ಇಟ್ಟುಕೊಂಡು ಗುಣಮಟ್ಟದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ವಾರ್ಡನ್‌ಗಳಿಂದ ನಿರ್ವಹಣೆ ಆಗಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ ಜೋಶಿ ಸೇರಿದಂತೆ ಆಯಾ ತಾಲೂಕು ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ವಸತಿ ನಿಲಯಗಳ ನಿಲಯ ಪಾಲಕರು ಉಪಸ್ಥಿತರಿದ್ದರು.

ಪ್ರತಿ ಶನಿವಾರ ಸ್ವಚ್ಛ ಶನಿವಾರ:

ವಸತಿ ನಿಲಯಗಳಲ್ಲಿ ವಾರಕ್ಕೊಮ್ಮೆ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ಆಯೋಜಿಸುವಂತೆ ಗಜಾನನ ಬಾಲೆ ಸೂಚಿಸಿದರು. ಪ್ರತಿ ಶನಿವಾರ ಕಾಳು-ಕಡಿ ಡಬ್ಬಿಗಳ ಸ್ವಚ್ಛತೆ, ಕೊಳೆತ ತರಕಾರಿ ಹಾಗೂ ಇತರೆ ತ್ಯಾಜ್ಯ ಬೇರ್ಪಡಿಸುವುದು, ಕೊಠಡಿಗಳು ಸೇರಿನಿಲಯದ ಸಂಪೂರ್ಣ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಬೇಕು. ಈ ಕಾರ್ಯದ ಬಗ್ಗೆ ಸಂಬಂಧಿಸಿದ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳಿಂದ ನಿರ್ವಹಣೆ ಆಗಬೇಕು ಎಂದು ಸಿಇಒ ಗಜಾನನ ಬಾಲೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಸಿ ಕ್ರೀಡೆಗಳ ಉತ್ತೇಜಿಸುವ ಕೆಲಸವಾಗಲಿ
ನೃತ್ಯ ಕಲೆಗಳು ನಾಡಿನ ಸಾಂಸ್ಕೃತಿಕ ಆಸ್ತಿ