ಕನ್ನಡಪ್ರಭ ವಾರ್ತೆ ಕೋಲಾರಅಪೌಷ್ಟಿಕತೆ ನಿವಾರಣೆ ರಾಜ್ಯ ಸಲಹಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಇಲ್ಲಿನ ಗಾಂಧಿನಗರದ ೩ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಎಲ್ಲವೂ ಒಂದೇ ಕೊಠಡಿಯಲ್ಲಿಅಂಗನವಾಡಿಯ ಶೌಚಾಲಯ ಸಮಸ್ಯೆ ಹಾಗೂ ಆಹಾರ ಸಾಮಗ್ರಿಗಳ ಗುಣಮಟ್ಟ ಕಳಪೆಯಾಗಿರುವ ಕುರಿತು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ಗಾಂಧಿನಗರದ ಮೂರು ಅಂಗನವಾಡಿ ಕೇಂದ್ರಗಳ ಪೈಕಿ ೨ ಕೇಂದ್ರಗಳು ಸಣ್ಣ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದೇ ಕೋಣೆಯಲ್ಲಿಯೇ ಅಡುಗೆ ಮಾಡುವುದು, ಶೌಚಾಲಯ ಮತ್ತು ದಾಸ್ತಾನು ವ್ಯವಸ್ಥೆ ಒಂದೇ ಕಡೆ ಇರುವುದನ್ನು ನ್ಯಾಯಾಧೀಶರು ಗಮನಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ೧೫ ರಿಂದ ೧೮ ಮಕ್ಕಳಿದ್ದು, ಎಲ್ಲಾ ಮಕ್ಕಳಿಗೆ ಮಲಗಲು, ಆಟವಾಡಲು ಜಾಗದ ಕೊರತೆ ಇದೆ, ಸದರಿಮಕ್ಕಳಿಗೆ ಪೌಷ್ಟಿಕ ಆಹಾರವೆಂದು ನೀಡುತ್ತಿರುವ ಗೋಧಿರವೆ ಹಾಗೂ ಮಸಾಲಾ ಪುಡಿ ಗುಣಮಟ್ಟ ಚೆನ್ನಾಗಿಲ್ಲ ಮತ್ತು ಮಕ್ಕಳು ಅದನ್ನು ಇಷ್ಟಪಡುತ್ತಿಲ್ಲ ಎಂಬುದನ್ನು ನ್ಯಾಯಾಧೀಶರು ಗಮನಿಸಿದರು.ಪ್ರತ್ಯೇಕ ಶೌಚಾಲಯ ಇಲ್ಲಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಕ್ಯಾನುಗಳಲ್ಲಿ ಶಿಕ್ಷಕರೇ ಖರೀದಿಸಿ ತರುತ್ತಿರುವುದಾಗಿ ತಿಳಿಸಿದರು. ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲೂ ಒಂದೇ ಶೌಚಾಲಯವಿದ್ದು, ಹೆಣ್ಣುಮಕ್ಕಳಿಗೂ,ಗಂಡು ಮಕ್ಕಳಿಗೂ ಪ್ರತ್ಯೇಕ ಶೌಚಾಲಯ ಸೌಲಭ್ಯವಿಲ್ಲ. ಜತೆಗೆ ವಿದ್ಯುತ್ ಮತ್ತು ಫ್ಯಾನ್ ಸೌಲಭ್ಯವಿದ್ದರೂ ಕೆಲವೊಂದು ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಡಿಡಿಯವರು ನೀಡಿದ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು ೨೧೮೦ ಅಂಗನವಾಡಿ ಕೇಂದ್ರಗಳಿದ್ದು, ೧೮೩೪ ಗ್ರಾಮೀಣ ಪ್ರದೇಶದಲ್ಲಿ, ೩೪೬ ನಗರ ಪ್ರದೇಶದಲ್ಲಿವೆ, ಕೇವಲ ೪೩೬ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ, ಉಳಿದವು ಪಂಚಾಯತ್, ಸಮುದಾಯ ಕೇಂದ್ರ, ಶಾಲಾ ಆವರಣದ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿಜಾಗದ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಪೌಷ್ಟಿಕ ಆಹಾರ ಸರಿಯಿಲ್ಲ, ಶೌಚಾಲಯಕ್ಕೆ ನೀರಿನ ಸಮಸ್ಯೆ ಕೆಲವು ಕೇಂದ್ರಗಳಿಗೆ ಕಾಂಪೌಂಡ್ ಇಲ್ಲ ಸ್ವಚ್ಛತೆಯೂ ಇಲ್ಲ, ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಇಂತಹ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಪಂ ಅಗತ್ಯ ಕ್ರಮ ಕೈಗೊಂಡು ವಿಶಾಲವಾದ ಕಟ್ಟಡ, ಮೂಲಭೂತ ಸೌಲಭ್ಯ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.