ಯಾರಿಂದಲೂ ಕಾಂಗ್ರೆಸ್‌ ನಿರ್ನಾಮ ಮಾಡಲು ಸಾಧ್ಯವಿಲ್ಲ: ಸಂಸದ ಸುನಿಲ್ ಬೋಸ್‌

KannadaprabhaNewsNetwork |  
Published : Jul 11, 2024, 01:33 AM IST
ಯಾರಿಂದಲೂ ಕಾಂಗ್ರೆಸ್‌ ನಿರ್ನಾಮ ಮಾಡಲು ಸಾಧ್ಯವಿಲ್ಲ - ಸುನಿಲ್ ಬೋಸ್‌- ಲೀಡ್‌ ಪ್ಯಾಕೇಜ್‌  | Kannada Prabha

ಸಾರಾಂಶ

ಕಾಂಗ್ರೆಸ್‌ ಪಕ್ಕಾ ನಿರ್ನಾಮವಾಗುತ್ತದೆ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದು, ಯಾರಿಂದಲೂ ಕಾಂಗ್ರೆಸ್‌ ಪಕ್ಷ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಸುನಿಲ್ ಬೋಸ್‌ ತಿಳಿಸಿದರು. ಚಾಮರಾಜನಗರದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಂಗ್ರೆಸ್‌ ಪಕ್ಕಾ ನಿರ್ನಾಮವಾಗುತ್ತದೆ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದು, ಯಾರಿಂದಲೂ ಕಾಂಗ್ರೆಸ್‌ ಪಕ್ಷ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಸುನಿಲ್ ಬೋಸ್‌ ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ನಮ್ಮ ಪಕ್ಷದ ನಾಯಕರು ಮೊದಲ ಅಧಿವೇಶನದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಈಗ ನಾವು ಪ್ರಭಲವಾಗಿದ್ದೇವೆ ಎಂದರು. ನಾನು ಸ್ಪರ್ಧೆಗೆ ಇಳಿದಾಗ ತುಂಬಾ ಅಪಪ್ರಚಾರ ಕೇಳಿ ಬಂತು. ಆದರೆ, ನಮ್ಮ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಅವರೇ ಚುನಾವಣೆಗೆ ನಿಂತಿರುವ ರೀತಿ ಕೆಲಸ ಮಾಡಿದ್ದರಿಂದ ನನಗೆ ಐತಿಹಾಸಿಕ ಗೆಲುವು ಸಿಕ್ಕಿದೆ, ಎಲ್ಲರಿಗೂ ಕೂಡ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಕೈ ಮುಗಿದರು. ಒಂದನೇ ತರಗತಿಗೆ ಅಡ್ಮಿಷನ್: ಐತಿಹಾಸಿಕ ಗೆಲುವು ನನಗೆ ಹೊಸ ಜವಾಬ್ದಾರಿ ಕೊಟ್ಟಿದೆ. ಎಲ್ಲರ ವಿಶ್ವಾಸದಿಂದ ಉತ್ತಮ ಕೆಲಸ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಸಂವಿಧಾನ ವಿರೋಧಿ ಬಿಜೆಪಿಗೆ ಈ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ನಾನು ಟಿಕೆಟ್ ಕೇಳಿದ ಬಳಿಕ, ನಾಮಪತ್ರ ಸಲ್ಲಿಕೆಗೆ ಬಂದಾಗ ಅಪಪ್ರಚಾರ ಮಾಡಿದರು. ಒಂದು ತಿಂಗಳಾದರೂ ಬಂದಿಲ್ಲ ಅಂತಾ ಅಪಪ್ರಚಾರ ಮಾಡಿದ್ದು ಇದಕ್ಕೆಲ್ಲಾ ನನ್ನ ಕೆಲಸದ ಮೂಲಕ ಉತ್ತರ ನೀಡುವೆ ಎಂದರು. ನನ್ನ ಕ್ಷೇತ್ರದ ಜನರು ಈಗ ಒಂದನೇ ತರಗತಿಗೆ ಅಡ್ಮಿಷನ್ ಕೊಟ್ಟಿದ್ದಾರೆ. ಒಂದು ವರ್ಷದವರೆಗೂ ಕೂಡ ಅವಕಾಶ ಮಾಡಿಕೊಡಿ. ನನ್ನ ರಿಪೋರ್ಟ್ ಕಾರ್ಡ್ ಕೊಡ್ತೀನಿ, ನಂತರ ನನ್ನ ಬಗ್ಗೆ ಅಪಪ್ರಚಾರ ಮಾಡಿ ಅಂತಾ ಸವಾಲ್ ಹಾಕಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಈ ಭಾಗದ ಜನರು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಅಧಿಕಾರಕ್ಕೆ ಬಂದರೆ ನಮ್ಮ ಭಾಗದ ಅಭಿವೃದ್ಧಿಯಾಗುತ್ತದೆ ಎಂದು ನಂಬಿಕೆ ಇಟ್ಟಿದ್ದಾರೆ. ಅದ್ದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ನನ್ನ ಪುತ್ರ, ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಸುನಿಲ್‌ ಬೋಸ್‌ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಚಾಮರಾನಗರ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲ ಒಟ್ಟಾಗಿ ಸೇರಿ ಅಭಿವೃದ್ಧಿ ಮಾಡುತ್ತೇವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಮುದಾಯ ಭವನಗಳು ಮತ್ತು ವಿದ್ಯಾರ್ಥಿ ನಿಲಯಗಳ ಅಭಿವೃದ್ದಿಗೆ 300 ಕೋಟಿ ರು.ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

ನನಗೆ ಎಚ್ಚರಿಕೆ ನೀಡಿದ್ದಾರೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ಗೆ ಹೆಚ್ಚಿನ ಲೀಡ್‌ ಸಿಕ್ಕಿದೆ. ಹನೂರಿನಲ್ಲಿ ನರೇಂದ್ರ ಸೋಲು ಅನುಭವಿಸಿದ್ದರೂ ಹೆಚ್ಚಿನ ಲೀಡ್‌ ಕೊಡಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಕಡಮೆ ಲೀಡ್‌ ಸಿಗುತ್ತಿತ್ತು ಈ ಬಾರಿ ಶಾಸಕ ಪುಟ್ಟರಂಗಶೆಟ್ಟಿ ಅನಾರೋಗ್ಯದ ನಡುವೆಯೂ ಹೆಚ್ಚಿನ ಲೀಡ್‌ ಕೊಡಿಸಿದ್ದಾರೆ. ಕೊಳ್ಳೇಗಾಲದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್‌ ಪ್ರಸಾದ್, ವರುಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್‌.ಡಿ. ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್‌ ಅವರು ಹೆಚ್ಚಿನ ಲೀಡ್ ಕೊಡಿಸಿದರು. ಆದರೆ, ಟಿ. ನರಸೀಪುರ ಕ್ಷೇತ್ರದಲ್ಲೇ ಅತಿ ಕಡಮೆ ಲೀಡ್‌ ಸಿಕ್ಕಿದೆ. ಇದರ ಮೂಲಕ ಮತದಾರರು ನನಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''