ಮಂಡ್ಯ ವಿವಿ ಮುಚ್ಚುವ ಹುನ್ನಾರ ಬೇಡ: ಡಾ.ನಿಂಗರಾಜ್‌ಗೌಡ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಯಾವುದೇ ವಿಶ್ವವಿದ್ಯಾನಿಲಯ ಆರಂಭವಾದಾಗ ಮೂಲಸೌಕರ್ಯ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಕೊರತೆ ಎದುರಿಸುವುದು ಸಾಮಾನ್ಯ. ಅದನ್ನೇ ಗುರಿಯಾಗಿಸಿಕೊಂಡು ವಿಶ್ವ ವಿದ್ಯಾನಿಲಯ ಮುಚ್ಚುವುದು ಬೇಡ. ಬದಲಾಗಿ ಖಾಲಿ ಇರುವ ಎಲ್ಲಾ ಬೋಧಕೇತರ, ಬೋಧಕ, ಪ್ರಾಧ್ಯಾಪಕ ಹುದ್ದೆಗಳಿಗೆ ಕೂಡಲೇ ನೇಮಕ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುವುದಕ್ಕೆ ಸರ್ಕಾರ ಹುನ್ನಾರ ನಡೆಸುತ್ತಿದೆ. ವಿಶ್ವವಿದ್ಯಾಲಯವನ್ನು ಉಳಿಸಿ ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಸರ್ಕಾರ ಕಟಿಬದ್ಧವಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಒತ್ತಾಯಿಸಿದರು.

ಭಾನುವಾರ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಸಾಹಿತಿ ದೇಶಹಳ್ಳಿ ಮಾದಯ್ಯ ಸ್ಮರಣಾರ್ಥ ೧೧ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ವಿಶ್ವವಿದ್ಯಾನಿಲಯ ಆರಂಭವಾದಾಗ ಮೂಲಸೌಕರ್ಯ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಕೊರತೆ ಎದುರಿಸುವುದು ಸಾಮಾನ್ಯ. ಅದನ್ನೇ ಗುರಿಯಾಗಿಸಿಕೊಂಡು ವಿಶ್ವ ವಿದ್ಯಾನಿಲಯ ಮುಚ್ಚುವುದು ಬೇಡ. ಬದಲಾಗಿ ಖಾಲಿ ಇರುವ ಎಲ್ಲಾ ಬೋಧಕೇತರ, ಬೋಧಕ, ಪ್ರಾಧ್ಯಾಪಕ ಹುದ್ದೆಗಳಿಗೆ ಕೂಡಲೇ ನೇಮಕ ಮಾಡಿಕೊಳ್ಳಬೇಕು ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕು. ಎಲ್ಲಾ ಸರ್ಕಾರಿ ವಿಶ್ವವಿದ್ಯಾನಿಲಯಗಳಿಗೆ ತಲಾ ೧೦೦ ಕೋಟಿ ರು. ವಿಶೇಷ ಅನುದಾನವನ್ನು ಕೂಡಲೇ ನೀಡಬೇಕು. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸರ್ಕಾರ ವಿಶ್ವವಿದ್ಯಾಲಯವನ್ನು ಉಳಿಸಬೇಕೆಂದು ಮನವಿ ಮಾಡಿದರು.

ಆಧ್ಯಾತ್ಮಿಕ ವಿಚಾರದಲ್ಲಿ ಭಾರತ ಈ ಹಿಂದೆಯೇ ವಿಶ್ವಗುರು ಆಗಿತ್ತು. ಇದೀಗ ಅದೇ ದಾರಿಯಲ್ಲಿ ನಮ್ಮ ದೇಶ ಮತ್ತೊಮ್ಮೆ ಮುನ್ನಡೆಯುತ್ತಿದೆ. ಅದಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳವೇ ಸಾಕ್ಷಿಯಾಗಿದೆ. ಕುಂಭಮೇಳದಲ್ಲಿ ೬೬ ಕೋಟಿ ಜನ ಪುಣ್ಯಸ್ನಾನ ಮಾಡಿದ್ದು, ಇದು ಆಧ್ಯಾತ್ಮದಲ್ಲಿ ಭಾರತ ವಿಶ್ವಗುರುವಾಗಿರುವುದನ್ನು ತೋರಿಸುತ್ತದೆ ಎಂದು ನುಡಿದರು.

ಹೊಸವರ್ಷಾಚರಣೆ ಹೆಸರಲ್ಲಿ ಕೆಲವರು ಮೋಜು, ಮಸ್ತಿ ಮಾಡುತ್ತಾರೆ. ಈ ವೇಳೆ ಅನೇಕ ಲೈಂಗಿಕ ದೌರ್ಜನ್ಯ ಹಾಗೂ ಅಪರಾಧ ಚಟುವಟಿಕೆಗೆ ಕಾರಣವಾಗುತ್ತದೆ. ಆದರೆ, ಕುಂಭಮೇಳದಲ್ಲಿ ಇಂತಹ ಒಂದು ಲೈಂಗಿಕ ದೌರ್ಜನ್ಯ ಅಥವಾ ಅಪರಾಧ ಚಟುವಟಿಕೆ ನಡೆಯಲಿಲ್ಲ. ಇದು ಆಧ್ಯಾತ್ಮಿಕತೆಗೆ ಇರುವ ಶಕ್ತಿ ಎಂದರು.

ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜಿಲ್ಲೆ ಆಗಿದ್ದು, ಈ ನಿಟ್ಟಿನಲ್ಲಿ ವಿವಿ ಉಳಿಸಲು ಸರ್ಕಾರ ಮುಂದಾಗಲಿ ಎಂದು ಮನವಿ ಮಾಡಿದರು.

ಪ್ರಾಧ್ಯಾಪಕ ಡಾ.ಎಚ್.ಎಂ.ನಾಗೇಶ್ ಮಾತನಾಡಿ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಡಬಾರದು. ಅಗತ್ಯವೆನಿಸಿದರೆ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು. ಸಿ ಮತ್ತು ಡಿ ದರ್ಜೆ ಉದ್ಯೋಗಳಲ್ಲಿ ಶೇ.೧೦೦ ರಷ್ಟನ್ನು ಕನ್ನಡಿಗರಿಗೆ ಮೀಸಲಿಡಬೇಕು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಬೇಕು. ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ

ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಾಲಿಂಗು, ಕೆ.ಎಚ್.ಮಂಜುನಾಥ್, ಎಚ್.ಟಿ.ದೇವರಾಜು, ಪ್ರಕಾಶ್, ಪುರುಷೋತ್ತಮ್, ಎನ್.ಬಸವರಾಜು, ಉಮಾಶಂಕರ್, ಹಿರೇನೆಲ್ಲೂರು ಶಿವು, ಚಿನ್ಮಯಿಗೌಡ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ, ಚಲನಚಿತ್ರ ನಿರ್ದೇಶಕ ಓಂಕಾರ್ ಪುರುಷೋತ್ತಮ್, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪದಾಧಿಕಾರಿಗಳಾದ ಮಂಗಲ ಶಿವಣ್ಣ, ಅರಸಯ್ಯ, ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು.

Share this article