ಸಮೀಕ್ಷೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ

KannadaprabhaNewsNetwork |  
Published : Apr 13, 2025, 02:06 AM IST
ಪೋಟೋ: 12ಎಸ್‌ಎಂಜಿಕೆಪಿ04ಶಿವಮೊಗ್ಗದ ಪತ್ರಿಕಾಭವನದಲ್ಲಿ ಶಣಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮಾಜಿ ಎಚ್. ಕಾಂತರಾಜ್ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಜಾತಿ ಗಣತಿ ವರದಿ ವೇಳೆ ಯಾವುದೇ ರಾಜಕಾರಣಿಗಳು ಹಸ್ತಕ್ಷೇಪ ಮಾಡಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹೇಳಿದರು.

ಶಿವಮೊಗ್ಗ: ಜಾತಿ ಗಣತಿ ವರದಿ ವೇಳೆ ಯಾವುದೇ ರಾಜಕಾರಣಿಗಳು ಹಸ್ತಕ್ಷೇಪ ಮಾಡಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ವೇಳೆ ಯಾವುದೇ ಹಸ್ತಕ್ಷೇಪವಾಗಿಲ್ಲ, ಅಧಿಕಾರಿಗಳು, ನಮ್ಮ ಸಮಿತಿ ಸದಸ್ಯರಿಗೆ ಯಾವುದೇ ಪ್ರಭಾವ ಬಂದಿಲ್ಲ. ಯಾವ ಹಂತದಲ್ಲೂ ನಮಗೆ ಯಾರಿಂದಲೂ ಸಮೀಕ್ಷೆ ವರದಿ ರಚನೆಗೆ ಪ್ರಭಾವ ಬಂದಿಲ್ಲ, ಆಂತರಿಕವಾಗಿಯೂ, ಬಹಿರಂಗವಾಗಿಯೂ ನಮಗೆ ಒತ್ತಡ, ಪ್ರಭಾವ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ತಮ್ಮದೇ ಅಧ್ಯಕ್ಷತೆಯಲ್ಲಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿರುವ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕ ಎನ್ನುವ ಟೀಕೆಗಳನ್ನು ಅವರು ಅಲ್ಲಗಳೆದರು.

1931 ನಂತರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಯಾವುದೇ ಸಮೀಕ್ಷೆ ನಡೆದಿಲ್ಲ. ಹಾಗಾಗಿ 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಿದ್ದರು. ಆ ನಿಟ್ಟಿನಲ್ಲಿ ಆಯೋಗವು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿತ್ತು. ಈಗ ಅದರ ಬಗ್ಗೆ ಚರ್ಚೆ ಶುರುವಾಗಿದೆ. ಸಚಿವ ಸಂಪುಟದಲ್ಲಿ ಮಂಡನೆಯಗಿದೆ ವರದಿಗೆ ಮಹತ್ವ ಬಂದಿದೆ ಎಂದರು.

ನಮ್ಮ ದೇಶದಲ್ಲಿ ಜಾತಿ ಎಂಬುದು ವಾಸ್ತವವಾಗಿದೆ. ಆದರೆ ಜಾತಿ, ಭೇದ ತೊಲಗುವುದು ಅಷ್ಟೇ ಮುಖ್ಯವಾಗಿದೆ. ಜಾತಿ ವ್ಯವಸ್ಥೆ ಈ ದೇಶದಿಂದಲೇ ತೊಲಗಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ನಾವು ಜಾತಿಗಳಿಂದ ವಿಭಜನೆಯಗಿದ್ದೆವೆ, ಅದು ಕೃತಕವಾಗಿದೆ. ನಾವು ನೀಡಿದ ವರದಿಯ 54 ಅಂಶಗಳಲ್ಲಿ ಜಾತಿ ಅಂಶ ಕೂಡ ಇದೆ. ಸರ್ವೋಚ್ಚ ನ್ಯಾಯಾಲಯವು ಕೂಡ ಜಾತಿ ಆಧಾರದ ಮೇಲೆ ವರದಿ ನೀಡಬಾರದೆಂಬ ಸಮೀಕ್ಷೆಗೆ ಒತ್ತು ನೀಡಿದೆ. ಜಾತಿ ಆಧಾರದ ಮೇರೆಗೆ ವರ್ಗೀಕರಿಸಲಾಗಿದೆ. ಪ್ರಶ್ನಾವಳಿಗಳನ್ನು ಮಾಡಿ ಸಮೀಕ್ಷೆ ಮಾಡಿದ್ದೇವೆ. ಜಾತಿ ನಮ್ಮ ಶತೃವಾಗಿದ್ದು, ಅದು ಯಾವ ರೀತಿ ಬೇರುಬಿಟ್ಟಿದೆ ಎಂದು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ತಮ್ಮ ಸಮೀಕ್ಷೆಯ ಬಗ್ಗೆ ವಿವರಿಸಿದರು.ಸಮಾಜದಲ್ಲಿರುವ ಕಾಯಿಲೆಗಳನ್ನ ಕಂಡು ಹಿಡಿದು ಅದಕ್ಕೆ ಔಷಧಿ ನೀಡುವುದೇ ಜಾತಿ ಗಣತಿ ಆಗಿದೆ. ಕಾಲಕ್ಕರ್ ವರದಿ ಮತ್ತು ಮಂಡಲ್ ವರದಿ ಜಾರಿ ಬಂದಿತ್ತು. ಕಾಲಕ್ಕರ್ ವರದಿಗೆ ವರದಿ ಸಲ್ಲಿಸಿದವರೇ ಮನವಿ ಮಾಡಿಕೊಂಡ ಪರಿಣಾಮ ಜಾರಿಗೆ ಬರಲಿಲ್ಲ. ಮಂಡಲ್ ವರದಿ ಮಾತ್ರ ಜಾರಿ ಬಂದಿದೆ. ಇದು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಬಗ್ಗೆಯಿರುವ ವರದಿಯಾಗಿದೆ. ಸಂವಿಧಾನದಲ್ಲಿ ಇಷ್ಟು ಪರ್‌ಸೆಂಟ್‌ ಮೀಸಲಾತಿ ಕೊಡಿ ಎಂದಿಲ್ಲ. ರಾಜಕೀಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಎಷ್ಟು ಪರ್ಸೆಂಟ್‌ ಕೊಡಬೇಕು ಎಂಬುದು ನೋಡಿ ಕೊಡಬೇಕಿದೆ. ಜಿಪಂ, ತಾಪಂಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ತು ಆದರೆ ಎಂಪಿ, ಎಂಎಲ್ಎ ಸ್ಥಾನಕ್ಕೆ ಹಿಂದುಳಿದವರಿಗೆ ಸ್ಥಾನ ಸಿಗಲಿಲ್ಲ ಎಂದರು.

ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಪ್ರಶ್ನೆಗಳಿಗೆ, ಜಾತಿಗಳು ಎಷ್ಟು ಇದೆ ಅವರಿಗೆ ಮೀಸಲು ಎಷ್ಟಿರಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು. 2015ರಲ್ಲಿ ಸಮೀಕ್ಷೆ ನಡೆಸಲಾಯಿತು. ಈಗ ಅದು ಮಂಡನೆ ಮತ್ತು ಚರ್ಚೆ ಸ್ವಾಗತವಾಗಿದೆ. ಸಮೀಕ್ಷೆಗೆ ಸಾಕಷ್ಟು ಹಣ ವ್ಯಯಮಾಡಲಾಗಿದೆ. ಇದೇ ರೀತಿ ಬಿಹಾರ, ಅಸ್ಸಾಂ ಮಹರಾಷ್ಟ್ರದಲ್ಲಿ ನಮ್ಮನ್ನ ನೋಡಿ, ಸಮೀಕ್ಷೆಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಜಾತಿ ಎಂಬುದು ನಮ್ಮ ಶತ್ರು. ಆ ಶತ್ರುವಿಗೆ ನಮ್ಮ ಸಮಾಜದಿಂದ ಹೊಡೆದೋಡಿಸಬೇಕಾಗಿದೆ. ನಮ್ಮ ಸಮೀಕ್ಷೆಯ ವರದಿಯಲ್ಲಿ ಈ ಎಲ್ಲವನ್ನು ಹೇಳಲಾಗಿದೆ. ಆಗಾಗ ಜಾತಿ ಗಣತಿಯಂತಹ ಸಮೀಕ್ಷೆ ನಡೆಸುವ ಅಗತ್ಯವಿದೆ. ನಮ್ಮ ದೇಹದ ಆರೋಗ್ಯ ಪರೀಕ್ಷಿಸುವ ಹಾಗೆ ಜಾತಿ ಗಣತಿ ಸಮೀಕ್ಷೆ ಕೂಡ ನಡೆಸಬೇಕೆಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ. ದತ್ತಾಂಶದ ಮೂಲಕ ಸರಿ, ತಪ್ಪು ಅಂಕಿ ಅಂಶ ಕಾಯ್ದಿರಿಸಲಾಗಿದೆ. ಅಸಮಾನತೆಯನ್ನು ಸರಿದೂಗಿಸಲು ಇಂತಹ ಸಮೀಕ್ಷೆಗಳು ಅತ್ಯಗತ್ಯ. ಎಲ್ಲರಿಗೂ ಪ್ರಾಶಸ್ತ್ಯ ಸಿಗಬೇಕಾದರೆ ಜನಸಂಖ್ಯೆ ಗಣತಿ ಬಹಳ ಮುಖ್ಯ ಎಂದು ಹೇಳಿದರು.

ಉದ್ಯೋಗಕ್ಕೆ 1993ರಲ್ಲಿ ಮಂಡಲ್ ಜಾರಿ ಮಾಡಿತ್ತು. ಸುಪ್ರೀಂ ಆದೇಶದ ಮೇಲೆ ಜಾರಿ ಮಾಡಲಾಯಿತು. 2008ರಲ್ಲಿ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಯಿತು. ಮಂಡಲ್ ಆಯೋಗದ ಪ್ರಕಾರ ಹಿಂದುಳಿದ ವರ್ಗಗಳಿಗೆ ಕೇಂದ್ರದಲ್ಲಿ ಶೇ.27 ರಷ್ಟು ಮೀಸಲಾತಿ ಇದ್ದರೂ ಇದುವರೆಗೂ ಆ ಬ್ಯಾಕ್‌ಲಾಗ್ ಹುದ್ದೆಗಳ ಮೀಸಲು ಜಾರಿಯಾಗಿಲ್ಲ. ಸಮಾನವಾಗಿ ಹಂಚಿಕೆಯಾದರೆ ಮಾತ್ರ ಈ ಮೀಸಲಾತಿಯಿಂದ ಜನಾಂಗಗಳು ಉದ್ಧಾರವಾಗಲಿದೆ ಎಂದ ಅವರು, ಸಮಾನತೆ ಎಂಬುದಕ್ಕೆ ಮೀಸಲಾತಿ ಒಂದೆ ಅಸ್ತ್ರ ಅಲ್ಲ, 54 ಅಂಶದಲ್ಲಿ ಅದೊಂದಾಗಿದೆ ಅಷ್ಟೇ ಎಂದರು.

ಸಮೀಕ್ಷೆ ವೈಜ್ಞಾನಿಕವಾಗಿದೆ:

ಹಿಂದುಳಿದ ಆಯೋಗದ ಸಮೀಕ್ಷೆ ವೈಜ್ಞಾನಿಕವಾದದ್ದೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ಸಮೀಕ್ಷೆ ವೈಜ್ಞಾನಿಕವಾಗಿದೆ, ಮತ್ತು ಮನೆ ಮನೆಗೆ ತೆರಳಿ ಗಣತಿ ಮಾಡಲಾಗಿದೆ. ಸುಪ್ರೀಂ ನಿರ್ದೇಶನದ ಅಂಶದ ಮೇಲೆ ಗಣತಿ ನಡೆದಿದೆ. ನಾವು ನಡೆಸಿದ ಗಣತಿಗೆ ಪರ್ಯಾಯವಾದ ಸರ್ವೆಗಳಿಲ್ಲ. ವರದಿ ಸೋರಿಕೆಯಾಗಿಲ್ಲ. ಆದರೆ ಮಾಧ್ಯಮಗಳಲ್ಲಿ ಬರುವ ಅಂಕಿ ಅಂಶ ಸರಿಯಿದೆ. ಎಸ್‌ಸಿ- ಎಸ್ಟಿ ಹೆಚ್ಚಿದೆ. ಮುಸ್ಲೀಂರ ಜನ ಸಂಖ್ಯೆ ಎರಡನೇ ಸ್ಥಾನದಲ್ಲಿದೆ ಸರಿಯಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ವಿ.ರಾಜು, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಚಪ್ಪ, ತೀ.ನಾ.ಶ್ರೀನಿವಾಸ್, ಜನಮೇಜಯರಾವ್, ಧರ್ಮರಾಜ್, ಕೃಷ್ಣಮೂರ್ತಿ, ಚನ್ನವೀರಪ್ಪ ಗಾಮನಟ್ಟಿ, ನಟರಾಜ್, ರಾಜಮ್ಮ, ವರಲಕ್ಷ್ಮಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''