ಭಾರತವನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

KannadaprabhaNewsNetwork |  
Published : Dec 25, 2024, 12:46 AM IST
ಶ್ರೀ ಸಿದ್ದಲಿಂಗ ಶಿವಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುತ್ತೀರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ದಂಪತಿಗಳು | Kannada Prabha

ಸಾರಾಂಶ

ಜಗದ್ಗುರುಗಳ ಮೇಲೆ, ತಾಯಿಯ ಮೇಲೆ, ದೇವರ ಮೇಲೆ ಎಲ್ಲಿಯವರೆಗೆ ಗೌರವ ಇರುತ್ತೋ, ಅಲ್ಲಿಯವರೆಗೂ ಭಾರತ ದೇಶವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

- ತಾವರೆಕೆರೆ ಶಿಲಾಮಠದದಲ್ಲಿ ಶ್ರೀ ಉಮಾ ಮಹೇಶ್ವರ ಸ್ವಾಮಿ ಜಾತ್ರೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಪ್ರಶಸ್ತಿ ಪ್ರದಾನ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಜಗದ್ಗುರುಗಳ ಮೇಲೆ, ತಾಯಿಯ ಮೇಲೆ, ದೇವರ ಮೇಲೆ ಎಲ್ಲಿಯವರೆಗೆ ಗೌರವ ಇರುತ್ತೋ, ಅಲ್ಲಿಯವರೆಗೂ ಭಾರತ ದೇಶವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೋಮವಾರ ಸಂಜೆ ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದ ಆವರಣದಲ್ಲಿ ಶ್ರೀ ಉಮಾ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ದಂಪತಿಸಹಿತ ಶ್ರೀ ಸಿದ್ದಲಿಂಗ ಶಿವಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಭಾರತ ದೇಶವು ಧಾರ್ಮಿಕ ನಂಬಿಕೆಗಳ ಮೇಲೆ ನಿಂತಿದೆ. ಮಠ, ಮಂದಿರಗಳಿಗೆ ಪ್ರತಿಯೊಬ್ಬರು ಹೋಗುತ್ತೇವೆ. ನಾವೆಲ್ಲರೂ ಒಂದು ಎನ್ನುವ ಭಾವನೆ ನಮ್ಮೆಲ್ಲರಲ್ಲೂ ಬಂದಾಗ ಈ ದೇಶವನ್ನು ಒಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದರು.

ಜಾತ್ರಾ ಮಹೋತ್ಸವಗಳು ಜಾತಿ, ಮತವನ್ನು ಬಿಟ್ಟು ನಾವೆಲ್ಲ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತೇವೆ ಎಂದು ತೀರ್ಮಾನ ಮಾಡುವಂತಹ ವಿಶೇಷ ಆಚರಣೆಗಳಾಗಿವೆ. ಸ್ವಾಮಿಗಳು ಧರ್ಮದ ಕಾರ್ಯಗಳನ್ನು ಮಾಡಲು ಹೇಗೆ ಜೀವನವನ್ನು ತ್ಯಾಗ ಮಾಡಿದ್ದಾರೋ ಅವರ ಮಾರ್ಗದರ್ಶನದಲ್ಲಿ ಧರ್ಮ, ದೇಶವನ್ನು ಉಳಿಸಲು ಮುಂದಿನ ಜೀವನ ಮುಡಿಪಾಗಿಡುತ್ತೇನೆ ಎಂದರು.

ಸಮಾರಂಭದ ಉದ್ಘಾಟಿಸಿದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಕರ್ನಾಟಕ ರಾಜ್ಯ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಮುಂದಾಗಲು ಮಠ-ಮಂದಿರಗಳ ಕೊಡುಗೆ ಅಪಾರವಾಗಿದೆ. ಶಿಲಾಮಠವು ಸಮಾಜದ ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ಸೇರಿಸಿಕೊಂಡು ಸಾಗುತ್ತಿರುವ ಮಠವಾಗಿದೆ. ಈ ಹಿಂದೆ ಶಾಸಕನಾಗಿದ್ದಾಗ ತಾವರೆಕೆರೆ ಗ್ರಾಮದ ಎರಡು ಮಸೀದಿಗಳಿಗೆ ₹8 ಲಕ್ಷ ಅನುದಾನವನ್ನು ಶ್ರೀಗಳವರ ಶಿಫಾರಸಿನ ಮೇಲೆ ನೀಡಿದ್ದಾಗಿ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು, ಧಾರವಾಡದ ಮುಕ್ತಿ ಮಂದಿರದ ವಿಮಲ ರೇಣುಕಾ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಿ, ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಹುಣಸೇಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ಪುರಿಗಾಲಿಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕುಪ್ಪೂರು ಗದ್ದಿಗೆ ಮಠದ ಶ್ರೀ ತೇಜೇಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪತ್ನಿ ಜಯಲಕ್ಷ್ಮೀ ಪಾಲ್ಗೊಂಡಿದ್ದರು. ಶಿವಮೊಗ್ಗದ ಶಿವಶಕ್ತಿ ಸಮಾಜದ ಅಧ್ಯಕ್ಷೆ ಪಾರ್ವತಮ್ಮ ಅವರಿಗೆ ಶ್ರೀ ಅನ್ನಪೂರ್ಣೇಶ್ವರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ತಾವರೆಕೆರೆ ಗ್ರಾ.ಪಂ.ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

- - -

ಕೋಟ್‌ ಜಾತ್ರೆಗಳು, ಹಬ್ಬಗಳು ದೇವರ ಉತ್ಸವಕ್ಕೆ ಸೀಮಿತವಾಗಿರದೇ ಜೀವನದ ಮೌಲ್ಯಗಳನ್ನು ತುಂಬಿಸುವುದು ಜಾತ್ರೆಯ ಉದ್ದೇಶವಾಗಿದೆ. ಇಂತಹ ಜಾತ್ರೆಗಳಿಂದ ಕೂಡಿ ಬಾಳುವ, ಹಂಚಿ ತಿನ್ನುವ, ಎಲ್ಲರೂ ಒಟ್ಟಿಗೆ ಸೇರುವ ಅವಕಾಶವನ್ನು ಜಾತ್ರೆಗಳು ಮಾಡಿಕೊಡುತ್ತವೆ

- ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟ, ತುಮಕೂರು

- - - -24ಕೆಸಿಎನ್‌ಜಿ1.ಜೆಪಿಜಿ:

ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದಂಪತಿಗೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. -24ಕೆಸಿಎನ್ಜಿ2.ಜೆಪಿಜಿ:

ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿದರು. ಈ ಸಂದರ್ಭ ವಿವಿಧ ಮಠಾಧೀಶರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ