ಯಲ್ಲಾಪುರ: ಸರ್ಕಾರದ ನಿರ್ಣಯ ಮತ್ತು ಇಲಾಖೆಯ ನಿರ್ದೇಶನದಂತೆ ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿಯೂ ನೂತನ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಮಂಚೀಕೇರಿಯ ವಲಯಾರಣ್ಯಾಧಿಕಾರಿ, ಕುಂದರಗಿ ಗ್ರಾಪಂ ಉಸ್ತುವಾರಿ ಅಧಿಕಾರಿ ಬಸವರಾಜ ಬೋಚಳ್ಳಿ ಹೇಳಿದರು.
ತಾಲೂಕಿನ ಮಾವಿನಕಟ್ಟಾದ ಸ್ತ್ರೀಶಕ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಇಲಾಖೆ ವಿಧಿಸಿರುವ ನಿಯಮಗಳನ್ನು ಯಾರೂ ಮೀರಲಾಗದು ಎಂದರು.ಕಂದಾಯ ಇಲಾಖೆಯ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಶರಣು ತುಂಬಗಿ ಮಾತನಾಡಿ, ಭವಿಷ್ಯದ ಅನುಕೂಲತೆಗಾಗಿ ಈಗಾಗಲೇ ಎಲ್ಲ ರೈತರ ಪಹಣಿ ಪತ್ರಿಕೆಗಳನ್ನು ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದ್ದು, ಇನ್ನೂ ಈ ಗ್ರಾಪಂ ವ್ಯಾಪ್ತಿಯ ೨೮೦ ರೈತರು ಈ ಕಾರ್ಯ ಮಾಡಿಸಿಕೊಂಡಿಲ್ಲ ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಸಹಾಯಕಿ ಉತ್ತರಿಸಿ, ಗ್ರಾಪಂ ವ್ಯಾಪ್ತಿಯಲ್ಲಿ ಈ ವರೆಗೆ ೧೨ ಫಲಾನುಭವಿಗಳಿಗೆ ಭಾಗ್ಯಲಕ್ಷೀ ಯೋಜನೆಯ ಬಾಂಡ್‌ಗಳನ್ನು ವಿತರಿಸಲಾಗಿದೆ ಎಂದರು.ಕೃಷಿ ಇಲಾಖೆಯ ಮಣಿಕಂಠ ದೇವಡಿಗ, ಅರ್ಹ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆ ವಿತರಿಸಲಾಗಿದೆ ಎಂದರು. ತೋಟಗಾರಿಕಾ ಇಲಾಖೆಯ ಸುಭಾಸ್ ಹೆಗಡೆ ಮಾತನಾಡಿ, ಅಡಕೆ ಕೊಳೆರೋಗ ನಿವಾರಣೆಗಾಗಿ ರೈತರು ತಜ್ಞರ ಸಲಹೆ ಮತ್ತು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಅಡಕೆಯೊಂದಿಗೆ ಪರ್ಯಾಯ ಬೆಳೆಯ ಬಗೆಗೂ ರೈತರು ಗಂಭೀರ ಗಮನ ಹರಿಸಬೇಕು ಎಂದರು.
ಕುಂದರಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಮ್ಯಶ್ರೀ ಬಿ. ಮಾತನಾಡಿ, ಪ್ರತಿಯೊರ್ವರೂ ತಮ್ಮ ಮನೆಯ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆ ಕಾದುಕೊಳ್ಳಬೇಕು. ನೀರು ನಿಂತು ಲಾರ್ವಾ ಉತ್ಪನ್ನವಾಗದಂತೆ ಎಚ್ಚರಿಕೆ ವಹಿಸಿ, ಇಲಿಜ್ವರ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ಅಲಕ್ಷಿಸಬಾರದು ಎಂದರು.ಮಾವಿನಕಟ್ಟಾ ಸೇರಿದಂತೆ ಗ್ರಾಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಲಜೀವನ ಮಿಷನ್ ಯೋಜನೆಯಡಿ ಆರಂಭಿಸಿದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ತೀರಾ ಕಳಪೆಯಾಗಿವೆ ಎಂದು ಅನೇಕ ಸಾರ್ವಜನಿಕರು ದೂರಿದರು. ಮಾವಿನಕಟ್ಟಾದಲ್ಲಿ ಸ್ಥಾಪಿಸಲಾದ ಎಲ್ಲ ೧೮೦ ನಲ್ಲಿ ಸಂಪರ್ಕಗಳು ಕಳಪೆಯಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶೀಘ್ರದಲ್ಲಿ ಬಳಕೆದಾರರ ಸಭೆ ಕರೆದು, ನಂತರವೇ ಈ ಕಾಮಗಾರಿಯನ್ನು ಗ್ರಾಪಂ ಹಸ್ತಾಂತರ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಭರವಸೆ ನೀಡಿದರು.
26ರಂದು ಪ್ರತಿಭಟನೆ:ಜಿಪಂ ಎಂಜಿನಿಯರಿಂಗ್ ವಿಭಾಗ, ಹೆಸ್ಕಾಂ, ಅಂಚೆ ಇಲಾಖೆ, ಶಿಕ್ಷಣ ಇಲಾಖೆ, ಆರಕ್ಷಕ ಇಲಾಖೆ, ಅರಿವು ಕೇಂದ್ರದ ಪ್ರತಿನಿಧಿಗಳು ತಮ್ಮ ಇಲಾಖೆಗಳ ಕುರಿತು ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಗ್ರಾಪಂಗೆ ಯಾವುದೇ ಅನುದಾನ ಬಾರದಿರುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡಲಾಗದೇ ಸಾರ್ವಜನಿಕರ ಪ್ರಶ್ನೆಗಳಿಗೆ ಜನಪ್ರತಿನಿಧಿಗಳು ಉತ್ತರಿಸಲು ಕಷ್ಟಸಾಧ್ಯವಾಗಿದೆ. ಕಳೆದ ೨ ವರ್ಷದಿಂದ ವಸತಿ ಯೋಜನೆಯಡಿ ಒಂದೇ ಒಂದು ಮನೆ ಮಂಜೂರಿಯೂ ದೊರೆತಿಲ್ಲ. ಈ ಎಲ್ಲ ವೈಫಲ್ಯಗಳನ್ನು ವಿರೋಧಿಸಿ, ಸೆ. ೨೬ ರಂದು ತಾಪಂ ಆವರಣದಲ್ಲಿ ಗ್ರಾಪಂ ಸದಸ್ಯರ ಒಕ್ಕೂಟವು ಪ್ರತಿಭಟನೆ ನಡೆಸಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸೌಮ್ಯಾ ನಾಯ್ಕ, ಸದಸ್ಯರಾದ ಗಣಪತಿ ಪಾಟೀಲ, ದೀಪಾ ಸಿದ್ದಿ, ಇಂದಿರಾ ನಾಯ್ಕ, ಜ್ಯೋತಿ ಹುದಾರ, ಪ್ರಕಾಶ ನಾಯ್ಕ, ಧಾಕ್ಲು ಪಾಟೀಲ, ರಾಮಕೃಷ್ಣ ಹೆಗಡೆ, ನಿರ್ಮಲಾ ನಾಯ್ಕ, ತುಂಗಾ ಚಲುವಾದಿ, ಗ್ರಾಪಂ ಕಾರ್ಯದರ್ಶಿ ಶಂಕರ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.