ಕನ್ನಡಪ್ರಭ ವಾರ್ತೆ ಬೆಳಗಾವಿ
ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘ, ಸಂಸ್ಥೆ ಮತ್ತು ಸಂಘಟನೆಗಳನ್ನು ನಿಷೇಧ ಮಾಡುವ ಪ್ರಸ್ತಾವ, ಚಿಂತನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸ್ಪಷ್ಟಪಡಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಘಟನೆ ನಿಷೇಧದ ಕುರಿತು ಬಿ.ಕೆ.ಹರಿಪ್ರಸಾದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ನೀವು ಅವರನ್ನೇ ಕೇಳಬೇಕು. ಆರ್‌ಎಸ್‌ಎಸ್ ನಿಷೇಧದ ಕುರಿತು ಸರ್ಕಾರದ ಮುಂದೆ ಯಾವುದೇ ಚಿಂತನೆ ಇಲ್ಲ ಎಂದರು.
ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಪದ್ಧತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿದ್ಧತೆ ಕೈಗೊಳ್ಳಲಾಗುವುದು. ಔಪಚಾರಿಕ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೇ ಇನ್ನೂ ದಿನಾಂಕ ಕೂಡ ನಿಗದಿ ಆಗಿಲ್ಲ. ಆದರೆ, ಪದ್ಧತಿಯಂತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡುವುದು ಸರ್ಕಾರದ ಚಿಂತನೆ ಆಗಿದೆ ಎಂದು ಹೇಳಿದರು.ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿಯನ್ನು ಗೌರವಿಸುತ್ತ, ಕರ್ನಾಟಕ ಏಕೀಕರಣ ಆಗಿರುವುದನ್ನು ವೈಭವದಿಂದ ಆಚರಣೆ ಮಾಡುವುದು ಕರ್ನಾಟಕದಲ್ಲಿರುವ ಎಲ್ಲರ ಕರ್ತವ್ಯವಾಗಿದೆ. ಆ ಕೆಲಸವನ್ನು ದಯವಿಟ್ಟು ಎಲ್ಲರೂ ಮಾಡಬೇಕು. ಅವತ್ತು ಭುವನವೇಶ್ವರಿ ದೇವಿಯ ಮೆರವಣಿಗೆ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು. ಈ ಬಾರಿ ಎಂಇಎಸ್ ಕರಾಳ ದಿನ ಆಚರಣೆ ಮಾಡಿದರೆ ಈ ಕುರಿತು ಜಿಲ್ಲಾಡಳಿತವೇ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಸಂಪುಟ ಸಭೆ ತೀರ್ಮಾನ:ಈಗಾಗಲೇ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ನೀಡಲು ಮಾರ್ಗಸೂಚಿಗೆ ಸಚಿವ ಸಂಪುಟ ಸಭೆಯು ಅ.16 ರಂದು ಅನುಮೋದನೆ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಿ ಸ್ಥಳಗಳು, ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸಂಘಟನೆಯು ಶಾಖೆ, ಸಾಂಘಿಕ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲೆಗಳ ಮೈದಾನಗಳ ಸದ್ಬಳಕೆ ಮಾಡುವ ಸಂಬಂಧ ಸ್ಪಷ್ಟ ನೀತಿ ನಿಯಮಗಳನ್ನು ಒಳಗೊಂಡ ವಿಸ್ತೃತ ಸರ್ಕಾರಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.