ಇಕ್ಕಟ್ಟು ಸರ್ವಿಸ್ ರಸ್ತೆಯಲ್ಲಿ ಮಳೆಗಾಲದ ಸಂಚಾರ ಅಸಹನೀಯ । ಊರವರ ಬೇಡಿಕೆಗೆ ಮಣಿದು ಕಾಮಗಾರಿ ಸ್ಥಗಿತ
ಕೇಂದ್ರ ಸರ್ಕಾರದ ಅನುಮೋದನೆ ಪಡೆದ ರೀತಿಯಲ್ಲೇ ಕಾಮಗಾರಿ ನಡೆಸಬೇಕಾದ ಅನಿವಾರ್ಯತೆ ಹೊಂದಿರುವ ಗುತ್ತಿಗೆದಾರ ಸಂಸ್ಥೆಯ ವಿರುದ್ದ ಸ್ಥಳೀಯರು ಅಗ್ರಹಿಸಿದ್ದಾರೆಂದು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ ಕೆಲ ನಾಯಕರು , ಸ್ಥಳೀಯರಿಗೆ ವಸ್ತುಸ್ಥಿತಿ ಅರ್ಥೈಸಲು ವಿಫಲರಾದ ಕಾರಣಕ್ಕೆ ಈ ಸಮಸ್ಯೆ ಇಲ್ಲಿ ಜೀವಂತವಾಗಿದೆ. ಓವರ್ ಪಾಸ್ ರಸ್ತೆಗಾಗಿ ನಿರ್ಮಿಸಲಾದ ಸರ್ವೀಸ್ ರಸ್ತೆಯನ್ನೂ ಕೂಡಾ ಅಗಲ ಕಿರಿದಾಗಿಸಿ ನಿರ್ಮಿಸಿದ ಪರಿಣಾಮ ಸರ್ವೀಸ್ ರಸ್ತೆಯೂ ಕೂಡಾ ಇಕ್ಕಟ್ಟಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಧನ ಪಡೆದೂ ಅಂಗಡಿ ಮುಂಗಟ್ಟುಗಳನ್ನು ಯಥಾಸ್ಥಿತಿಯಲ್ಲಿ ಉಳಿಸುವ ಯತ್ನ ಇಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದು ನಿಜವಾಗಿದ್ದಲ್ಲಿ ಇಲ್ಲಿನ ಇಕ್ಕಟ್ಟಾದ ರಸ್ತೆಯ ಸಮಸ್ಯೆ ದೀರ್ಘಕಾಲಿಕವಾಗಿ ಅನುಭವಿಸುವಂತಾಗಿದೆ. ಬದಲಾವಣೆಗೆ ಒಪ್ಪಿಗೆ ಅನಿವಾರ್ಯ: ಜಿಲ್ಲೆಯ ನೂತನ ಸಂಸದ ಬ್ರಿಜೇಶ್ ಚೌಟ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ , ಕಾಮಗಾರಿಯ ಸ್ವರೂಪ ಬದಲಾಯಿಸಲು ಅಸಾಧ್ಯವೆಂದು ಮನವರಿಕೆ ಮಾಡಿಕೊಟ್ಟಿದ್ದು, ಜನತೆಯ ಅನುಕೂಲತೆಗೆ ಪೂರಕವಾಗಿ ಹೆಚ್ಚುವರಿ ಅಂಡರ್ ಪಾಸ್ ಗಳನ್ನು ನಿರ್ಮಿಸಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದಾರೆ. ಒಂದು ಬಾರಿ ಅನುಮೋದನೆ ಪಡೆದ ಕಾಮಗಾರಿಯಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೂ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ.
............................ಸದ್ಯ ನೆಲ್ಯಾಡಿಯ ಸ್ಥಿತಿ ಖೇದಕರವಾಗಿದೆ. ಓವರ್ ಪಾಸ್ ಕಾಮಗಾರಿ ಶೇ ೬೦ ರಷ್ಟು ಮುಗಿದಾಗ ವ್ಯಕ್ತಗೊಂಡ ಫ್ಲೈ ಓವರ್ ಬೇಡಿಕೆ ಮತ್ತು ಪ್ರತಿಭಟನೆಯ ಬಳಿಕ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಾಡಿರುವ ಅಷ್ಟೂ ಕೆಲಸ ಹಾಗೆಯೇ ಇದ್ದು ಬಳಕೆಗೆ ಲಭಿಸದಂತಿದೆ. ಅಂಡರ್ ಪಾಸ್ ಗೆಂದು ಬಳಸಿರುವ ಕಬ್ಬಿಣದ ರಾಡ್ ಗಳು ತುಕ್ಕು ಹಿಡಿಯಲಾರಂಭಿಸಿದೆ. ಮಾಡಿದ ಸರ್ವೀಸ್ ರಸ್ತೆಗಳಲ್ಲಿ ಮಳೆಬಂದಾಗ ತೋಡಿನಂತಾಗುತ್ತದೆ. ಮಳೆ ನಿಂತಾಗ ಕೆಸರುಮಯವಾಗಿ ಜಾರುತ್ತಿದೆ.-ರವೀಂದ್ರ ಟಿ., ಹಿರಿಯ ಸಾಮಾಜಿಕ ಚಿಂತಕ , ನಿವೃತ್ತ ಪ್ರಾಧ್ಯಾಪಕ.