ಯಾರನ್ನೂ ಬಹಿಷ್ಕಾರ ಮಾಡಿಲ್ಲ: ಕೆಸರೊಳ್ಳಿ ಗ್ರಾಮಸ್ಥರ ಸ್ಪಷ್ಟನೆ

KannadaprabhaNewsNetwork |  
Published : Aug 01, 2026, 03:30 AM IST
ಶುಕ್ರವಾರ ಕೆಸರೊಳ್ಳಿ ಗ್ರಾಮಸ್ಥರು ಗ್ರಾಮದೇವಿ ದೇವಸ್ಥಾನದಲ್ಲಿ ಸಭೆ ನಡೆಸಿ ಗ್ರಾಮದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ ಕರಂಜೇಕರ ಕುಟುಂಬದ ಕ್ರಮ ಖಂಡಿಸಿದರು. | Kannada Prabha

ಸಾರಾಂಶ

ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಯಾರಿಗೂ ಯಾವುದೇ ರೀತಿಯ ಕಾನೂನುಬಾಹಿರ ಬಹಿಷ್ಕಾರ, ಬೆದರಿಕೆ ಅಥವಾ ದ್ವೇಷದ ರಾಜಕಾರಣವನ್ನು ಹಿಂದೆಯೂ ಮಾಡಲಿಲ್ಲ, ಪ್ರಸ್ತುತವು ಸಹ ಮಾಡುತ್ತಿಲ್ಲ ಹಾಗೂ ಮುಂದೆಯೋ ಮಾಡುವುದಿಲ್ಲ ಎಂದು ಕೆಸರೊಳ್ಳಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಯಾರಿಗೂ ಯಾವುದೇ ರೀತಿಯ ಕಾನೂನುಬಾಹಿರ ಬಹಿಷ್ಕಾರ, ಬೆದರಿಕೆ ಅಥವಾ ದ್ವೇಷದ ರಾಜಕಾರಣವನ್ನು ಹಿಂದೆಯೂ ಮಾಡಲಿಲ್ಲ, ಪ್ರಸ್ತುತವು ಸಹ ಮಾಡುತ್ತಿಲ್ಲ ಹಾಗೂ ಮುಂದೆಯೋ ಮಾಡುವುದಿಲ್ಲ ಎಂದು ಕೆಸರೊಳ್ಳಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಗಣಪತಿ (ಅಜೋಬಾ) ಸಹದೇವ್ ಕರಂಜೇಕರ ಕುಟುಂಬದವರು ಕಾರವಾರಕ್ಕೆ ತೆರಳಿ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಗ್ರಾಮದ ವಿರುದ್ಧ ಸಲ್ಲಿಸಿದ ಆರೋಪಗಳಿಗೆ ಈ ಮೇಲಿನಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರಂಜೇಕರ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಮಾಡಲಾಗಿದೆ. ತಮ್ಮೊಂದಿಗೆ ವ್ಯವಹರಿಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಹಾಗೂ ರಾಜಕೀಯ ಪ್ರೇರಿತವಾಗಿ ತಮ್ಮ ವಿರುದ್ಧ ಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ವಿಷಯವು ಗಮನಕ್ಕೆ ಬಂದಿದೆ. ಈ ಸಂಬಂಧ ಕೆಸರೊಳ್ಳಿ ಗ್ರಾಮಸ್ಥರಾದ ನಾವು ಸ್ಪಷ್ಟಪಡಿಸುವುದೆನಂದರೇ, ನಮ್ಮ ಗ್ರಾಮದಲ್ಲಿ ಯಾವುದೇ ವ್ಯಕ್ತಿ ಅಥವಾ ಕುಟುಂಬದ ವಿರುದ್ಧ ಗ್ರಾಮಸ್ಥರು ಸಾಮೂಹಿಕವಾಗಿ ಬಹಿಷ್ಕಾರ ಹೇರಿರುವುದಿಲ್ಲ. ಈ ಕುರಿತು ಯಾವುದೇ ಗ್ರಾಮಸಭೆ ಅಥವಾ ಸಾರ್ವಜನಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿಲ್ಲ. ಗ್ರಾಮಸ್ಥರ ಪರವಾಗಿ ಯಾರಿಗೂ ಅಂತಹ ಅಧಿಕಾರ ನೀಡಲಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಯಲ್ಲಿ ಉಲ್ಲೇಖಿಸಿದ ರಾಜಕೀಯ ಪ್ರೇರಣೆ ಹಾಗೂ ಪ್ರಭಾವಿ ರಾಜಕಾರಣಿಯ ಕೈವಾಡದ ಆರೋಪಗಳು ನಮ್ಮ ತಿಳುವಳಿಕೆಯ ಮಟ್ಟಿಗೆ ಸತ್ಯಕ್ಕೆ ದೂರವಾಗಿದ್ದು, ಗ್ರಾಮಸ್ಥರನ್ನು ಅನಗತ್ಯವಾಗಿ ಅಪಖ್ಯಾತಿಗೊಳಿಸುವಂತಿವೆ. ನಮ್ಮ ಗ್ರಾಮದಲ್ಲಿ ಕಾನೂನನ್ನು ಗೌರವಿಸುವ ಮತ್ತು ಶಾಂತಿ, ಸೌಹಾರ್ದತೆ ಕಾಪಾಡುವ ಸಂಪ್ರದಾಯವಿದೆ. ಗ್ರಾಮದಲ್ಲಿ ಹಿರಿಯರು, ಪಂಚರಿಗೆ ಅಪಾರ ಗೌರವವಿದೆ, ಆದುದರಿಂದ ಕರಂಜೇಕರ ಕುಟುಂಬದವರು ಸಲ್ಲಿಸಿರುವ ಮನವಿಯಲ್ಲಿನ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಷ್ಪಕ್ಷ ಮತ್ತು ಸಮಗ್ರ ತನಿಖೆ ನಡೆಸಿ ವಾಸ್ತವಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದು, ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಸ್ಪಷ್ಟ ನಿಲುವಾಗಿದೆ ಎಂದ ಮನವಿಯಲ್ಲಿ ತಿಳಿಸಿದ್ದಾರೆ.

ಸುಳ್ಳು ಅಥವಾ ಆಧಾರರಹಿತ ಆರೋಪಗಳಿಂದ ಇಡೀ ಗ್ರಾಮದ ಗೌರವಕ್ಕೆ ಧಕ್ಕೆ ಉಂಟಾಗದಂತೆ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಗ್ರಾಮದ ಶ್ರೀ ಲಕ್ಷ್ಮೀ ಮಾತಾ ಟ್ರಸ್ಟ್ ಅಧ್ಯಕ್ಷ ಗಿರಿಜಾರಾಮ ಅಳ್ವಣಕರ, ಪದಾಧಿಕಾರಿಗಳಾದ ವಿಠ್ಠಲ ಕೆಸರೆಕರ, ರಾಘವೇಂದ್ರ ನಾಯ್ಕ, ಪರಶುರಾಮ ಕರಗಸಕರ, ಡೊಂಗ್ರು ಕೆಸರೆಕರ, ಡೊಂಗ್ರು ಜುವೇಕರ, ಆನಂದ ಗುಡಗೇರಿ, ಸುರೇಶ ಶಹಾಪುರಕರ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅರಣ್ಯವಾಸಿಗಳ ಆಕ್ರೋಶ
ಜಾಲಿ ಯೋಗ ತರಬೇತಿ ಕೇಂದ್ರದಲ್ಲಿ ಗುರುಪೂರ್ಣಿಮೆ ಆಚರಣೆ