ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ವಿರೋಧ ಬೇಡ

KannadaprabhaNewsNetwork |  
Published : Jun 17, 2025, 12:03 AM ISTUpdated : Jun 17, 2025, 12:04 AM IST
ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿಗೆ ವಿರೋಧ ಬೇಡ | Kannada Prabha

ಸಾರಾಂಶ

ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ. ಜೀವನಾಡಿಯಾಗಿರುವ ಕಾವೇರಿ ಮಾತೆಗೆ ಕೃತಜ್ಞತೆ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಉತ್ತರ ಭಾರತದಲ್ಲಿ ಗಂಗಾರತಿಯಿಂದಾಗಿ ಅಲ್ಲಿನ ಸ್ಥಳೀಯ ಆಡಳಿತಕ್ಕೆ ವರ್ಷಕ್ಕೆ ೨೦೦ ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ನಡೆಸಲುದ್ದೇಶಿಸಿರುವುದನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದು ಬಜರಂಗಸೇನ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.

ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಮಾಡುತ್ತಿರುವುದು ಸಂತೋಷದ ಸಂಗತಿ. ಜೀವನಾಡಿಯಾಗಿರುವ ಕಾವೇರಿ ಮಾತೆಗೆ ಕೃತಜ್ಞತೆ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಉತ್ತರ ಭಾರತದಲ್ಲಿ ಗಂಗಾರತಿಯಿಂದಾಗಿ ಅಲ್ಲಿನ ಸ್ಥಳೀಯ ಆಡಳಿತಕ್ಕೆ ವರ್ಷಕ್ಕೆ ೨೦೦ ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದೆ. ಅದೇ ಮಾದರಿಯಲ್ಲಿ ಕಾವೇರಿ ಆರತಿಯನ್ನು ಆರಂಭಿಸಿದರೆ ಸರ್ಕಾರಕ್ಕೆ ಕೋಟ್ಯಂತ ರು. ಆದಾಯ ಹರಿದುಬರುವುದಲ್ಲದೆ ಪ್ರವಾಸೋದ್ಯಮ ಬೆಳವಣಿಗೆಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದಕ್ಕೆ ನಮ್ಮ ವಿರೋಧವೂ ಇದೆ. ಆ ಜಾಗವನ್ನು ಹೊರತುಪಡಿಸಿ ಶ್ರೀರಂಗಪಟ್ಟಣದ ಬೇರೆ ಯಾವುದಾದರೂ ಸ್ಥಳದಲ್ಲಿ ಕಾವೇರಿ ಆರತಿ ಮಾಡುವಂತೆ ಒತ್ತಾಯಿಸಿದರು.

ಕಾವೇರಿ ಆರತಿ ಬೇಡ ಅದು ಬಿಟ್ಟು ಶಾಲೆಗಳನ್ನು ಅಭಿವೃದ್ಧಿಪಡಿಸಿ ಎಂದು ಕೆಲವರು ಹೇಳುತ್ತಿದ್ದಾರೆ. ಕಾವೇರಿ ಆರತಿ ಮಾಡುವುದು ಒಂದು ನಮ್ಮ ಸಂಸ್ಕೃತಿ, ಪರಂಪರೆಗೆ ನಾವು ನೀಡುವ ಗೌರವ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಇದು ಒಳ್ಳೆಯ ಯೋಜನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರತಿಯೊಂದು ಮಗುವಿಗೆ ವರ್ಷಕ್ಕೆ ಸರ್ಕಾರ ೩.೮೦ ಲಕ್ಷ ರು. ವೆಚ್ಚ ಮಾಡುತ್ತದೆ. ಈ ಹಣವನ್ನು ಒಳ್ಳೆಯ ಶಾಲೆ ನಿರ್ಮಿಸಿ ಹೈಟೆಕ್ ಶಿಕ್ಷಣ ನೀಡಬಹುದಾಗಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಯಾವ ಪ್ರಮಾಣದ ಶಿಕ್ಷಣ ನೀಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಸೇನೆಯ ಹರ್ಷ ವೈ.ಎಚ್. ಆರ್.ಚೇತನ್‌ಕುಮಾರ್, ಸತೀಶ್‌ಕುಮಾರ್, ಶಿವು, ಸ್ನೇಕ್ ಮಹೇಶ್, ಶೇಷಾದ್ರಿ ಗೋಷ್ಠಿಯಲ್ಲಿದ್ದರು.

ಇಂದು ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ಜೂ.೧೭ರಂದು ಸಂಜೆ ೫ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎರಡನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರಿನ ಪ್ರಸಿದ್ಧ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ಹ.ಕ.ರಾಜೇಗೌಡ ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪ್ರದಾನ ಮಾಡುವರು. ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಅಭಿನಂದನಾ ನುಡಿಯನ್ನಾಡಲಿದ್ದು, ಹ.ಕ.ರಾಜೇಗೌಡರ ಸುಪುತ್ರ ಎಚ್.ಆರ್.ದಿನೇಶ್‌ಚಂದ್ರ ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡಿರುವ ವೆಂಕಟಾಚಲಶಾಸ್ತ್ರಿ ಅವರು, ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಗ್ರಂಥ ಸಂಪಾದನೆ, ನಿಘಂಟು ರಚನೆ ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದಾರೆ. ೧೩೦ಕ್ಕೂ ಅಧಿಕವಾಗಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಎಂದರು.

ವೆಂಕಟಾಚಲಶಾಸ್ತ್ರಿ ಅವರು ಭಾಷಾಸಮ್ಮಾನ್ ಪ್ರಶಸ್ತಿ, ಕರ್ನಾಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಂಪ, ಮಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ ನೃತತುಂಗ ಪ್ರಶಸ್ತಿಗಳಿಗೆ ಪ್ರಾತರಾಗಿರುವ ಶಾಸ್ತ್ರಿ ಅವರಿಗೆ ಹ.ಕ. ರಾಜೇಗೌಡ ಪ್ರಶಸ್ತಿ, ೨೫ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಗುವುದು ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಮಂಜುಳಾ ಉದಯಕುಮಾರ್, ನಾಗಪ್ಪ ಗೋಷ್ಠಿಯಲ್ಲಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ