ಶಿಕ್ಷಣದಿಂದ ಯಾರೂ ವಂಚಿತರಾಗಬಾರದು: ಡಾ. ಚಂದ್ರು ಲಮಾಣಿ

KannadaprabhaNewsNetwork |  
Published : Nov 04, 2026, 01:30 AM IST
3ಎಂಡಿಜಿ1, ಮುಂಡರಗಿಯಲ್ಲಿ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ 2025-26ನೇ ಸಾಲಿನ ಮದರಸಾ ಆಧುನೀಕರಣ ಹಾಗೂ ಅಭಿವೃದ್ದಿ ಯೋಜನೆಯಡಿ ಮಂಜೂರಾದ 50 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಬಡತನ ಎಂಬುದು ಯಾವುದೇ ಒಂದು ನಿರ್ದಿಷ್ಟ ಸಮಾಜ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗಗಳಲ್ಲಿಯೂ ಬಡ ವಿದ್ಯಾರ್ಥಿಗಳಿದ್ದು, ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಯಾರೊಬ್ಬರೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು.

ಕನ್ನಡಪ್ರಭ ವಾರ್ತೆ ಮುಂಡರಗಿ

ಬಡತನ ಎಂಬುದು ಯಾವುದೇ ಒಂದು ನಿರ್ದಿಷ್ಟ ಸಮಾಜ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗಗಳಲ್ಲಿಯೂ ಬಡ ವಿದ್ಯಾರ್ಥಿಗಳಿದ್ದು, ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಯಾರೊಬ್ಬರೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಜಿಪಂ ಗದಗ, ತಾಪಂ ಮುಂಡರಗಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಾಮಿಯಾ ಅಬುಲ್ ಹಸನೈನ್ ಮದರಸಾ ಮುಂಡರಗಿಯಲ್ಲಿ 2025-26ನೇ ಸಾಲಿನ ಮದರಸಾ ಆಧುನೀಕರಣ ಹಾಗೂ ಅಭಿವೃದ್ದಿ ಯೋಜನೆಯಡಿ ಮಂಜೂರಾದ ₹50 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮದರಸಾದಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೆ ಊಟ, ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮಂಜೂರಾಗಿರುವ ಅನುದಾನವನ್ನು ಅಚ್ಚುಕಟ್ಟಾಗಿ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಳ್ಳಬೇಕೆಂದು ಕಮಿಟಿಯವರಿಗೆ ಸಲಹೆ ನೀಡಿದರು.

ಶಿರಹಟ್ಟಿಯ ಫಕೀರೇಶ್ವರ ಮಠ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಅದೇ ಪರಂಪರೆಯಂತೆ ನಾವೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಬಾಳುವ ಮೂಲಕ ದೇಶವನ್ನು ಕಟ್ಟುವ ಶಕ್ತಿಯಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕು. ತಾವು ಶಾಸಕರಾದ ನಂತರ ಲಕ್ಷ್ಮೇಶ್ವರ ಹಾಗೂ ಮುಂಡರಗಿ ಎರಡೂ ಕಡೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಮದರಸಾ ಕಮಿಟಿ ಅಧ್ಯಕ್ಷ ಬಾಬುಸಾಬ್ ನಾಗರಳ್ಳಿ ಮಾತನಾಡಿ, ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳಿಂದ ಯಾವುದೇ ರೀತಿಯ ಶುಲ್ಕ ಪಡೆಯದೆ ಸಂಪೂರ್ಣ ಉಚಿತವಾಗಿ ಊಟ, ವಸತಿ, ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣವನ್ನು ದಾನ-ಧರ್ಮಗಳ ಮೂಲಕ ಹಣ ಸಂಗ್ರಹಿಸಿ ನೀಡಲಾಗುತ್ತಿದೆ. ಇಲ್ಲಿನ ಮಕ್ಕಳು ಪೂರ್ಣ ಪ್ರಮಾಣದ ವಿದ್ವಾಂಸರಾಗಿ ಹೊರಹೊಮ್ಮಿ ಸಮಾಜದ ಸೇವೆಗೆ ಅರ್ಪಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದರು.

ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಡಾ.ಕುಮಾರಸ್ವಾಮಿ ಹಿರೇಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ವಿ. ಪಾಟೀಲ, ಮಲ್ಲಣ್ಣ ಹಣಜಿ, ಕರೀಂಸಾಬ್ ಮುಲ್ಲಾ, ರಜನಿಕಾಂತ ದೇಸಾಯಿ, ಎಸ್.ಎಸ್. ಗಡ್ಡದ, ನಾಗೇಶ ಹುಬ್ಬಳ್ಳಿ, ಪರಶುರಾಮ ಕರಡಿಕೊಳ್ಳ, ಶಿವನಗೌಡ ಗೌಡರ್, ಜ್ಯೋತಿ ಹಾನಗಲ್, ವೀಣಾ ಬೂಜಿಹಾಳ, ರಾಧಾ ಬಾರಕೇರ, ಕವಿತಾ ನಾಯಕ, ಬುಟ್ಟು ಹೊಸಮನಿ, ವಿನಾಯಕ ಮೇಕಳಿ, ಎಚ್.ಐ. ಮುಲ್ಲಾ, ಎಸ್.ಡಿ. ಚವಡಿ, ಬಾಬಾಜಾನ್ ಸಾಸಿಪುಡಿ, ಫರೀದಸಾಬ್ ಲೈನದ್, ಹುಸೇನಸಾಬ್ ಕಲೇಗಾರ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ಮೈಲಾರಪ್ಪ ಕಲಕೇರಿ, ಸುಭಾಸ ಗುಡಿಮನಿ, ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌