ಕಳಪೆ ಗುಣಮಟ್ಟ, ಅವೈಜ್ಞಾನಿಕ ಕಾಮಗಾರಿ ಬೇಡ

KannadaprabhaNewsNetwork | Updated : Jun 22 2024, 12:52 AM IST

ಸಾರಾಂಶ

ಮುಂಗಾರು ಮಳೆ ಪ್ರಾರಂಭವಾಗಿದೆ. ಕೆರೆ, ಹಳ್ಳಗಳಲ್ಲಿನ ನೀರಿನ ಹರಿವಿನ ಬಗ್ಗೆ ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು. ಪ್ರವಾಹದಿಂದ ಅಥವಾ ಕೆರೆಗಳ ಒಡ್ಡು ಒಡೆದು ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಧಾರವಾಡ:

ನಿಗದಿತ ಅವಧಿಯೊಳಗೆ ಸರ್ಕಾರದ ಇಲಾಖೆಗಳ ಎಲ್ಲ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು. ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ, ಹೆಚ್ಚುವರಿ ವೆಚ್ಚ, ಅವೈಜ್ಞಾನಿಕವಾಗಿ ಅನುಷ್ಠಾನ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾಮಟ್ಟದ ಎಲ್ಲ ಇಲಾಖೆ, ನಿಗಮ, ಮಂಡಳಿಗಳ ಅಧಿಕಾರಿಗಳ ಸಭೆ ಜರುಗಿಸಿದ ಅವರು, ಇಲಾಖೆಗಳಿಗೆ ಹಂಚಿಕೆ ಆಗಿರುವ ಅನುದಾನ ಮರಳಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಂಚಿಕೆಯಾದ ಅನುದಾನ ಪೂರ್ಣವಾಗಿ ಬಳಸುವ ಮೂಲಕ ನೀಡಿರುವ ಗುರಿಯೊಂದಿಗೆ, ಗುಣಮಟ್ಟದ ಅಭಿವೃದ್ಧಿ ಸಾಧಿಸಬೇಕೆಂದರು.

ಮುಂಗಾರು ಮಳೆ ಪ್ರಾರಂಭವಾಗಿದೆ. ಕೆರೆ, ಹಳ್ಳಗಳಲ್ಲಿನ ನೀರಿನ ಹರಿವಿನ ಬಗ್ಗೆ ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು. ಪ್ರವಾಹದಿಂದ ಅಥವಾ ಕೆರೆಗಳ ಒಡ್ಡು ಒಡೆದು ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಸರ್ಕಾರದ ಆಶಯದಂತೆ ಸಮೃದ್ಧ, ಸಮಗ್ರ ರಾಜ್ಯದ ಅಭಿವೃದ್ಧಿಗಾಗಿ ಎಲ್ಲ ಇಲಾಖೆಗಳು, ತಮಗೆ ನೀಡಿದ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಅನುಷ್ಠಾನಗೊಳಿಸಬೇಕು ಎಂದ ಅವರು, ಶಾಲಾ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಆಹಾರ, ಕುಡಿಯುವ ನೀರು ಮತ್ತು ನೈರ್ಮಲ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,‌ ಲೋಕೊಪಯೋಗಿ ಸೇರಿದಂತೆ ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ನಿಗದಿತ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಗೆ ಕ್ರಮವಹಿಸಲಾಗಿದೆ. ಕೆರೆಗಳ ಸಮೀಕ್ಷೆ ಮಾಡಲಾಗಿದ್ದು, ಅಳತೆ ಗುರುತು ಮಾಡಿರುವ ಕೆಲವು ಕೆರೆಗಳಲ್ಲಿ ಮತ್ತೆ ಕೆಲವರು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ಲ್ಯಾಂಡ್ ಬಿಟ್ ವ್ಯವಸ್ಥೆಗೆ ಅಳವಡಿಸಿ ಮತ್ತೆ ಒತ್ತುವರಿ ಆಗಂದಂತೆ ಎಚ್ಚರ ವಹಿಸಲಾಗಿದೆ. ಸಿಎಸ್ಆರ್ ನಿಧಿಯಲ್ಲಿ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ಕೊಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಚೆಗೆ ಮನಸೂರ ಗ್ರಾಮ ವ್ಯಾಪ್ತಿಯ ಕ್ವಾರಿಯಲ್ಲಿ ಇಜಲು ಹೋಗಿದ್ದ ಎರಡು ಮಕ್ಕಳು ನೀರಿನಲ್ಲಿ ಮುಳಗಿ, ಸಾವೀಗಿಡಾದ ಘಟನೆ ಜರುಗಿದೆ. ಕ್ವಾರಿಯ ಸುತ್ತಲೂ ತಡೆಗೊಡೆ ನಿರ್ಮಿಸಿ, ಯಾವುದೇ ಪ್ರಾಣ ಹಾನಿ ಆಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಕ್ವಾರಿ ಮಾಲೀಕರಿಗೆ ನಿರ್ದೇಶಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕ್ವಾರಿಗಳನ್ನು ಸಮೀಕ್ಷೆ ಮಾಡಿ, ತಡೆಗೋಡೆ, ಸುರಕ್ಷತಾ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಪಂ ಯೋಜನಾಧಿಕಾರಿ ದೀಪಕ ಮಡಿವಾಳರ ವಂದಿಸಿದರು. ಜಿಪಂ ಉಪ ಕಾರ್ಯರ್ಶಿ ಬಿ‌.ಎಸ್. ಮೂಗನೂರಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಡಿಪಿಐ ಎಸ್.ಎಸ್. ಕೆಳದಿಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ, ಗ್ರಾಮೀಣ ಕುಡಿಯುವ ನೀರಿನ ಕಾರ್ಯಪಾಲಕ ಎಂಜಿನಿಯರ್ ಆರ್.ಎಂ. ಸೊಪ್ಪಿಮಠ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.

ಸಮಾರಂಭಕ್ಕೂ ಮುಂಚೆ ದೀಪಾ ಚೋಳನ್ ಅವರು ಹುಬ್ಬಳಿಯ ಸ್ಮಾರ್ಟ್‌ಸಿಟಿ ಕಾಮಗಾರಿಗಳಾದ ಚಿಟಗುಪ್ಪಿ ಆಸ್ಪತ್ರೆ, ಜನತಾ ಬಜಾರ, ಉಣಕಲ್ಲ ಹತ್ತಿರದ ವಾಣಿ ವಿಲಾಸ ಜಂಕ್ಷಣ ಸಮೀಪದ ಮನೆಗಳ ನಿರ್ಮಾಣ ಕಾಮಗಾರಿ, ಚಿಕ್ಕಮಠ ಶಾಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಮಧ್ಯಾಹ್ನ ಸಭೆಯ ನಂತರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಉದಯ ಹಾಸ್ಟೆಲ್ ಹತ್ತಿರದ ನೂತನ ವಿದ್ಯಾರ್ಥಿ ವಸತಿನಿಲಯದ ಕಾಮಗಾರಿ ಪರಿಶೀಲಿಸಿದರು.

Share this article