ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಅತೀವ ನಿರೀಕ್ಷೆ ಹುಟ್ಟುಹಾಕಿದ್ದ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿರುವ ಸಿದ್ಧರಾಮಯ್ಯ ಗದಗ ಜಿಲ್ಲೆಗೆ ಒಂದೇ ಒಂದು ರುಪಾಯಿ ನಿಗದಿ ಮಾಡಿಲ್ಲ. ಮೈಲುಗಲ್ಲಾಗುವಂತಾ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಹಾಗಾಗಿ ಜಿಲ್ಲೆಯ ಇತಿಹಾಸಿದಲ್ಲಿಯೇ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಸ್ಥಳೀಯರು ವಿಶ್ಲೇಷಿಸುತ್ತಿದ್ದಾರೆ.
ಕಳೆದ ಸಾಲಿನಲ್ಲಿ ಸಣ್ಣ ಸಣ್ಣ ಯೋಜನೆಗಳು ಎಂದು ಪರಿಗಣಿಸಿದರೂ 9 ಹೊಸ ಕೊಡುಗೆಗಳನ್ನು ಗದಗ ಜಿಲ್ಲೆಗೆ ನೀಡಿದ್ದರು. ಅವುಗಳಲ್ಲಿ ಇನ್ನೂ ಕೆಲವು ಪ್ರಾರಂಭವೇ ಆಗಿಲ್ಲ. ಆದರೆ ಈ ಬಾರಿ ಯಾವುದೇ ಯೋಜನೆಗಳನ್ನು ನೀಡದೇ ಇರುವುದು ರಾಜ್ಯ ಸರ್ಕಾರಕ್ಕೆ ಗದಗ ಮೇಲೆ ಅದೇಕೆ ಇಷ್ಟೊಂದು ಬೇಸರ ಎನ್ನುವ ಬೇಸರದ ಭಾವನೆ ಮೂಡುತ್ತಿದೆ.ಘೋಷಣೆ ಮಾಡಿದ್ದೇನು?: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಮೂರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಡಂಬಳದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ತಜ್ಞರಿಂದ ಕಾರ್ಯಸಾಧು ವರದಿ, ಲಕ್ಕುಂಡಿ ದೇವಸ್ಥಾನಗಳನ್ನು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೆ ಕ್ರಮ, ಲಕ್ಕುಂಡಿಯಲ್ಲಿ ಲಭ್ಯವಾಗಿರುವ ಪ್ರಾಚ್ಯಾವಶೇಷಗಳ ವೀಕ್ಷಣೆಗಾಗಿ ಬಯಲು ವಸ್ತು ಸಂಗ್ರಹಾಲಯದ ಸ್ಥಾಪನೆ ಎಂದಷ್ಟೇ ಉಲ್ಲೇಖಿಸಿದ್ದಾರೆ. ಇದಕ್ಕೆ ಯಾವುದೇ ಅನುದಾನ ನಿಗದಿ ಮಾಡಿಲ್ಲ, ಇದನ್ನು ಹೊರತು ಪಡಿಸಿ ಇನ್ನುಳಿದ ಯೋಜನೆಗಳು ಈ ಬಾರಿ ಗದಗ ಜಿಲ್ಲೆಗೆ ದೊರೆತಿಲ್ಲ.
ಗದಗ ಜಿಲ್ಲೆಯಾಗಿ ರೂಪುಗೊಂಡು 3 ದಶಕಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಿಗಳು ಅಧಿಕಾರ ನಡೆಸುತ್ತಿರಲಿ, ಒಂದಿಲ್ಲೊಂದು ಹೊಸ ಯೋಜನೆಗಳು ಪ್ರತಿ ವರ್ಷದ ಬಜೆಟ್ ನಲ್ಲಿಯೂ ಘೋಷಣೆಯಾಗುತ್ತಲೇ ಬಂದಿದ್ದವು. ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ರುಪಾಯಿ ಅನುದಾನ ನಿಗದಿಯಾಗದ ಬಜೆಟ್ ಎಂದು ದಾಖಲೆಯಾಯಿತು.ನಿರೀಕ್ಷೆಗಳೇನಿದ್ದವು?: ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆ, ಹೇರಳವಾದ ನೇಕಾರಿಕೆಯ ನೈಪುಣ್ಯತೆ ಸಂಪನ್ಮೂಲ ಹೊಂದಿದ್ದರೂ ಬೃಹತ್ ಗಾರ್ಮೆಂಟ್ಸ್ ಸ್ಥಾಪನೆಯಾಗಿಲ್ಲ. ಕಳಸಾ ಬಂಡೂರಿ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಗದಗ ಬೆಟಗೇರಿ ಅವಳಿ ನಗರದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಂಡಿಲ್ಲ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಹೆಸರುಕಾಳು, ಮೆಣಸಿನಕಾಯಿ ಮೌಲ್ಯ ವರ್ಧನೆಗೆ ವಿಶೇಷ ಯೋಜನೆಗಳ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆಗಳಲ್ಲಿ ಜಿಲ್ಲೆಯ ಜನರಿದ್ದರು. ಆದರೆ ಅದ್ಯಾವುದು ಸಾಕಾರಗೊಂಡಿಲ್ಲ.