ಜೀವದ ಹಂಗು ತೊರೆದು ನೀಡುತ್ತಿರುವುದು ಅವಿಸ್ಮರಣೀಯ: ಮಧು ಬಂಗಾರಪ್ಪ

KannadaprabhaNewsNetwork | Published : Jul 11, 2024 1:33 AM

ಸಾರಾಂಶ

ಶಾಸಕ ಬಸವರಾಜ ರಾಯರಡ್ಡಿಯವರು ಕ್ಷೇತ್ರಕ್ಕೆ ಏನು ಬೇಕು ಎಲ್ಲವನ್ನು ಮಂಜೂರು ಮಾಡಿಸಿ ಈ ತಾಲೂಕನ್ನು ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಿದ್ದಾರೆ.

ನೂತನ ಅಗ್ನಿಶಾಮಕ ಠಾಣಾ ಕಟ್ಟಡ ಉದ್ಘಾಟಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಯಾವುದೇ ಬೆಂಕಿ ಅವಘಡ, ನೆರೆ ಹಾವಳಿ, ಗ್ಯಾಸ್ ಸಿಲೆಂಡರ್ ಸ್ಪೋಟ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ತಮ್ಮ ಜೀವದ ಹಂಗನ್ನು ತೊರೆದು ಸೇವೆ ನೀಡುತ್ತಿರುವುದು ಅವಿಸ್ಮರಣೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಪಟ್ಟಣದಲ್ಲಿ ಬುಧವಾರ ನೂತನ ಅಗ್ನಿಶಾಮಕ ಠಾಣಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಷ್ಟದಲ್ಲಿ ಸಿಲುಕಿಕೊಂಡಾಗ ಮಾತ್ರ ಅಗ್ನಿಶಾಮಕದಳದ ಸೇವೆ ನೆನೆಪಿಸಿಕೊಳ್ಳುತ್ತೇವೆ. ಇವರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸುವ ಮೂಲಕ ಗೌರವದಿಂದ ಕಾಣಬೇಕು ಎಂದರು.

ಎರಡು ಅಗ್ನಿಶಾಮಕ ಠಾಣೆಗಳನ್ನು ಯಲಬುರ್ಗಾ ವಿಧಾನಸಭಾ ಕ್ಷೇತ್ರ ಹೊಂದಿರುವುದು ಒಳ್ಳೆಯ ಬೆಳವಣಿಗೆ. ಶಾಸಕ ಬಸವರಾಜ ರಾಯರಡ್ಡಿಯವರು ಕ್ಷೇತ್ರಕ್ಕೆ ಏನು ಬೇಕು ಎಲ್ಲವನ್ನು ಮಂಜೂರು ಮಾಡಿಸಿ ಈ ತಾಲೂಕನ್ನು ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಭೆ ಅಧ್ಯಕ್ಷ ವಹಿಸಿ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಈ ಅಗ್ನಿಶಾಮಕ ಠಾಣಾ ಆವರಣ ಹಿಂಭಾಗದಲ್ಲಿ ಸಿಬ್ಬಂದಿ ವಾಸವಿರಲು ಅಗತ್ಯ ವಸತಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಅಗ್ನಿಶಾಮಕ ಇಲಾಖೆ ಅಧಿಕಾರಿಗಳಾದ ಎಸ್.ವ್ಹಿ. ಲೋಕೇಶ, ಕೆ. ತಿಮ್ಮಾರಡ್ಡಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಉಪವಿಭಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಎ.ಜಿ. ಭಾವಿಮನಿ, ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ ಮತ್ತಿತರರು ಇದ್ದರು.

Share this article