ಗಣತಿ ಮಾಡಲು ನಮ್ಮ ಮನೆಗೆ ಯಾರು ಬಂದಿಲ್ಲ: ಶಾಸಕ ಸಿಸಿ ಪಾಟೀಲ

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ಸಚಿವ ಸಂಪುಟದ ಸಹೋದ್ಯೋಗಿಗಳ ಅಸಮಾಧಾನ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಂಡನೆ ಮಾಡಿದ್ದಾರೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಗದಗ: ಸಚಿವ ಸಂಪುಟದ ಸಹೋದ್ಯೋಗಿಗಳ ಅಸಮಾಧಾನ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಂಡನೆ ಮಾಡಿದ್ದಾರೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನದೊಂದು ಪ್ರಶ್ನೆ, ಸಚಿವ ಎಚ್.ಕೆ. ಪಾಟೀಲ ಅವರ ಮನೆಗೆ ಗಣತಿ ಮಾಡಲು ಯಾರಾದ್ರು ಬಂದಿದ್ದರಾ? ಸರ್ವೇ ಮಾಡಲು ನಮ್ಮ ಮನೆಗೆ ಯಾರು ಬಂದಿಲ್ಲ. ಉದಾಹರಣೆಗೆ ಒಂದು ಕ್ಷೇತ್ರದಲ್ಲಿ ಲಮಾಣಿ ಸಮುದಾಯದವರು ಇಲ್ಲ, ಆದರೂ 4000 ಲಂಬಾಣಿ ಜನ ಇದ್ದಾರೆ ಎಂದು ವರದಿ ನೀಡಿದ್ದಾರೆ. ಇಳಿಗೇರ್ ಸಮಾಜದವರು ಇಲ್ಲ, ಆದರೂ 3000 ಇದ್ದಾರೆ ಎಂದು ವರದಿ ಕೊಟ್ಟಿದ್ದಾರೆ. ಇದು ಅಸಮರ್ಪಕವಾದ ಜಾತಿ ಜನಗಣತಿ, ಯಾರಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ವಿಚಾರ ಮಾಡಿಲ್ಲ ಎಂದರು.ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಸಿಗುವ ಎಲ್ಲ ಸೌಲಭ್ಯ ನೀಡಿ, ಅದಕ್ಕೆ ಯಾರದ್ದೂ ತಕರಾರು ಇಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಲಿಂಗಾಯತರಾಗಿ ಹುಟ್ಟಿರೋದು ತಪ್ಪಾಯಿತಾ? ಜಾತಿ ಜನಗಣತಿಯನ್ನು ಗದಗ ಜಿಲ್ಲೆಯಿಂದ ಚಾಲೆಂಜ್ ಮಾಡುತ್ತೇವೆ. ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಅಧ್ಯಯನ ಮಾಡಲು ಪ್ರತಿ ನೀಡುತ್ತಿದ್ದಾರೆ. 136, 139 ಶಾಸಕರ ಬೆಂಬಲ ಸಿಎಂ ಸಿದ್ದರಾಮಯ್ಯ ಅವರಿಗಿದೆ. ಆ ಬೆಂಬಲ ಭಸ್ಮಾಸುರ ಬೆಂಬಲ ಅಗಬಾರದು. ಭಸ್ಮಾಸುರ ಬಹಳ ಜನರನ್ನು ಸುಟ್ಟು ಕೊನೆಗೆ ತಾನೇ ತನ್ನ ಕೈ ತಲೆ ಮೇಲೆ ಇಟ್ಟುಕೊಳ್ತಾನೆ. ನೀವು ಅನುಭವಿ ಸಿಎಂ ಇದ್ದೀರಾ, ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ವರ್ಗಕ್ಕೆ ಅನ್ಯಾಯ ಆಗಬಾರದು ಎಂದರು.

ಕೂಡಲಸಂಗಮ ಶ್ರೀ ಪರ ಬ್ಯಾಟಿಂಗ್‌: ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳ ವಿರುದ್ಧ ಬಹಳ ಕೀಳುಮಟ್ಟದ ಕೆಲವು ಕಾಂಗ್ರೆಸ್ ನಾಯಕರು ಮಾತುಗಳನ್ನಾಡಿದ್ದಾರೆ. ನಿನ್ನೆ ಕೂಡಿದ ನಾಯಕರಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇರೋದು ಮುರುಗೇಶ ನಿರಾಣಿಯವರಿಗೆ ಅಷ್ಟೇ. ಕೂಡಲ ಸಂಗಮದ ಪೀಠಕ್ಕೆ ತನು‌, ಮನ, ಧನ ಸಹಾಯ ಮಾಡಿದವರು ಅಂದರೆ ಅದು ಮುರುಗೇಶ ನಿರಾಣಿ ಮಾತ್ರ. ಉಳಿದವರೆಲ್ಲರೂ ಕೂಡಲ ಸಂಗಮದ ಲಾಭಾರ್ಥಿಗಳು. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ನಿಮ್ಮ ಪಾತ್ರ ಏನು ? ಸಮಾಜದ ಸಂಘಟನೆಗೆ ಮುರುಗೇಶ ನಿರಾಣಿ ಅವರ ಹತ್ತಿರ ಯಾರು ಯಾರು ಎಷ್ಟು ಹಣ ತೆಗೆದುಕೊಂಡಿದ್ದಾರೆ ಗೊತ್ತು, ಕೂಡಲ ಸಂಗಮದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡ ಪ್ರಭಣ್ಣ ಹುಣಸಿಕಟ್ಟಿ. ಕೂಡಲ ಸಂಗಮದ ಸ್ವಾಮೀಜಿಗಳು ತಮಗಾಗಿ ಆಸ್ತಿ ಮಾಡಿಲ್ಲ, ಸಮಾಜಕ್ಕಾಗಿ ಅವರ ಸೇವೆ ಅಪಾರ. ಸಮಾಜ ಒಡೆಯುವ ಕೆಲಸವನ್ನು‌ ಮಾಡಬೇಡಿ ಎಂದರು.

ಕೂಡಲ ಸಂಗಮ ಸ್ವಾಮೀಜಿ ಬಗ್ಗೆ ನಿಮಗೆ ಮಾತನಾಡಲು ಯಾವ ನೈತಿಕತೆ ಇದೆ. 2003ರಲ್ಲಿ ಈ ಟ್ರಸ್ಟ್ ರಚನೆಯಾಗಿದೆ. 3 ವರ್ಷಕ್ಕೆ ಮೇಲ್ಪಟ್ಟು ಆ ಟ್ರಸ್ಟ್‌ ಪದಾಧಿಕಾರಿಯಾಗಿ ಉಳಿಬಾರದು ಅಂತ ಇದೆ. ಒಂದು ಪೀಠಕ್ಕೆ ಎಷ್ಟು ಜನ ಅಧ್ಯಕ್ಷರು ಎಂದು ವ್ಯಂಗ್ಯ ಮಾಡಿದರು.

ಒಂದು ಪೀಠಕ್ಕೆ ಒಬ್ಬರೆ ಅಧ್ಯಕ್ಷ: ಒಂದು ಪೀಠಕ್ಕೆ ಒಬ್ಬರೆ ಅಧ್ಯಕ್ಷರು, ಇಲ್ಲಿ ನಾನು ಅಧ್ಯಕ್ಷ , ನೀನು ಅಧ್ಯಕ್ಷ ಅಂತ ಇದ್ದಾರೆ. ಸ್ವಾಮೀಜಿ ಅವರ ನ್ಯೂನತೆ ಬಗ್ಗೆ ಸಮಸ್ಯೆ ಇದ್ದರೆ ಮೀಟಿಂಗ್ ಮಾಡಿ ನಾನು ಬರ್ತಿನಿ. ಯಾರ್ಯಾರು ಯಾರ ಹತ್ತರ ಎಷ್ಟು ಹಣ ತೆಗೆದುಕೊಂಡಿದ್ದೀರಿ ಎಂದು ಬಿಚ್ಚಿ ಇಟ್ಟರೆ ಸಮಾಜದಲ್ಲಿ ನಿಮಗೆ ಕವಡೆ ಕಾಸಿನ ಕಿಮ್ಮತ್ತು ಇರಲ್ಲ. ಇದನ್ನ ಬಿಡಿ, ಸಮಾಜ ಕಟ್ಟುವ ಕೆಲಸ ಮಾಡೋಣ, ನಾನು ಇರ್ತಿ‌ನಿ, ನಿಮ್ಮ ವಯಸ್ಸು ಹಾಗೂ ಗೌರವ ತಕ್ಕಂತೆ ಮಾತನಾಡಿ, ಟ್ರಸ್ಟ್ ಆಸ್ತಿ ಟ್ರಸ್ಟ್‌ಗೆ ಬಿಟ್ಟು ಕೊಡಿ ಎಂದರು.ವಿಜಯಾನಂದ ಕಾಶಪ್ಪನವರ ಬಗ್ಗೆ ನನ್ನ ಬಳಿ ಕೇಳಬೇಡಿ ಎಂದ ಅವರು, ಬಸವರಾಜ ಬೊಮ್ಮಾಯಿ‌ ಸರ್ಕಾರದಲ್ಲಿ ಎಷ್ಟು ರೋಷಾವೇಶ, ಹೆಗಲಿಗೆ ಹಾಕಿದ ಬಾರಕೋಲ ರಾತ್ರಿ ಮಲಗುವವರೆಗೂ ತೆಗೆದಿಲ್ಲ, ಈ ಹೋರಾಟದಲ್ಲಿ‌ ಸಹ ನಾನು ಭಾಗಿಯಾಗಿದ್ದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ ಬಾರಕೋಲ ಎಲ್ಲಿ ಹೋಯಿತು ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದ್ದರೆ ಅದು ವಿನಯ ಕುಲಕರ್ಣಿ. ಜಾದುಗಾರ ಜಾದು ಮಾಡಿದ ಹಾಗೆ ಬಾರಕೋಲು ಮಾಯ, ಅವರು ಸಮಾಜ ಉದ್ಧಾರ ಮಾಡ್ತಾರಾ? ಎಂದರು.ಅವರ ಬಗ್ಗೆ ನನ್ನ ಹತ್ತಿರ ಪ್ರಶ್ನೆ ಕೇಳಬೇಡ ಮಾರಯಾ ಎಂದ ಅವರು, ಕಾಂಗ್ರೆಸ್ ಟಿಕೆಟ್ ಬೇಕು ಅಂದಾಗ ಸ್ವಾಮೀಜಿಗಳನ್ನು ಎಲ್ಲ ನಾಯಕರ ಮನೆಗೆ ಕಳುಹಿಸಿದರು, ಈಗ ಸ್ವಾಮೀಜಿ ಬೇಡವಾದರಾ? ಮೀಡಿಯಾ ಇದೆ, ಹೇಗೆ ಬೇಕು ಹಾಗೆ ಮಾತಾಡಿದರೆ, ಸಮಾಜ ನೋಡುತ್ತೆ, ಜನರು ಪಾಠ ಕಲಿಸುತ್ತಾರೆ ಎಂದರು.

ಹೊಸ ಪೀಠ ಕಟ್ತೇವಿ:ಸ್ವಾಮೀಜಿ ಒಂದು ದಿನ ಪೀಠದಲ್ಲಿ ಮಲಗಿಲ್ಲ, ಭಕ್ತರ ಮನೆಯಲ್ಲಿ ಮಲಗಿ ಸಮಾಜಕ್ಕಾಗಿ ಸೇವೆ ಮಾಡ್ತಾರೆ. ನಾನು ಮತ್ತು ಬಂಡಿ ಅವರು ಸರ್ಕಾರದಿಂದ ಕಟ್ಟಿಸಿದ ಒಂದು ಕೋಣೆ ಬಿಟ್ಟರೆ ಅಲ್ಲಿ ಏನೂ ಇಲ್ಲ. ಈ ಪೀಠ ನಿನ್ನೆ ಮಾಡಿದ ನಾಯಕರು ತೆಗೆದುಕೊಳ್ಳಲಿ, ಮುಂದೆ ಅದರ ಪಕ್ಕಕ್ಕೆ ಒಂದು ಪೀಠ ಕಟ್ಟುತ್ತೇವೆ. ಸಮಾಜದ ಬಾಂಧವರು ಎಲ್ಲರೂ ಪಟ್ಟಿ ಹಾಕಿ ಸ್ವಾಮೀಜಿ ಹೆಸರಿನಲ್ಲಿ ಜಾಗ ತೆಗೆದುಕೊಂಡು ಪೀಠ ಕಟ್ಟುತ್ತೇವೆ. ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಸಮಾಜದ ಸಂಘಟನೆಯ ಬಗ್ಗೆ ಇರುವ ಕಳಕಳಿ ಯಾರಿಗೂ ಇಲ್ಲ. ಪೀಠ ಬೆಳೆಸುವ ಬದಲು ಹಳ್ಳಿ ಹಳ್ಳಿಗಳಲ್ಲಿ ಸಮಾಜ‌ ಸಂಘಟನೆ ಮಾಡುತ್ತೇನೆ ಎಂದಿದ್ದರು ಸ್ವಾಮೀಜಿ ಎಂದರು.

ಅಲ್ಪಸಂಖ್ಯಾತರಿಗೆ ಶೇ. 4 ಮೀಸಲಾತಿ, ಸಂವಿಧಾನ ತಿದ್ದುಪಡಿ ಮಾಡ್ತೀವಿ ಅಂತಾರೆ? ಪಂಚಮಸಾಲಿಗೆ ಮೀಸಲಾತಿ ಕೊಟ್ರೆ ಸಂವಿಧಾನ ವಿರೋಧಿ ಎಂದು ಸಿದ್ದರಾಮಯ್ಯ ಹೇಳಿದರು. ಈ ರಾಜ್ಯದಲ್ಲಿ ಇರುವ ಸರ್ಕಾರ ಹುಚ್ಚರ ಸರ್ಕಾರ. ಅಧಿಕಾರದ ಮದ ನೆತ್ತಿಗೇರಬಾರದು ಎಂದರು.

Share this article